ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ವೀರ್ಯಪರೀಕ್ಷೆಗೆ ‘ಯೊ’

Last Updated 4 ಮೇ 2018, 19:30 IST
ಅಕ್ಷರ ಗಾತ್ರ

ಸಂತಾನಹೀನತೆ ಸಮಸ್ಯೆ ಹೆಚ್ಚಳವಾಗುತ್ತಿರುವ ಈ ದಿನಗಳಲ್ಲಿ ಅದರ ಮೂಲಕಾರಣವನ್ನು ಸುಲಭ ಹಾಗೂ ನಿಖರವಾಗಿ ಕಂಡುಕೊಳ್ಳುವುದೂ ಮುಖ್ಯ. ಇದೇ ಕಾರಣದೊಂದಿಗೆ, ವೀರ್ಯ ವಿಶ್ಲೇಷಣೆಗೆ ನೆರವಾಗುವ ಸಾಧನವೊಂದು ಪರಿಚಿತವಾಗಿದೆ. ಅದೇ ‘ಯೊ’ (YO®).

ಪುರುಷಸಂಬಂಧಿ ಸಂತಾನಹೀನತೆಯ ಸಮಸ್ಯೆಯನ್ನು ಕಂಡುಕೊಳ್ಳುವಲ್ಲಿ ವೀರ್ಯದ ವಿಶ್ಲೇಷಣೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದರೆ ಆ ವಿಶ್ಲೇಷಣೆಗೆ ಸುಲಭ ದಾರಿ ಯಾವುದಿದೆ? ಸಮಸ್ಯೆ ಇದೆಯೇ – ಎಂದು ಕಂಡುಕೊಳ್ಳುವುದಕ್ಕೂ ವೈದ್ಯರ ಬಳಿಯೇ ಹೋಗಬೇಕು.

ಆದರೆ ಈಗ ಹಾಗಿಲ್ಲ. ಮನೆಯಲ್ಲೇ ಪುರುಷರು ಖುದ್ದು ವಿಶ್ಲೇಷಣೆ ಮಾಡಿಕೊಳ್ಳಬಹುದು. ಇದಕ್ಕೆಂದೇ, ಲಾಸ್ ಏಂಜಲೀಸ್ ಮೂಲದ ತಂತ್ರಜ್ಞಾನ ಕಂಪನಿ ‘ಮೆಡಿಕಲ್ ಎಲೆಕ್ಟ್ರಾನಿಕ್ ಸಿಸ್ಟಮ್’ (ಎಂಇಎಸ್) ಮನೆಯಲ್ಲೇ ವೀರ್ಯಪರೀಕ್ಷೆ ಮಾಡಿಕೊಳ್ಳುವ ಸಾಧನ - ಯೊ ಅನ್ನು ಪರಿಚಿತಗೊಳಿಸಿದೆ.

ಕಳಪೆ ಜೀವನಶೈಲಿ, ಮಾಲಿನ್ಯ, ವಯಸ್ಸು – ಇಂಥ ಹಲವಾರು ಕಾರಣಗಳಿಂದ ಭಾರತದಲ್ಲಿ ಸಂತಾನಹೀನತೆ ಸಮಸ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜೊತೆಗೆ, ಸಂತಾನಹೀನತೆ ಸಮಸ್ಯೆಗೆ ಸಂಬಂಧಿಸಿದ ಯಾವುದೇ ವಿಚಾರವನ್ನೂ ಮಹಿಳೆಯ ಆರೋಗ್ಯದ ದೃಷ್ಟಿಯಿಂದಲೇ ನೋಡಲಾಗುವುದಲ್ಲದೇ ಅದರೆಡೆಗೇ ಲಕ್ಷ್ಯ ನೀಡಲಾಗುತ್ತಿತ್ತು.

ಸಂತಾನಹೀನತೆಯ ಸಮಸ್ಯೆಯಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರದ್ದೂ ಒಂದೇ ಪ್ರಮಾಣ. ಅಂದಾಜು ಶೇ 40ರಷ್ಟು ಸಮಸ್ಯೆ ಮಹಿಳೆಯರದ್ದಾಗಿದ್ದರೆ, ಶೇ 40ರಷ್ಟು ಪುರುಷರದ್ದು. ಉಳಿದ ಶೇ 20 ಇವೆರಡೂ ವರ್ಗಕ್ಕೆ ಅನ್ವಯಿಸುವ ಸಮಸ್ಯೆ. ಹೀಗಿದ್ದರೂ, ಸಮಸ್ಯೆ ಎಂದ ಕೂಡಲೇ ಎಷ್ಟೋ ಬಾರಿ ಮೊದಲು ಗಮನ ಹರಿಸುವುದು ಮಹಿಳೆಯರೆಡೆಗೇ! ದಂಪತಿಯಲ್ಲಿ, ಸಮಸ್ಯೆಗೆ ಸಂಬಂಧಿಸಿದಂತೆ ಪತ್ನಿಗೆ ಪೂರ್ಣಪರೀಕ್ಷೆ ನಡೆಸಿದ ನಂತರ, ಏನೂ ಸಮಸ್ಯೆಯಿಲ್ಲ ಎಂದು ಖಾತ್ರಿಯಾದ ಮೇಲಷ್ಟೇ ಪತಿಯೆಡೆಗೆ ಗಮನ ಹೊರಳುವುದು. ಈ ಪ್ರಕ್ರಿಯೆಯಲ್ಲಿ ಇನ್ನಷ್ಟು ವರ್ಷಗಳೇ ಕಳೆದುಹೋಗಬಹುದು. ತಡವಾದಷ್ಟೂ ಮಗುವನ್ನು ಪಡೆಯುವ ಸಾಧ್ಯತೆಯೂ ಕುಗ್ಗುತ್ತಾ ಆತಂಕವನ್ನೂ ತಂದೊಡ್ಡಬಹುದು.

ಆದರೆ ಇತ್ತೀಚೆಗೆ ಈ ದೃಷ್ಟಿಕೋನದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. ಪುರುಷಸಂಬಂಧಿ ಸಮಸ್ಯೆಗಳೆಡೆಗೂ ಬೆಳಕು ಚೆಲ್ಲಲಾಗುತ್ತಿದೆ. ಈ ಕುರಿತು ಈಗೀಗ ಜಾಗೃತಿಯೂ ಮೂಡುತ್ತಿದೆ. ಅದಕ್ಕೆ ಈ ಸಾಧನವೂ ಒಂದು ಉದಾಹರಣೆಯಾಗಬಲ್ಲದು.

ಭಾರತದಲ್ಲಿ ಇಂಥ ಪ್ರಯತ್ನ ಇದೇ ಮೊದಲು. ವೀರ್ಯಪರೀಕ್ಷೆಗೆ ಸ್ಮಾರ್ಟ್‍ಫೋನ್ ವೇದಿಕೆಯಾಗಿದ್ದು, ಚಲನಶೀಲ ವೀರ್ಯದ ಸಂಖ್ಯೆಯನ್ನು ಅಳತೆ ಮಾಡಿ ವಿಡಿಯೊ ಮೂಲಕ ಫಲಿತಾಂಶವನ್ನು ಕಂಡುಕೊಳ್ಳಬಹುದು. ಶೇ 97ರಷ್ಟು ನಿಖರತೆಯೊಂದಿಗೆ, ಪರೀಕ್ಷಾ ಪ್ರಕ್ರಿಯೆಯೂ ಸುಲಭವಾಗಿದೆ. ಸ್ಮಾರ್ಟ್‍ಫೋನ್ ಮೂಲಕವೇ ವೀರ್ಯದ ಮಾದರಿಯ ಫಲಿತಾಂಶವನ್ನು ಕಂಡುಕೊಳ್ಳಬಹುದು.

ವೀರ್ಯಪರೀಕ್ಷಾ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹಾಗೂ ಒತ್ತಡದ ವಾತಾವರಣದಿಂದ ಹೊರಗೆ ತರಲೆಂದೇ ಈ ಸಾಧನವನ್ನು ರೂಪಿಸಲಾಗಿದೆ. ನಿಖರವಾಗಿ, ಖಾಸಗಿಯಾಗಿ ಪರೀಕ್ಷೆ ನಡೆಸಿ, ಫಲಿತಾಂಶವನ್ನು ಸ್ವತಃ ಕಂಡು ಸೂಕ್ತ ಸಾಕ್ಷ್ಯಗಳೊಂದಿಗೆ ವೈದ್ಯರ ಬಳಿ ಹೋಗಲು ನೆರವಾಗುತ್ತದೆ.

ಭಾರತದಲ್ಲಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಈ ಸಾಧನದಿಂದ ಬದಲಾವಣೆ ಉಂಟಾಗುವ ಲಕ್ಷಣಗಳು ಕಾಣುತ್ತಿವೆ. ಬೆಳೆಯುತ್ತಿರುವ ಸಂತಾನಹೀನತೆ ಸಮಸ್ಯೆಗೆ ಇದರ ಅವಶ್ಯಕತೆಯೂ ಹೆಚ್ಚೇ ಇದೆ ಎನ್ನಿ. ಈ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ. ಮಕ್ಕಳನ್ನು ಪಡೆಯಲು ಹಂಬಲಿಸುವ ಎಷ್ಟೋ ಮಂದಿಗೆ ಈ ಪರೀಕ್ಷೆ ಸುಲಭದ ಹಾದಿ ಒದಗಿಸಿಕೊಡುವಲ್ಲಿ ಎರಡು ಮಾತಿಲ್ಲ.

ಕಿಟ್‍ನಲ್ಲಿ ಏನೇನಿದೆ
ಇದು www.yospermtest.com ಅಥವಾ ಅಮೆಜಾನ್‍ನಲ್ಲಿ ಸಿಗಲಿದೆ. ಬೆಲೆ ₹ 2000. ವೀರ್ಯ ಪರೀಕ್ಷೆಗೆ ಸರಳವಾಗಿಸಲು ಹಂತ ಹಂತವಾದ ಆಪ್‍ಗಳಿವೆ. ಗೂಗಲ್ ಪ್ಲೇ ಅಥವಾ ಆ್ಯಪ್‌ ಸ್ಟೋರ್‌ನಲ್ಲಿ ಇದನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ಯೊ ಕ್ಲಿಪ್ (ಮಿನಿ ಮೈಕ್ರೊಸ್ಕೋಪ್) ಅನ್ನು ಕಿಟ್‍ನಲ್ಲಿ ನೀಡಲಾಗಿದ್ದು, ಇದರಿಂದ ವೀರ್ಯದ ಮಾದರಿಯ ಎರಡು ಪರೀಕ್ಷೆಯನ್ನು ಸ್ಮಾರ್ಟ್‍ಫೋನ್ ಮೂಲಕ ನಡೆಸಬಹುದಾಗಿದೆ. ಇದರೊಂದಿಗೆ ಸುಲಭವಾಗಿ ಅರ್ಥೈಸಿಕೊಳ್ಳಲು ಅನುಕೂಲವಾಗುವ ‘ಇಂಟೆರಾಕ್ಟಿವ್ ಸ್ಕ್ರೀನ್’ ಆಪ್‍ನಲ್ಲಿ ಲಭ್ಯ. ಕೆಲವೇ ನಿಮಿಷಗಳಲ್ಲಿ ಫಲಿತಾಂಶ ವಿಡಿಯೊದೊಂದಿಗೆ ಲಭ್ಯ.

ಮೊದಲು ಕಿಟ್‍ನಲ್ಲಿ ನೀಡಲಾದ ಕಂಟೇನರ್‌ನಲ್ಲಿ ವೀರ್ಯದ ಮಾದರಿಯನ್ನು ತೆಗೆದುಕೊಳ್ಳಬೇಕು. ನಂತರ ಅದಕ್ಕೆ ಅದರಲ್ಲಿ ನೀಡಲಾದ ಪುಡಿಯನ್ನು ಬೆರೆಸಿ ಹತ್ತರಿಂದ ಹದಿನೈದು ಸೆಕೆಂಡುಗಳ ಕಾಲ ನಿಧಾನವಾಗಿ ಕಲಕಬೇಕು. ನಿಮ್ಮ ಫೋನ್‍ಗೆ ಕೇಸ್ ಇದ್ದರೆ ಅದನ್ನು ತೆಗೆದಿಟ್ಟು ಯೊ ಕ್ಲಿಪ್ ಅನ್ನು ಫೋನಿನ ಮೇಲ್ಭಾಗಕ್ಕೆ ಅಳವಡಿಸಬೇಕು. ಅದರೊಂದಿಗೆ ನೀಡಲಾದ ಪಿಪೆಟ್ (ದ್ರವ ಪದಾರ್ಥಗಳನ್ನು ಅಳೆಯುವುದಕ್ಕೆ ಬಳಸುವ ಸಾಧನ) ಮೇಲ್ಮುಖವಾಗಿ ಇಟ್ಟು, ಅದನ್ನು ಒತ್ತಿದರೆ ವೀರ್ಯವನ್ನು ಹಾಕಬೇಕಾದ ಸ್ಥಳವು ತೆರೆದುಕೊಳ್ಳುತ್ತದೆ. ಅದರಲ್ಲಿ ವೀರ್ಯವನ್ನು ತುಂಬಿಸಿ, ಕ್ಲಿಪ್ ಅಳವಡಿಸಿ ಸ್ಟಾರ್ಟ್ ಬಟನ್ ಒತ್ತಿದರೆ, ಸಾಧನವು ವೀರ್ಯವನ್ನು ವಿಶ್ಲೇಷಿಸಿ, ವಿಡಿಯೊ ಮೂಲಕ ಫಲಿತಾಂಶವನ್ನು ನೀಡುತ್ತದೆ.

ಸಹಜ ಗರ್ಭಧಾರಣೆಯಲ್ಲಿ, ಅಂಡಾಣು
ವನ್ನು ಫಲಿಸಲು ಚಲನಶೀಲ ವೀರ್ಯದ ಅವಶ್ಯಕತೆ ಇರುವುದರಿಂದ ಚಲನಶೀಲ ವೀರ್ಯದ ಪ್ರಮಾಣವನ್ನು ಕಂಡುಕೊಳ್ಳುವಲ್ಲಿ ಈ ಪರೀಕ್ಷೆ ಸಹಕಾರಿ. ಇದರೊಂದಿಗೆ, ಅಸಹಜ ವೀರ್ಯ, ಕಡಿಮೆ ಗುಣಮಟ್ಟದ ವೀರ್ಯ – ಇಂಥ ಸಮಸ್ಯೆಗಳನ್ನೂ ಗುರುತಿಸಲು ನೆರವಾಗುತ್ತದೆ. ಸ್ಮಾರ್ಟ್ ಟ್ರ್ಯಾಕ್ ಕೂಡ ಇದ್ದು, ಜೀವನಶೈಲಿಯ ಬದಲಾವಣೆಗಳಿಂದ ವೀರ್ಯದ ಪ್ರಮಾಣದಲ್ಲಿ ಆದ ಪರಿವರ್ತನೆಯನ್ನೂ ಗಮನಿಸಬಹುದು. ನಿಖರ ಕಾರಣ, ಪರೀಕ್ಷೆಯೊಂದಿಗೆ ವೈದ್ಯರ ಬಳಿ ಹೋಗಿ ಸಲಹೆ ತೆಗೆದುಕೊಂಡರೆ ಸಮಸ್ಯೆಗೆ ಪರಿಹಾರದ ದಾರಿಯೂ ತೆರೆದುಕೊಳ್ಳುತ್ತದೆ. ಮೂಲ ಸಮಸ್ಯೆಯನ್ನು ಕಂಡುಕೊಳ್ಳಲು ಬೇರೆ ಬೇರೆ ಪರೀಕ್ಷೆಗಳನ್ನು ನಡೆಸುವುದನ್ನು ತಪ್ಪಿಸುತ್ತದೆ. ಅನಗತ್ಯ ಸಮಯ ಹಾನಿ, ಒತ್ತಡವೂ ದೂರವಾಗುತ್ತದೆ.

‘ಯೊ’ ಸಾಧನದ ಕಾರ್ಯವೈಖರಿಯನ್ನು ನೋಡಲು ಈ ಕೊಂಡಿಯನ್ನು ಬಳಸಿ: https://bit.ly/2FCUgoP (ಮುಂದುವರಿಯುವುದು)

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT