ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾ ರಥ ಯಾತ್ರೆಗೆ ಪಶ್ಚಿಮ ಬಂಗಾಳ ತಡೆ: ಜನವರಿ 9ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್‌

Last Updated 7 ಡಿಸೆಂಬರ್ 2018, 1:11 IST
ಅಕ್ಷರ ಗಾತ್ರ

ಕೋಲ್ಕತ್ತ: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರುಕೂಚ್ ಬಿಹಾರ್‌ನಿಂದ ಡಿಸೆಂಬರ್‌ 7ರಿಂದ ಹಮ್ಮಿಕೊಂಡಿರುವ ರಥ ಯಾತ್ರೆಗೆ ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿದೆ.

ಕಲ್ಕತ್ತಾ ಹೈಕೋರ್ಟ್‌ ಕೂಡ ರಥ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿದೆ. ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿರುವ ಕೋರ್ಟ್‌, ಆವರೆಗೂ ಯಾತ್ರೆ ನಡೆಸುವಂತಿಲ್ಲ ಎಂದು ಆದೇಶಿಸಿದೆ. ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಅನುಮತಿ ನಿರಾಕರಿಸಲಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ಕಿಶೋರ್‌ ದತ್ತಾ ಕಲ್ಕತ್ತಾ ಹೈಕೋರ್ಟ್‌ಗೆ ಗುರುವಾರ ತಿಳಿಸಿದರು.

‘ಪ್ರಜಾಪ್ರಭುತ್ವ ಉಳಿಸಿ’ ಎಂಬ ಘೋಷಣೆಯೊಂದಿಗೆ ಶಾ ಅವರ ರಥ ಯಾತ್ರೆಗೆ ಶುಕ್ರವಾರ ಚಾಲನೆ ನೀಡಬೇಕಿತ್ತು.

‘ಈ ಜಿಲ್ಲೆಯಲ್ಲಿ ಸಾಕಷ್ಟು ಬಾರಿ ಕೋಮು ಸಂಘರ್ಷ ನಡೆದಿದೆ. ಪ್ರಚೋದನಕಾರರು ಮತ್ತು ಗೂಂಡಾಗಳು ಮತ್ತೆ ಸಕ್ರಿಯರಾಗಿದ್ದಾರೆ ಎಂಬ ಮಾಹಿತಿ ಇದೆ. ಪೊಲೀಸ್‌ ವರಿಷ್ಠಾಧಿಕಾರಿಗಳು ಅನುಮತಿ ನಿರಾಕರಿಸಿ ನೀಡಿರುವ ಪತ್ರದಲ್ಲೂ ಈ ಬಗ್ಗೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಥ ಯಾತ್ರೆಗೆ ಅನುಮತಿ ನಿರಾಕರಿಸಲಾಗಿದೆ’ ಎಂದು ದತ್ತಾ ಅವರು ಕೋರ್ಟ್‌ಗೆ ಸರ್ಕಾರದ ನಿಲುವು ವಿವರಿಸಿದರು.

‘ತಾಕತ್ತಿದ್ದರೆ ರ‍್ಯಾಲಿ ತಡೆಯಲಿ’

ಕೂಚ್‌ಬಿಹಾರ್‌: ‘ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸರ್ಕಾರ ವಿರೋಧ ಪಕ್ಷದ ಧ್ವನಿ ಅಡಗಿಸಲು ಮುಂದಾಗಿದೆ. ತಾಕತ್ತಿದ್ದರೆ ರಥ ಯಾತ್ರೆಯನ್ನು ತಡೆಯಲಿ’ ಎಂದು ಬಿಜೆಪಿ ಪಶ್ಚಿಮ ಬಂಗಾಳ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಸವಾಲು ಹಾಕಿದ್ದಾರೆ.

‘ನಮಗೆ ಅನುಮತಿ ಸಿಗುವುದಿಲ್ಲ ಎಂಬುದು ಹಿಂದಿನ ಅನುಭವಗಳಿಂದ ಗೊತ್ತಿತ್ತು. ಅದಕ್ಕಾಗಿಯೇ ಒಂದು ತಿಂಗಳು ಮುಂಚೆಯೇ ಪೊಲೀಸ್‌ ಇಲಾಖೆಯ ಅನುಮತಿಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಇಷ್ಟು ದಿನ ಸುಮ್ಮನಿದ್ದ ಸರ್ಕಾರ, ಕೊನೆ ಗಳಿಗೆಯಲ್ಲಿ ಅನುಮತಿ ನಿರಾಕರಿಸಿದೆ’ ಎಂದು ಆಪಾದಿಸಿದರು. ‘ನಮ್ಮ ರ‍್ಯಾಲಿ ತಡೆಯಲು ಅವರ‍್ಯಾರು? ಈ ವಿಷಯದ ಬಗ್ಗೆ ಗೊಂದಲ ಸೃಷ್ಟಿಸಿ, ಅಹಿತಕರ ಪರಿಸ್ಥಿತಿ ಉಂಟು ಮಾಡಿ ಆ ಆರೋಪವನ್ನು ನಮ್ಮ ಮೇಲೆ ಹಾಕುವುದುಟಿಎಂಸಿ ಉದ್ದೇಶ. ಆದರೆ, ನಾವು ಅವರ ಬಲೆಗೆ ಬೀಳುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT