ಪೊಲೀಸರು–ಬಿಜೆಪಿ ಕಾರ್ಯಕರ್ತರ ಘರ್ಷಣೆ

ಬುಧವಾರ, ಜೂನ್ 26, 2019
23 °C
ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಘರ್ಷಣೆ: ಇಂದು ಸರ್ವಪಕ್ಷ ಸಭೆ

ಪೊಲೀಸರು–ಬಿಜೆಪಿ ಕಾರ್ಯಕರ್ತರ ಘರ್ಷಣೆ

Published:
Updated:
Prajavani

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಘರ್ಷಣೆಗಳು ಮುಂದುವರಿದಿವೆ. ಪಕ್ಷದ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ಬಿಜೆಪಿಯವರು ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ‍್ಯಾಲಿಯ ವೇಳೆ ಪೊಲೀಸರು ಹಾಗೂ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

ಬೋವಬಜಾರ್‌ ಪ್ರದೇಶಕ್ಕೆ ನುಗ್ಗಿದ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿಗಳನ್ನು ಪ್ರಯೋಗಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ, ಪೊಲೀಸರತ್ತ ಕಲ್ಲು ಹಾಗೂ ಬಾಟಲ್‌ಗಳನ್ನು ಎಸೆದರು. ಕೆಲವು ಕಾರ್ಯಕರ್ತರು ಅದೇ ಪ್ರದೇಶದಲ್ಲಿ ಧರಣಿ ಕುಳಿತರು.

ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿಯ 18 ಸಂಸದರು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹಾಗೂ ಪಕ್ಷದ ಕಾರ್ಯಕರ್ತರು ವೆಲ್ಲಿಂಗ್ಟನ್‌ ಪ್ರದೇಶದಿಂದ ಲಾಲ್‌ಬಜಾರ್‌ನಲ್ಲಿರುವ ಪೊಲೀಸ್ ಮುಖ್ಯ ಕಚೇರಿ
ಯತ್ತ ಬುಧವಾರ ಮೆರವಣಿಗೆ ನಡೆಸಿದರು. ಪಕ್ಷದ ಹಿರಿಯ ಮುಖಂಡರಾದ ಕೈಲಾಷ್ ವಿಜಯವರ್ಗೀಯ ಮತ್ತು ಮುಕುಲ್ ರಾಯ್ ಭಾಗಿಯಾಗಿದ್ದರು. 

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 18 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡ ಬಳಿಕ ಚುನಾವಣೋತ್ತರ ಹಿಂಸಾಚಾರದ ಘಟನೆಗಳು ನಡೆದಿವೆ. ಘಟನೆಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಹೊಣೆ ಎಂದು ಆರೋಪಿಸಿದ್ದ ಮುಕುಲ್ ರಾಯ್, ಎನ್‌ಐಎ ತನಿಖೆಗೆ ಆಗ್ರಹಿಸಿದ್ದರು. ‘ಹಿಂಸಾಚಾರಕ್ಕೆ ಬಿಜೆಪಿ ಪ್ರಚೋದನೆ ನೀಡುತ್ತಿದೆ’ ಎಂದು ಮಮತಾ ಆರೋಪಿಸಿದ್ದರು. 

ಪೊಲೀಸರ ಮೇಲೆ ದಾಳಿ: ರಸ್ತೆ ತಡೆ ತೆರವುಗೊಳಿಸಲು ಯತ್ನಿಸಿದ ಪೊಲೀಸರ ಮೇಲೆ ಬಿಜೆಪಿ ಕಾರ್ಯಕರ್ತರ ಗುಂಪು ಬುಧವಾರ ದಾಳಿ ನಡೆಸಿದೆ ಎಂದು ಪೊಲೀಸರು ಹೇಳಿದ್ದಾರೆ. 

ಬಿರ್‌ಭೂಮ್ ಜಿಲ್ಲೆಯ ಬಂದಾರ್ ಗ್ರಾಮದ ಬಸ್‌ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸುತ್ತಿದ್ದರು. ಗುಂಪು ಚದುರಿಸಲು ಲಾಠಿ ಬೀಸಿದ ಪೊಲೀಸರ ಮೇಲೆಯೇ ಕಾರ್ಯಕರ್ತರು ಪ್ರತಿದಾಳಿ ನಡೆಸಿದರು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. 

‘ಘಟನೆಯಲ್ಲಿ ಪೊಲೀಸರು ಗಾಯಗೊಂಡಿಲ್ಲ. ದಾಳಿ ನಡೆಸಿದ ಐವರುನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮ್ ಸಿಂಗ್ ಹೇಳಿದ್ದಾರೆ. 

ಇಂದು ಸರ್ವಪಕ್ಷ ಸಭೆ: ಚುನಾವಣೋತ್ತರ ಹಿಂಸಾಚಾರಗಳು ಮುಂದುವರಿದಿರುವ ಕಾರಣ, ಪಶ್ಚಿಮ ಬಂಗಾಳದ ರಾಜ್ಯಪಾಲ ಕೆ.ಎನ್. ತ್ರಿಪಾಠಿ ಅವರು ಪ್ರಮುಖ ರಾಜಕೀಯ ಪಕ್ಷಗಳ ಸಭೆ ಕರೆದಿದ್ದಾರೆ. 

ಈ ಬಗ್ಗೆ ರಾಜಕೀಯ ಪಕ್ಷಗಳಿಗೆ ಪತ್ರ ಕಳುಹಿಸಿರುವ ಅವರು, ಗುರುವಾರ ಸಂಜೆ ನಾಲ್ಕು ಗಂಟೆಗೆ ರಾಜಭವನದಲ್ಲಿ ನಡೆಯುವ ಸಭೆಯಲ್ಲಿ ಹಾಜರಾಗುವಂತೆ ತಿಳಿಸಿದ್ದಾರೆ. ರಾಜ್ಯಪಾಲರ ನಿರ್ಧಾರವನ್ನು ಬಂಗಾಳದ ಬಿಜೆಪಿ ಘಟಕ ಸ್ವಾಗತಿಸಿದೆ. 

ಪತ್ರ ಕೈಸೇರಿದ ಬಳಿಕ ಸಭೆಗೆ ಹಾಜರಾಗುವ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ಟಿಎಂಸಿ ಪ್ರತಿಕ್ರಿಯಿಸಿದೆ.

ಬಿಜೆಪಿ–ಟಿಎಂಸಿಗೆ ನೆರವಾದವರ ವಿರುದ್ಧ ಕ್ರಮ

ಲೋಕಸಭಾ ಚುನಾವಣೆಯಲ್ಲಿ ಸಿಪಿಎಂನ ಮತಗಳು ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಹಾಗೂ ಕೆಲವು ಮತಗಳು ಟಿಎಂಸಿ ಕಡೆಗೆ ಹೋಗುವಂತೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನೆರವಾದ ನಾಯಕರನ್ನು ಉಚ್ಚಾಟಿಸಲು ಸಿಪಿಎಂ ಮುಂದಾಗಿದೆ.

‘ನಮ್ಮ ಮತಗಳು ಬಿಜೆಪಿಗೆ ವರ್ಗಾವಣೆಯಾಗಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಭವಿಷ್ಯ ಹಾಳಾಯಿತು. ಟಿಎಂಸಿಯು ಇದನ್ನೇ ಅಸ್ತ್ರವಾಗಿಸಿ ನಮ್ಮ ವಿರುದ್ಧ ಹೋರಾಡುವಂತಾಗಿದೆ. ಆದ್ದರಿಂದ, ಬಿಜೆಪಿ ಅಥವಾ ಟಿಎಂಸಿಯನ್ನು ಬೆಂಬಲಿಸಿದ ಸಿಪಿಎಂ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲು ನಾವು ತೀರ್ಮಾನಿಸಿದ್ದೇವೆ’ ಎಂದು ಪಕ್ಷದ ರಾಜ್ಯ ಸಮಿತಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸಿಪಿಎಂನ ಮತಗಳು ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಹೋಗಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಹೀನಾಯ ಸೋಲು ಕಾಣಬೇಕಾಯಿತು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಈಚೆಗೆ ಒಪ್ಪಿಕೊಂಡಿದ್ದರು.

ಪಕ್ಷವಿರೋಧಿ ಚಟುವಟಿಕೆ ನಡೆಸಿದ ಮುಖಂಡರ ಪಟ್ಟಿಯನ್ನು ತಯಾರಿಸಿ ಕೂಡಲೇ ರಾಜ್ಯ ಸಮಿತಿಗೆ ಸಲ್ಲಿಸುವಂತೆ ಪಕ್ಷ ಎಲ್ಲ ಜಿಲ್ಲಾ ಘಟಕಗಳಿಗೆ ಸೂಚನೆ ನೀಡಲಾಗಿದೆ. ನಿಷ್ಕ್ರಿಯರಾಗಿರುವ ಕಾರ್ಯಕರ್ತರ ವಿರುದ್ಧವೂ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದು  ಇಂಥ 200ಕ್ಕೂ ಹೆಚ್ಚು ಕಾರ್ಯಕರ್ತರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅಂಥವರನ್ನು ಶೀಘ್ರದಲ್ಲೇ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !