ಭಾನುವಾರ, ಫೆಬ್ರವರಿ 23, 2020
19 °C
ಕೇಂದ್ರ ಸರ್ಕಾರದ ಒತ್ತಡಕ್ಕೆ ಕೊನೆಗೂ ಮಣಿದ ಕಂಪನಿ

ವಾಟ್ಸ್‌ ಆ್ಯಪ್‌ಗೆ ಕುಂದುಕೊರತೆ ಅಧಿಕಾರಿ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಕೇಂದ್ರ ಸರ್ಕಾರದ ಒತ್ತಡಕ್ಕೆ ಕೊನೆಗೂ ಮಣಿದ ಫೇಸ್‌ಬುಕ್‌ ಮಾಲೀಕತ್ವದ ವಾಟ್ಸ್‌ ಆ್ಯಪ್‌ ಕಂಪನಿ ತನ್ನ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಹರಿದಾಡುವ ಸುಳ್ಳು ಸುದ್ದಿಯ ಮೂಲ ಪತ್ತೆಗೆ ಮತ್ತು ಸುಳ್ಳು ಸುದ್ದಿ ತಡೆಯಲು ಭಾರತಕ್ಕೆ ಕುಂದುಕೊರತೆ ಅಧಿಕಾರಿಯನ್ನು ನೇಮಿಸಿದೆ.

ಅಮೆರಿಕದಲ್ಲಿ ನೆಲೆಸಿರುವ ಕೋಮಲ್‌ ಲಾಹಿರಿ ಅವರನ್ನು ಕುಂದುಕೊರತೆ ಅಧಿಕಾರಿಯಾಗಿ ಆಗಸ್ಟ್‌ ತಿಂಗಳ ಅಂತ್ಯದಲ್ಲೇ ನೇಮಿಸಲಾಗಿದೆ. ಈ ಮಾಹಿತಿಯನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ನೀಡಿರುವ ಪ್ರಶ್ನೋತ್ತರ ವೇದಿಕೆಯಲ್ಲಿ ಪ್ರಕಟಿಸಲಾಗಿದೆ. ಲಾಹಿರಿ ಅವರು ವಾಟ್ಸ್‌ ಆ್ಯಪ್‌ ಕಂಪನಿಯಲ್ಲಿ ಜಾಗತಿಕ ಗ್ರಾಹಕ ಕಾರ್ಯಾಚರಣೆ ವಿಭಾಗದಲ್ಲಿ ಹಿರಿಯ ನಿರ್ದೇಶಕಿಯಾಗಿದ್ದಾರೆ.

ಅಮೆರಿಕದ ಹೊರಗಿನ ಅಂದರೆ, ಭಾರತದಲ್ಲಿನ ವಾಟ್ಸ್‌ ಆ್ಯಪ್‌ ಬಳಕೆದಾರರು ಮೊಬೈಲ್‌ ಆ್ಯಪ್‌, ಇ–ಮೇಲ್‌ ಅಥವಾ ಪತ್ರ ಮುಖೇನ ಕುಂದುಕೊರತೆ ಅಧಿಕಾರಿಗೆ ದೂರು ನೀಡಬಹುದು ಅಥವಾ ಅವರ ನೆರವು ಪಡೆಯಬಹುದಾಗಿದೆ.

ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡಿದ ಸುಳ್ಳು ಸುದ್ದಿಗಳಿಂದ ದೇಶದಲ್ಲಿ ಹಲವು ಕಡೆಗಳಲ್ಲಿ ಮಕ್ಕಳ ಕಳ್ಳರೆಂದು ಶಂಕಿಸಿ ಅಮಾಯಕರನ್ನು ಗುಂಪು ಹತ್ಯೆ ಮಾಡಿದ ಅನೇಕ ಪ್ರಕರಣಗಳು ನಡೆದಿದ್ದವು. ಸುಳ್ಳು ಸುದ್ದಿಗಳ ಮೂಲ ಪತ್ತೆಗೆ ಮತ್ತು ಕುಂದುಕೊರತೆ ಅಧಿಕಾರಿ ನೇಮಕಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್‌ ಅವರು, ಭಾರತಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ವಾಟ್ಸ್ ಆ್ಯಪ್ ಸಿಇಒ ಕ್ರಿಸ್ ಡೇನಿಯಲ್ಸ್ ಅವರಿಗೆ ಸೂಚಿಸಿದ್ದರು. ಸರ್ಕಾರವು ಕಂಪನಿಗೆ ಮೂರು ಬಾರಿ ನೋಟಿಸ್‌ ಕೂಡ ನೀಡಿತ್ತು.

ಆರ್‌ಬಿಐ ನಿಯಮ ಪಾಲಿಸದ ಮತ್ತು ಕುಂದು ಕೊರತೆ ಅಧಿಕಾರಿ ನೇಮಿಸದ ವಾಟ್ಸ್‌ ಆ್ಯಪ್‌ಗೆ ನಗದು ಸೇವೆ ಮುಂದುವರಿಸಲು ಅವಕಾಶ ನೀಡಬಾರದೆಂದು ಸರ್ಕಾರೇತರ ಸಂಸ್ಥೆಯಾದ ಪಾರದರ್ಶಕ ಮತ್ತು ವ್ಯವಸ್ಥೆ ಬದಲಾವಣೆ ಕೇಂದ್ರವು (ಸಿಎಎಸ್‌ಸಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ನ್ಯಾಯಾಲಯವು, ವಾಟ್ಸ್‌ ಆ್ಯಪ್‌ ಕಂಪನಿ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ, ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಗಡುವು ನೀಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು