ಭಾರತದಲ್ಲೇ ದತ್ತಾಂಶ ಸಂಗ್ರಹಕ್ಕೆ ವಾಟ್ಸ್‌ಆ್ಯಪ್‌ ವ್ಯವಸ್ಥೆ

7

ಭಾರತದಲ್ಲೇ ದತ್ತಾಂಶ ಸಂಗ್ರಹಕ್ಕೆ ವಾಟ್ಸ್‌ಆ್ಯಪ್‌ ವ್ಯವಸ್ಥೆ

Published:
Updated:

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ನೀತಿ ಅನ್ವಯ ಹಣಕಾಸು ವಹಿವಾಟಿನ ದತ್ತಾಂಶವನ್ನು ಭಾರತದಲ್ಲಿಯೇ ಸಂಗ್ರಹಿಸಿ ಇರಿಸಲು ವಾಟ್ಸ್‌ಆ್ಯಪ್‌ ಕಂಪನಿ ಹೊಸ ವ್ಯವಸ್ಥೆ ಮಾಡಿದೆ.

‘ಈ ಕುರಿತ ಸುತ್ತೋಲೆ ಅನುಸಾರ ಸ್ಥಳೀಯವಾಗಿ ಹಣ ಪಾವತಿ ಸಂಬಂಧಿತ ದತ್ತಾಂಶವನ್ನು ಸಂಗ್ರಹಿಸಿಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಂಪನಿಯು ಹಣ ಪಾವತಿ ಸೇವೆಯನ್ನು ಇದೇ ವರ್ಷ ಆರಂಭಿಸಿದೆ. ಸುಮಾರು 10 ಲಕ್ಷ ಮಂದಿ ಸರಳ ಮತ್ತು ಸುರಕ್ಷಿತ ರೀತಿಯಲ್ಲಿ ಈ ಸೇವೆ ಬಳಸುತ್ತಿದ್ದಾರೆ. ಈ ಸೇವೆಯನ್ನು ಶೀಘ್ರದಲ್ಲಿಯೇ ಭಾರತದ ಎಲ್ಲ ಕಡೆಗಳಲ್ಲಿ ವಿಸ್ತರಿಸಲು ಉದ್ದೇಶಿಸಲಾಗಿದೆ’ ಎಂದು ವಾಟ್ಸ್‌ಆ್ಯಪ್‌ ಕಂಪನಿಯ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಗ್ರಾಹಕರ ವಹಿವಾಟಿನ ಸಂಬಂಧಿತ ದತ್ತಾಂಶವನ್ನು ಶೇಖರಿಸಲು ಆರ್‌ಬಿಐ ಏಪ್ರಿಲ್ ತಿಂಗಳಲ್ಲಿ ಹಣ ಪಾವತಿ ಸೇವೆ ಒದಗಿಸುವ ಜಾಗತಿಕ ಕಂಪನಿಗಳಿಗೆ ಆರು ತಿಂಗಳುಗಳ ಕಾಲಾವಕಾಶ ನೀಡಿತ್ತು. ಅಕ್ಟೋಬರ್ 15 ರಿಂದ ಆರ್‌ಬಿಐನ ದತ್ತಾಂಶ ಸ್ಥಳೀಕರಣ ನಿಯಮ ಜಾರಿಗೆ ಬರಲಿದೆ.

ಹಣಕಾಸು ವಹಿವಾಟಿನ ಸಂಪೂರ್ಣ ಮಾಹಿತಿ, ಪಾವತಿಯ ವಿವರಗಳನ್ನು ದತ್ತಾಂಶ ಒಳಗೊಂಡಿರಬೇಕು ಎಂದು ಆರ್‌ಬಿಐ ತಿಳಿಸಿದೆ.

ಜಾಗತಿಕ ಹಣಕಾಸು ತಂತ್ರಜ್ಞಾನ ಕಂಪನಿಗಳ ದತ್ತಾಂಶವನ್ನು ಸ್ಥಳೀಯವಾಗಿ ಸಂಗ್ರಹಿಸುವ ಮಾದರಿ ಕುರಿತು ಆರ್‌ಬಿಐ ಉಪ ಗವರ್ನರ್‌ ಬಿ.ಪಿ.ಕನುಂಗೊ ಅವರೊಂದಿಗೆ ಹಣಕಾಸು ಸಚಿ ಅರುಣ ಜೇಟ್ಲಿ ಸೋಮವಾರ ಚರ್ಚೆ ನಡೆಸಿದರು.

ಆರ್‌ಬಿಐನ ದತ್ತಾಂಶ ಸ್ಥಳೀಕರಣ ಆದೇಶ ಕುರಿತು ಗೃಹಬಳಕೆ ವಸ್ತುಗಳನ್ನು ಪೂರೈಸುವ ಕಂಪನಿಗಳು ಮತ್ತು ಉದ್ಯಮ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವೀಸಾ, ಮಾಸ್ಟರ್ ಕಾರ್ಡ್, ಫೇಸ್‌ಬುಕ್‌, ಪೇ ಪಾಲ್ ಮತ್ತು ಗೂಗಲ್ ಸೇರಿದಂತೆ ಹಲವಾರು ಹಣ ಪಾವತಿ ಸಂಸ್ಥೆಗಳು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಆರ್‌ಬಿಐನ ಈ ಆದೇಶಕ್ಕೆ ತಾತ್ಕಾಲಿಕ ಪರಿಹಾರ ನೀಡಬೇಕು ಎಂದು ಈ ಮುಂಚೆ ಮನವಿ ಮಾಡಿದ್ದವು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !