ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಿ ಹೆಲಿಕಾಪ್ಟರ್‌ ಬಿಟ್ಟು ಚೀನಾ ನಿರ್ಮಿತ ಕಾರಿನಲ್ಲೇ ಪ್ರಯಾಣಿಸಿದ್ದೇಕೆ?

‘ಹಾಂಗ್‌ಕಿ‘ ಐಷಾರಾಮಿ ಕಾರು
Last Updated 13 ಅಕ್ಟೋಬರ್ 2019, 2:28 IST
ಅಕ್ಷರ ಗಾತ್ರ

ಬೀಜಿಂಗ್‌:ಶುಕ್ರವಾರ ಚೆನ್ನೈಗೆ ಬಂದಿಳಿದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ 57 ಕಿ.ಮೀ. ದೂರದ ಮಾಮಲ್ಲಪುರಂ(ಮಹಾಬಲಿಪುರ) ತಲುಪಲು ಹೆಲಿಕಾಪ್ಟರ್‌ ಏರಲಿಲ್ಲ. ಚೀನಾ ನಿರ್ಮಿತ ಕಾರಿನಲ್ಲಿಯೇ ದೂರದ ಪ್ರಯಾಣ ಕೈಗೊಂಡಿದ್ದು ಗಮನಸೆಳೆದಿತ್ತು. ಇದಕ್ಕೆ ಚೀನಾ ಮುಖಂಡರು ಅನುಸರಿಸುತ್ತಿರುವ ನಿಯಮವೇ ಕಾರಣ ಎನ್ನಲಾಗಿದೆ.

ದೇಶದ ಪ್ರಮುಖ ಪ‍್ರವಾಸಿ ತಾಣಗಳಲ್ಲಿ ಒಂದಾಗಿರುವ ಮಾಮಲ್ಲಪುರಂಗೆ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್‌ನಲ್ಲೇ ಪ್ರಯಾಣಿಸಿದರು. ಆದರೆ, ಷಿ ಜಿನ್‌ಪಿಂಗ್‌ ಅವರು ಚೆನ್ನೈನ ಹೊಟೇಲ್‌ನಿಂದ ರಸ್ತೆ ಸಂಚಾರವನ್ನೇ ಆಯ್ಕೆ ಮಾಡಿಕೊಂಡರು. ಅದರಲ್ಲಿಯೂ ಚೀನಾ ನಿರ್ಮಿತ ‘ಹಾಂಗ್‌ಕಿ’ಐಷಾರಾಮಿ ಕಾರಿನಲ್ಲಿಯೇ ಪೂರ್ಣ ಪ್ರಯಾಣ ಕೈಗೊಂಡರು.

‘ಹಾಂಗ್‌ಕಿ’ಎಂದರೆ ಕೆಂಪು ಬಾವುಟ. ಇದೇ ಹೆಸರಿನಲ್ಲಿ ಚೀನಾದಲ್ಲೇ ತಯಾರಿಸುವ ಐಷಾರಾಮಿ ಕಾರುಗಳನ್ನು ಚೀನಾದ ಕಮ್ಯುನಿಸ್ಟ್‌ ಪಾರ್ಟಿ(ಸಿಪಿಸಿ) ಮುಖಂಡರು ಬಳಸುತ್ತಿದ್ದಾರೆ. ಸಿಪಿಸಿ ಸಂಸ್ಥಾಪಕ ಮಾವೋ ಜೆಡಾಂಗ್‌ ಕಾಲದಿಂದಲೂ ಕಮ್ಯುನಿಸ್ಟ್‌ ಪಾರ್ಟಿ ನಾಯಕರು ಇದೇ ಕಾರುಗಳನ್ನೇ ಬಳಸಿದ್ದಾರೆ.

ಚೀನಾದ ಮುಖಂಡರು ಹೆಲಿಕಾಪ್ಟರ್‌ಗಳನ್ನು ಬಳಸುವುದೇ ಇಲ್ಲ. ಇದನ್ನು ನಿಯಮ ಎನ್ನುವಂತೆ ಚೀನಾದ ಕಮ್ಯುನಿಸ್ಟ್‌ ನಾಯಕರು ಅನುಸರಿಸುತ್ತಿದ್ದಾರೆ. ‘ಚೀನಾದ ಮುಖಂಡರು ವಿಮಾನ ಹಾಗೂ ಕಾರುಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ, ಯಾವತ್ತಿಗೂ ಹೆಲಿಕಾಪ್ಟರ್‌ಗಳನ್ನು ಬಳಸುವುದಿಲ್ಲ’ಎಂದುಬೀಜಿಂಗ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿ20 ಶೃಂಗಸಭೆ ಸೇರಿದಂತೆ ಹಲವು ರಾಷ್ಟ್ರಗಳು ಭಾಗಿಯಾಗುವ ಶೃಂಗಸಭೆಯ ಸಮಯದಲ್ಲೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೆಲಿಕಾಪ್ಟರ್‌ ಬಳಕೆ ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರು ಸುರಕ್ಷತೆ ದೃಷ್ಟಿಯಿಂದ ‘ದಿ ಬೀಸ್ಟ್‌’ಹೆಸರಿನ ವಿಶೇಷ ಕಾರು ಬಳಕೆ ಮಾಡುವಂತೆ ಚೀನಾ ಅಧ್ಯಕ್ಷರು ‘ಹಾಂಗ್‌ಕಿ‘ ಬಳಸುವುದು ಅಧಿಕೃತಗೊಳಿಸಿಕೊಳ್ಳಲಾಗಿದೆ. ಷಿ ಜಿನ್‌ಪಿಂಗ್‌ ಅವರು 2014ರಲ್ಲಿ ನ್ಯೂಜಿಲೆಂಡ್‌ ಪ್ರವಾಸದ ವೇಳೆ ಹಾಂಗ್‌ಕಿ ಎಲ್‌5 ಕಾರು ಹಾಗೂ ಇದೇ ವರ್ಷ ಆಗ್ನೇಶ ಏಷ್ಯಾ ಮತ್ತು ಪೆಸಿಫಿಕ್‌ ವಲಯದ ಮೂರು ರಾಷ್ಟ್ರಗಳ ಭೇಟಿಯ ಸಂದರ್ಭದಲ್ಲಿ ಗುಂಡು ನಿರೋಧಕ ಹಾಂಗ್‌ಕಿ ಐಷಾರಾಮಿ ಕಾರು ಬಳಸಿದ್ದರು. ಚೀನಾ ಬ್ರಾಂಡ್‌ನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಚುರ ಪಡಿಸುವ ಉದ್ದೇಶದಿಂದ ಈ ನಿರ್ಧಾರ ಎನ್ನಲಾಗಿದೆ.

ಶುಕ್ರವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಮತ್ತು ಷಿ ಜಿನ್‌ಪಿಂಗ್‌ ಅವರ ಅನೌಪಚಾರಿಕ ಶೃಂಗಸಭೆಯ ಬಳಿಕ ಚೀನಾ ಪ್ರತಿನಿಧಿಗಳು ಹಾಗೂ ಮುಖಂಡರು ಮಾಮಲ್ಲಪುರಂನ ಪ್ರಮುಖ ತಾಣಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿಂದ ಚೆನ್ನೈಗೆ ಹಿಂದಿರುಗಿದ್ದು, ಶನಿವಾರ ಮತ್ತೆ ಕೋವಲಂಗೆ ಬಂದಿದ್ದಾರೆ. ಪ್ರಧಾನಿ ಮೋದಿ ಮಾಮಲ್ಲಪುರಂನಲ್ಲೇ ಉಳಿದುಕೊಂಡು ಬೆಳಿಗ್ಗೆ ಸಮುದ್ರ ತೀರದಲ್ಲಿ ಪ್ಲಾಗಿಂಗ್‌ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಚೀನಾ ಅಧ್ಯಕ್ಷ ಪ್ರಧಾನಿ ಮೋದಿ ಜತೆಗಿನ ಮಾತುಕತೆ ನಂತರ ನೇಪಾಳಕ್ಕೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT