ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CAA Protest | ಕಲ್ಲೇಟಿಗೆ ಬಲಿಯಾದ ರತನ್ ಲಾಲ್, ಮೂರು ಮುದ್ದು ಮಕ್ಕಳ ಅಪ್ಪ!

Last Updated 25 ಫೆಬ್ರುವರಿ 2020, 7:56 IST
ಅಕ್ಷರ ಗಾತ್ರ

ನವದೆಹಲಿ: ಸರಿಯಾಗಿ ಒಂದು ವರ್ಷದ ಹಿಂದೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಎಂಬ ಭಾರತೀಯ ವಾಯುಪಡೆಯ ವೀರಾಗ್ರಣಿಯದ್ದೇ ಸುದ್ದಿ. ಪಾಕಿಸ್ತಾನದ ವಾಯು ಪ್ರದೇಶದಲ್ಲಿ ಪಾಕ್ ಎಫ್-16 ಫೈಟರ್ ಜೆಟ್ ವಿಮಾನವನ್ನು ಹೊಡೆದುರುಳಿಸಿ, ಪಾಕಿಸ್ತಾನೀ ಸೇನೆಯ ಕೈಗೆ ಸಿಕ್ಕಿಬಿದ್ದು, ಧೈರ್ಯವನ್ನೇ ಪಣವಾಗಿಟ್ಟು, ಸಾವು ಗೆದ್ದು ಬಂದ ಧೀರ ಯೋಧ ಆತ.

ಅದೇ ಹೊತ್ತಿಗೆ, ದೆಹಲಿಯ ಪೊಲೀಸ್ ಪಡೆಗಳಲ್ಲಿಯೂ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರು ಸುದ್ದಿ ಮಾಡಿದ್ದರು. ಕಾರಣ, ಅವರು ಕೂಡ ಮೀಸೆ ವಿನ್ಯಾಸ ಮಾಡಿಕೊಂಡಿದ್ದು ಥೇಟ್ ಅಭಿನಂದನ್‌ರಂತೆಯೇ. ಉದ್ದನೆಯ ಮೀಸೆ ಹೊತ್ತ ಅವರೇ ಗೋಕುಲ್‌ಪುರ ಎಸಿಪಿ ಕಚೇರಿಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರತನ್ ಲಾಲ್.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಪರಿಣಾಮ ರಾಜಧಾನಿ ದೆಹಲಿಯಲ್ಲಿ ದ್ವೇಷದ ಕಿಚ್ಚು ಹೊತ್ತಿಕೊಂಡಿದೆ. ಸೋಮವಾರ ಕಲ್ಲು ತೂರಾಟಗಾರರ ಕಲ್ಲೇಟು ತಲೆಗೆ ಬಲವಾಗಿ ತಾಗಿದ ಪರಿಣಾಮ ಈ ವೀರ ಪೊಲೀಸ್ ಅಧಿಕಾರಿ ಬಲಿಯಾಗಿದ್ದು, ಅವರ ತುಂಬು ಸಂಸಾರವೀಗ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

1998ರಲ್ಲಿ ಕಾನ್‌ಸ್ಟೇಬಲ್ ಆಗಿ ದೆಹಲಿ ಪೊಲೀಸ್ ಇಲಾಖೆ ಸೇರಿದ್ದ ರತನ್ ಲಾಲ್ (42) ಈಶಾನ್ಯ ದೆಹಲಿಯ ದಯಾಳಪುರ ಪೊಲೀಸ್ ಠಾಣೆಯ ಪ್ರದೇಶದಲ್ಲಿ ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ತೆರಳಿದ್ದ ತನ್ನ ಮೇಲಧಿಕಾರಿಯ ಜೊತೆಗಿದ್ದರು. ಆತ್ಮವಿಶ್ವಾಸದ ಮತ್ತು ಎದೆಗಾರಿಕೆಯುಳ್ಳ ಪೊಲೀಸ್ ಆಗಿ ಹೆಸರು ಗಳಿಸಿದ್ದ ಲಾಲ್, ಕಳೆದ ಕೆಲವು ವರ್ಷಗಳಿಂದೀಚೆಗೆ ಅಪರಾಧ ನಿಯಂತ್ರಣ ಚಟುವಟಿಕೆಗಳಿಗೆ ಸಂಬಂಧಿಸಿದ ಹಲವು ಪೊಲೀಸ್ ದಾಳಿಗಳಲ್ಲಿ ನೇತೃತ್ವ ವಹಿಸಿದ್ದರು. ಇದಕ್ಕೆ ಕಾರಣ ಅವರ ಕಟ್ಟುಮಸ್ತಾದ ಅಂಗಸೌಷ್ಟವ. ಈ ರೀತಿಯ ಧೈರ್ಯ ಮತ್ತು ಶೌರ್ಯಗಳಿಗಾಗಿ ಅವರು ಪೊಲೀಸ್ ಇಲಾಖೆಯಿಂದ ಹಲವು ಪುರಸ್ಕಾರಗಳನ್ನು ಪಡೆದಿದ್ದರು ಎಂಬುದನ್ನು ಅವರ ಮೇಲಧಿಕಾರಿಗಳೇ ನೆನಪಿಸಿಕೊಳ್ಳುತ್ತಾರೆ.

ರಾಜಸ್ಥಾನದ ಸಿಕಾರ್‌ನ ಫತೇಪುರ ತಿಹಾವಲಿ ಗ್ರಾಮದವರಾದ ರತನ್‌ಲಾಲ್‌ಗೆ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ. ದೆಹಲಿಯ ಬುರಾರಿಯ ಅಮೃತ ವಿಹಾರ ಕಾಲನಿಯಲ್ಲಿ ಅವರು ತಮ್ಮ ಪತ್ನಿ ಹಾಗೂ ಮೂವರು ಮುದ್ದಾದ ಮಕ್ಕಳೊಂದಿಗೆ ವಾಸಿಸುತ್ತಿದ್ದರು. 11 ಹಾಗೂ 13ರ ಹರೆಯದ ಇಬ್ಬರು ಹೆಣ್ಣುಮಕ್ಕಳು ಹಾಗೂ 8ರ ಹರೆಯದ ಪುತ್ರ ಒಳಗೊಂಡ ಸುಂದರ ಸಂಸಾರ ಅವರದಾಗಿತ್ತು. ಸೋಮವಾರ ಬೆಳಿಗ್ಗೆ ಕರ್ತವ್ಯಕ್ಕೆ ತೆರಳಿದವರು ಜೀವಂತವಾಗಿ ಮರಳಿ ಬರಲಿಲ್ಲ.

ನಿಧನ ವಾರ್ತೆ ಕೇಳಿದಂತೆಯೇ ಬುರಾರಿಯಲ್ಲಿರುವ ಅವರ ಮನೆಯೊಳಗೆ ಆರ್ತನಾದ. ಈ ಬಾರಿ ಹೋಳಿ ಆಚರಿಸಲು ತಮ್ಮೂರಾದ ತಿಹಾವಲಿಗೆ ಹೋಗೋಣ ಎಂದು ಅಕ್ಕರೆಯ ಅಪ್ಪ ತನ್ನ ಮೂವರು ಮಕ್ಕಳಿಗೆ ವಾಗ್ದಾನ ಮಾಡಿದ್ದ. ಆದರೆ ವಿಧಿಯಾಟ ಬೇರೆಯೇ ಇತ್ತು. ದಶಕದ ಹಿಂದೆಯೇ ತಂದೆಯನ್ನು ಕಳೆದುಕೊಂಡಿದ್ದ ಲಾಲ್ ಅವರಿಗೆ ವಯೋವೃದ್ಧ ತಾಯಿ ಇದ್ದಾರೆ. ತಕ್ಷಣಕ್ಕೆ ತಾಯಿಗೆ ಮಗ ಇನ್ನಿಲ್ಲವಾದ ವಿಷಯ ತಿಳಿಸಲಾಗಿಲ್ಲ.

ಬಾಲ್ಯದಿಂದಲೇ ಪೊಲೀಸ್ ಆಗಬೇಕೆಂಬ ಕನಸು ಹೊತ್ತಿದ್ದವರು ಲಾಲ್. ದೆಹಲಿಯ ಮಾಧ್ಯಮಗಳಲ್ಲೆಲ್ಲಾ ರತನ್ ಲಾಲ್ ಅವರದೇ ಸುದ್ದಿ.

"ಹಿಂಸೆಗೆ ಇಳಿಯಬೇಡಿ. ನಾನಿವತ್ತು ನನ್ನಣ್ಣನನ್ನು ಕಳೆದುಕೊಂಡೆ, ನಾಳೆ ಬೇರೆಯವರ ಸರದಿಯೂ ಆದೀತು. ದಯವಿಟ್ಟು ಹಿಂಸಾಚಾರ ಕೈಬಿಡಿ" ಎಂದು ಎರಡೂ ಕೈಗಳನ್ನು ಜೋಡಿಸಿ ಕೇಳಿಕೊಳ್ಳುತ್ತಿರುವ ಅವರ ಸಹೋದರ ದಿನೇಶ್ ಮಾತುಗಳು ಕೂಡ ಸ್ಥಳೀಯ ಮಾಧ್ಯಮಗಳಲ್ಲಿ ಪ್ರತಿಧ್ವನಿಸಿವೆ.

ಪತ್ನಿ ಪೂನಂ ಈ ದುರಂತ ವಾರ್ತೆ ಕೇಳುತ್ತಿರುವಂತೆಯೇ ಕುಸಿದು ಬಿದ್ದಿದ್ದರೆ, ಸಿದ್ಧಿ (12), ಕನಕ (11) ಮತ್ತು ರಾಮ್ (8) ಅವರು ಬಿದ್ದ ಅಮ್ಮನನ್ನೊಮ್ಮೆ, ಮನೆಯ ಹೊರಗೆ ಸೇರಿದ ಜನರ ದಂಡನ್ನೊಮ್ಮೆ ಆತಂಕಭರಿತ ಕಣ್ಣುಗಳಿಂದ, ಅಳುತ್ತಲೇ ನೋಡುತ್ತಿದ್ದರು. ನಮ್ಮಪ್ಪ ಏನು ತಪ್ಪು ಮಾಡಿದ್ದರು ಎಂಬ ಪ್ರಶ್ನಾರ್ಥಕ ಚಿಹ್ನೆ ಈ ಪುಟಾಣಿಗಳ ಕಂಗಳಲ್ಲಿದ್ದವು.

ಅವರ ಮತ್ತೊಬ್ಬ ಸಹೋದರ ಮನೋಜ್, ಸುದ್ದಿ ಕೇಳಿದ ತಕ್ಷಣ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT