ಸೋಮವಾರ, ಸೆಪ್ಟೆಂಬರ್ 20, 2021
22 °C
ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ

₹10 ಸಾವಿರಕ್ಕೆ ಮಹಿಳೆ ಮಾರಾಟ

ಪಿಟಿಐ Updated:

ಅಕ್ಷರ ಗಾತ್ರ : | |

ಮೀರಠ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ₹10 ಸಾವಿರಕ್ಕೆ ಮಾರಾಟ ಮಾಡಲಾಗಿದೆ ಮತ್ತು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಆರೋಪಿಸಿದೆ. 

ಈ ಸಂಬಂಧ ಸ್ವಯಂಪ್ರೇರಿತ ಕ್ರಮಕ್ಕೆ ಮುಂದಾಗಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ), ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 

‘ಮಾಧ್ಯಮದಲ್ಲಿ ಬಂದಿರುವ ವರದಿ ನಿಜವಾಗಿದ್ದಲ್ಲಿ ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.

‘ಅತ್ಯಾಚಾರ ಸಂಬಂಧ ಮಹಿಳೆ ನೀಡಿದ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ. ಬಳಿಕ ಮಹಿಳೆ ಬೆಂಕಿ ಹಚ್ಚಿಕೊಂಡಿದ್ದು, ಶೇ 80ರಷ್ಟು ಸುಟ್ಟ ಗಾಯಗಳಾಗಿವೆ. ಸದ್ಯ ಈಕೆ ಗಾಜಿಯಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಡಿಸಿಡಬ್ಲ್ಯು ಹೇಳಿದೆ. 

ಆದರೆ, ಉತ್ತರ ಪ್ರದೇಶ ಪೊಲೀಸರು ಈ ಆರೋಪ ಅಲ್ಲಗಳೆದಿದ್ದು, ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ಡಿಸಿಡಬ್ಲ್ಯು ಮಧ್ಯಪ್ರವೇಶಿಸಿದ ಬಳಿಕ, ಬಾಬುಗಢದ ಸರಪಂಚ್ ಸೇರಿದಂತೆ 13 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ ಮೇಲ್ನೋಟಕ್ಕೆ ಪ್ರಕರಣ ಅನುಮಾನಾಸ್ಪದವಾಗಿರುವುದರಿಂದ ಈತನಕ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಮಹಿಳೆ ಹೇಳುತ್ತಿರುವ ಶೋಷಣೆ ಹಾಗೂ ಅತ್ಯಾಚಾರ ಪ್ರಕರಣಗಳು ಐದು ವರ್ಷದ ಹಿಂದೆ ವಿವಿಧ ಸಂದರ್ಭ ಹಾಗೂ ಸ್ಥಳಗಳಲ್ಲಿ ನಡೆದಿವೆ. ಈ ಕುರಿತು ಆಯಾ ಗ್ರಾಮಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

ತನಿಖೆ ನಡೆಸಲು ಮುಖ್ಯಮಂತ್ರಿಗೆ ಆಗ್ರಹ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿರುವ ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್, ‘ಮಹಿಳೆ ನೀಡಿದ ದೂರು ದಾಖಲಿಸಿಕೊಳ್ಳಲು ಹಾಪುರ್ ಜಿಲ್ಲೆಯ ಪೊಲೀಸರು ನಿರಾಕರಿಸಿದ ಕುರಿತು ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ. 

‘ಹಲವಾರು ಜನರಿಂದ ಸಾಲ ಪಡೆದಿದ್ದ ವ್ಯಕ್ತಿಯೊಬ್ಬರಿಗೆ ಮಹಿಳೆಯರನ್ನು ಮಾರಾಟ ಮಾಡಲಾಗಿತ್ತು. ಈತ ತಾನು ಸಾಲ ಪಡೆದವರ ಮನೆಗಳಲ್ಲಿ ಮನೆಗೆಲಸ ಮಾಡುವಂತೆ ಆಕೆಗೆ ಒತ್ತಾಯಿಸುತ್ತಿದ್ದ. ಈ ಮನೆಗಳಲ್ಲಿ ಆಕೆಯನ್ನು ಶೋಷಿಸುವುದಲ್ಲದೆ ಪದೇ ಪದೇ ಸಾಮೂಹಿಕ ಅತ್ಯಾಚಾರ ಎಸಗಲಾಗುತ್ತಿತ್ತು’ ಎಂದು ಸ್ವಾತಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

‘ಪೊಲೀಸ್ ಅಧಿಕಾರಿಗಳ ಸಂವೇದನಾರಹಿತ ಹಾಗೂ ಅವಮಾನಕಾರಿ ಧೋರಣೆಯಿಂದಾಗಿ ಮಹಿಳೆ ಸಾಕಷ್ಟು ನೋವು ಅನುಭವಿಸಿದ್ದಾರೆ. ಇದರಿಂದಾಗಿ ಆ ಮಹಿಳೆ ಬೆಂಕಿ ಹಚ್ಚಿಕೊಳ್ಳುವಂತಾಯಿತು’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. 

ಅತ್ಯಾಚಾರ: 14ರ ಬಾಲಕ ವಶಕ್ಕೆ

ಶಿರಡಿ: ಮಹಾರಾಷ್ಟ್ರದ ಶಿರಡಿಯಲ್ಲಿ ಎಂಟು ವರ್ಷದ ಬಾಲಕಿ ಮೇಲೆ 14 ವರ್ಷದ ಬಾಲಕ ಅತ್ಯಾಚಾರ ಎಸಗಿದ್ದಾನೆ.

ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಆತನ ವಿರುದ್ಧ ಪೋಕ್ಸೊ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆಯ 376ನೇ ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. 

ಭಾನುವಾರ ಬಾಲಕಿಯನ್ನು ನಿಮಗಾಂವ್ ಗ್ರಾಮದಲ್ಲಿನ ನಿರ್ಜನ ಸ್ಥಳವೊಂದಕ್ಕೆ ಕರೆದೊಯ್ದ ಬಾಲಕ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಾಲಕಿಯಿಂದ ವಿಷಯ ತಿಳಿದ ಬಳಿಕ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು