ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದದೆಲ್ಲೆಡೆ ಕಳವಳ, ಭಾರತದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ 114ಕ್ಕೆ ಏರಿಕೆ

ಸೋಂಕಿಗೆ ತತ್ತರಿಸಿದ ಅಮೆರಿಕ, ಯುರೋಪ್‌
Last Updated 17 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಚೀನಾದಲ್ಲಿ ಮೊದಲು ಪತ್ತೆಯಾಗಿ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ–2 ಸೋಂಕು ಹರಡುವಿಕೆ ಪ್ರಮಾಣ ಇನ್ನಷ್ಟು ಹೆಚ್ಚಿದೆ. ಚೀನಾದಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆ 81 ಸಾವಿರವನ್ನು ದಾಟಿದೆ. ಅದರ ಜತೆಯಲ್ಲಿಯೇ, ಚೀನಾ ಬಿಟ್ಟು ಜಗತ್ತಿನ ಇತರ ಭಾಗದಲ್ಲಿ ಸೋಂಕಿತರ ಸಂಖ್ಯೆಯು 87 ಸಾವಿರಕ್ಕೂ ಹೆಚ್ಚಾಗಿದೆ.

ಯುರೋಪ್‌ ಮತ್ತು ಅಮೆರಿಕದಲ್ಲಿ ಕೋವಿಡ್‌ 19 ಪೀಡಿತರ ಸಂಖ್ಯೆಯು ವಿಪರೀತ ಏರಿಕೆಯಾಗಿದೆ. ಯುರೋಪ್‌ನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 2,297ಕ್ಕೆ ಏರಿದೆ. ಇಟಲಿಯಲ್ಲಿ ಭಾನುವಾರ ಒಂದೇ ದಿನ 368 ಜನರು ಬಲಿಯಾಗಿದ್ದಾರೆ. ಆ ದೇಶದಲ್ಲಿ ಇದುವರೆಗೆ ಮೃತರಾದವರು 1,811 ಮಂದಿ.

ಅಮೆರಿಕ, ಇಟಲಿ, ಜರ್ಮನಿ ಮುಂತಾದ ದೇಶಗಳ ಪ್ರಮುಖ ನಗರಗಳಲ್ಲಿ ಮಾಲ್‌ಗಳು ಮತ್ತು ಇತರ ಹೆಚ್ಚು ಜನ ಸೇರುವ ಕೇಂದ್ರಗಳ ಮೇಲೆ ನಿರ್ಬಂಧ ಹೇರಲಾಗಿದೆ.

ಭಾರತದಲ್ಲಿ ಕೂಡ ಕೊರೊನಾ ವೈರಸ್‌ ಹರಡುವಿಕೆ ಹೆಚ್ಚಾಗಿದೆ. ಒಡಿಶಾದಲ್ಲಿ ಮೊದಲ ಪ್ರಕರಣ ಸೋಮವಾರ ದೃಢಪಟ್ಟಿದೆ. ಲಡಾಖ್‌, ಜಮ್ಮು–ಕಾಶ್ಮೀರ, ಕೇರಳ ಮತ್ತು ಕರ್ನಾಟಕದಲ್ಲಿ ತಲಾ ಒಂದೊಂದು ಹೊಸ ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ, ಭಾರತದಲ್ಲಿ ಈ ಸೋಂಕು ಖಚಿತವಾದವರ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.

ಅತಿ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡ ಮಹಾರಾಷ್ಟ್ರದಲ್ಲಿ ಮತ್ತೆ ನಾಲ್ಕು ಹೊಸ ಪ್ರಕರಣಗಳು ಸೋಮವಾರ ವರದಿಯಾಗಿವೆ. ಆದರೆ, ದೇಶದಲ್ಲಿನ ಸೋಂಕಿತರ ಒಟ್ಟು ಸಂಖ್ಯೆಗೆ ಇದನ್ನು ಕೇಂದ್ರ ಆರೋಗ್ಯ ಸಚಿವಾಲಯವು ಇನ್ನೂ ಸೇರಿಸಿಲ್ಲ. ದೇಶದಲ್ಲಿ ಈಗ ಸೋಂಕು ಇರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆಯು 15ಕ್ಕೆ ಏರಿಕೆಯಾಗಿದೆ.

ದೇಶದ ಒಟ್ಟು 114 ದೃಢಪಟ್ಟ ಪ್ರಕರಣಗಳಲ್ಲಿ 17 ಮಂದಿ ವಿದೇಶಿಯರೂ ಸೇರಿದ್ದಾರೆ. ಈವರೆಗೆ ದೇಶದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 13 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಜಗತ್ತಿನಾದ್ಯಂತ 155 ದೇಶಗಳಲ್ಲಿ ಸೋಂಕು ಕಾಣಿಸಿದೆ. ಈವರೆಗೆ ಮೃತಪಟ್ಟವರ ಸಂಖ್ಯೆ 6,705ಕ್ಕೆ ಏರಿದ್ದರೆ ಸೋಂಕು ದೃಢಪಟ್ಟವರ ಸಂಖ್ಯೆ 1.74 ಲಕ್ಷ. ಸೋಂಕು ಕಾಣಿಸಿಕೊಂಡವರಲ್ಲಿ 77,657 ಜನರು ಗುಣಮುಖರಾಗಿದ್ದಾರೆ.

ವುಹಾನ್‌ನಲ್ಲಿ ನಿಯಂತ್ರಣ

ಕೋವಿಡ್‌ ಪಿಡುಗಿನಿಂದ ತತ್ತರಿಸಿದ್ದ ಚೀನಾದ ವುಹಾನ್‌ ಪ್ರಾಂತ್ಯದಲ್ಲಿ ಈ ರೋಗಕ್ಕೆ ಕಾರಣವಾಗುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಹಾಗಿದ್ದರೂ, ಒಂದು ತಿಂಗಳ ಬಳಿಕವಷ್ಟೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಈ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಸಾವಿರಾರು ಆರೋಗ್ಯ ಸಿಬ್ಬಂದಿಯನ್ನು ಹಂತ ಹಂತವಾಗಿ ಅಲ್ಲಿಂದ ವಾಪಸ್‌ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಬ್ಬ ಟೆಕಿಗೆ ಕೋವಿಡ್‌: ಸಂಖ್ಯೆ 8ಕ್ಕೆ

ಬೆಂಗಳೂರು: ಅಮೆರಿಕದ ಲಾಸ್‌ ಏಂಜಲೀಸ್‌ನಿಂದ ಬೆಂಗಳೂರಿಗೆ ಬಂದಿರುವ ಮತ್ತೊಬ್ಬ ಟೆಕಿಗೆ ಕೋವಿಡ್ –19 ಇರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಈ ರೋಗಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಲಂಡನ್‌ ಮಾರ್ಗವಾಗಿ ಮಾ.8ರಂದು ಈ ಟೆಕಿ ಬೆಂಗಳೂರಿಗೆ ಬಂದಿದ್ದಾರೆ. ಈಗಾಗಲೇ ರೋಗ ಇರುವುದು ದೃಢಪಟ್ಟಿರುವ ಮೈಂಡ್ ಟ್ರೀ ಕಂಪನಿಯ ಟೆಕಿ (ರೋಗಿ ಸಂಖ್ಯೆ–4) ಬಂದ ವಿಮಾನದಲ್ಲೇ ಈ ಟೆಕಿಯೂ ಬಂದಿಳಿದಿದ್ದಾರೆ.

‌ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಿ ಅವರ ಮೇಲೆ ನಿಗಾ ಇಡಲಾಗಿತ್ತು. ಕೋವಿಡ್ –19 ಖಚಿತವಾದ ನಂತರ ಸೋಮವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪತ್ನಿ ಮತ್ತು ಮನೆ ಕೆಲಸದ ಮಹಿಳೆಗೂ ಈ ಸೋಂಕು ತಗುಲಿರಬಹುದು ಎಂಬ ಶಂಕೆಯ ಮೇಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೂವರು ಯಾರನ್ನೆಲ್ಲಾ ಸಂಪರ್ಕಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬಸ್‌ ಪ್ರಯಾಣಿಕರಿಗೆ ಹೊದಿಕೆ ಇಲ್ಲ

ಕೆಎಸ್‌ಆರ್‌ಟಿಸಿ ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಹೊದಿಕೆ ನೀಡುವುದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ರಾತ್ರಿ ವೇಳೆ ಸಂಚರಿಸುವ ಐಷಾರಾಮಿ ಬಸ್‌ಗಳಲ್ಲಿ ಹೊದಿಕೆ ಮತ್ತು ಬೆಡ್‌ಸ್ಪ್ರೆಡ್‌ಗಳನ್ನು ನೀಡಲಾಗುತ್ತಿತ್ತು. ‘ಕೋವಿಡ್ –19 ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರೇ ಹೊದಿಕೆ ತರಬೇಕು’ ಎಂದು ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ.

ಪಿಯು ಪರೀಕ್ಷೆ ಅಬಾಧಿತ, ಮೌಲ್ಯಮಾಪನಕ್ಕೂ ಕ್ರಮ

ಇದೇ 4ರಿಂದ ಆರಂಭವಾಗಿರುವ ದ್ವಿತೀಯ ಪಿಯು ಪರೀಕ್ಷೆಯು ಕೊರೊನಾ ಭೀತಿಯಿಂದ ಸ್ಥಗಿತಗೊಳ್ಳುವುದಿಲ್ಲ ಎಂದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಉಪನ್ಯಾಸಕರ ಮನವೊಲಿಸಿ ಮೌಲ್ಯಮಾಪನಕ್ಕೆ ಕ್ರಮ ಕೈಗೊಳ್ಳಲಾಗುವ ಭರವಸೆ ನೀಡಿದ್ದಾರೆ.

‘ಒಟ್ಟು 39 ಪರೀಕ್ಷೆಗಳ ಪೈಕಿ 28 ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದ್ದೀರಿ, ಮುಂದಿನ ಪರೀಕ್ಷೆಗಳನ್ನು ಸಹ ಆತ್ಮವಿಶ್ವಾಸದಿಂದ ಎದುರಿಸಿ, ವಿಜಯಪುರ ಮತ್ತು ಬೆಂಗಳೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಕಿಡಿಗೇಡಿತನ ಮಾಡಿದ್ದು ಬಿಟ್ಟರೆ ಇದುವರೆಗೆ ಎಲ್ಲವೂ ಸಾಂಗವಾಗಿ ನಡೆದಿದೆ’ ಎಂದು ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಟಲಿಯಲ್ಲಿ ಸಚಿವ ಆನಂದ್‌ ಸಿಂಗ್‌ ‍‍ಪುತ್ರಿ

‘ಇಟಲಿಯಲ್ಲಿ ಕಲಿಯುತ್ತಿರುವ ಕರ್ನಾಟಕದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೋಮ್‌ ವಿಮಾನ ನಿಲ್ದಾಣದಲ್ಲಿ ಸಿಕ್ಕಿಕೊಂಡಿದ್ದು, ಅವರಲ್ಲಿ ನನ್ನ ಮಗಳು ವೈಷ್ಣವಿ ಕೂಡ ಇದ್ದಾಳೆ’ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಹೇಳಿದರು.

ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ‘ಈ ಎಲ್ಲ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಭಾರತಕ್ಕೆ ಕರೆದುಕೊಂಡು ಬರುವ ಕುರಿತು ಕೇಂದ್ರದ ಜೊತೆ ರಾಜ್ಯ ಸರ್ಕಾರ ಮಾತುಕತೆ ನಡೆಸಬೇಕು’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಕೋರಿದರು.

ವಿವಿಧೆಡೆ ಕಟ್ಟೆಚ್ಚರ

* ಸೋಂಕು ತಡೆ ಕೆಲಸಗಳಿಗೆ ₹200 ಕೋಟಿ ತೆಗೆದಿದ್ದ ಪಶ್ಚಿಮ ಬಂಗಾಳ, ಶಾಲೆಗಳ ರಜೆ ಏ. 15ರವರೆಗೆ ವಿಸ್ತರಣೆ

* ಅಜಂತಾ–ಎಲ್ಲೋರಾ ಮತ್ತು ಔರಂಗಾಬಾದ್‌ನ ಇತರ ಪ್ರವಾಸಿತಾಣಗಳು ಬಂದ್‌

* ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಮಾರಂಭಗಳಿಗೆ ದೆಹಲಿಯಲ್ಲಿ ನಿರ್ಬಂಧ. ಯಾವುದೇ ಸಮಾರಂಭದಲ್ಲಿಯೂ 50ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಇದು ಇದೇ 31ರವರೆಗೆ ಅನ್ವಯ

* ಅರಬ್‌ ಸಂಯುಕ್ತ ಸಂಸ್ಥಾನ, ಕತಾರ್‌, ಒಮಾನ್‌ ಮತ್ತು ಕುವೈಟ್‌ನಿಂದ ಭಾರತಕ್ಕೆ ಬರುವವರು 14 ದಿನ ಪ್ರತ್ಯೇಕಿಸಲಾದ ನಿಗಾ ಕೇಂದ್ರದಲ್ಲಿ ಇರುವುದು ಕಡ್ಡಾಯ

* ಐರೋಪ್ಯ ಒಕ್ಕೂಟ, ಇಂಗ್ಲೆಂಡ್‌ ಮತ್ತು ಟರ್ಕಿಯಿಂದ ಬರುವ ಪ್ರವಾಸಿಗರ ಮೇಲೆ ಇದೇ 18ರಿಂದ ನಿಷೇಧ ಹೇರಲಾಗಿದೆ

* ಜವಾಹರ್‌ ನವೋದಯ ವಿದ್ಯಾಲಯಗಳ ಬೇಸಿಗೆ ರಜೆ ಇದೇ 21ರಿಂದಲೇ ಆರಂಭವಾಗಲಿದ್ದು ಮೇ 25ರವರೆಗೆ ಇರಲಿದೆ. ಈ ವಿದ್ಯಾಲಯಗಳಲ್ಲಿ ತರಗತಿಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಪರೀಕ್ಷೆಗಳು ಬಹುತೇಕ ಮುಗಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT