ಶನಿವಾರ, ಡಿಸೆಂಬರ್ 7, 2019
21 °C

ಗೋ ಹಂತಕರ ಬಂಧನಕ್ಕೆ ಆದೇಶಿಸಿ, ಪೊಲೀಸ್ ಅಧಿಕಾರಿ ವಿಚಾರದಲ್ಲಿ ಮೌನ ತಳೆದ ಯೋಗಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಲಖನೌ: ಗುಂಪು ದಾಳಿ ವೇಳೆ ಪೊಲೀಸ್‌ ಅಧಿಕಾರಿ ಸೇರಿ ಇಬ್ಬರು ಮೃತಪಟ್ಟ ಘಟನೆ ನಡೆದ ಒಂದು ದಿನದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನೇತೃತ್ವದಲ್ಲಿ ನಡೆದ ಭದ್ರತೆ ಪರಿಶೀಲನೆ ಸಭೆಯು, ಗೋ ಹಂತಕರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸುವಷ್ಟಕ್ಕೇ ಸೀಮಿತವಾಯಿತು.

ದನಗಳ ಹತ್ಯೆ ನಡೆದಿದೆ ಎಂದು ಆರೋಪಿಸಿದ್ದ ಗುಂಪೊಂದು ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಚಿಂಗರ್‌ವಾಟಿ ಪೊಲೀಸ್‌ ಹೊರಠಾಣೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಪೊಲೀಸ್‌ ಅಧಿಕಾರಿ ಸುಬೋಧ್‌ ಕುಮಾರ್‌ ಸಿಂಗ್‌ ಸೇರಿದಂತೆ ಇಬ್ಬರು ಮೃತಪಟ್ಟಿದ್ದರು. ಐದಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು. ದಾಳಿಕೋರರು ವಾಹನಗಳಿಗೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂಬಂಧ ಮಂಗಳವಾರ ರಾತ್ರಿ ಮುಖ್ಯಮಂತ್ರಿ ಯೋಗಿ ನೇತೃತ್ವದಲ್ಲಿ ಸಭೆ ನಡೆಯಿತು. ಬಳಿಕ ಸರ್ಕಾರದ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿ ಅವರು, ‘ದನಗಳನ್ನು ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲರನ್ನೂ ಬಂಧಿಸಬೇಕು. ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ, ಪೊಲೀಸ್‌ ಅಧಿಕಾರಿ ಸಾವಿನ ಕುರಿತು ಯಾವುದೇ ಮಾತನಾಡಿಲ್ಲ.

ಇದನ್ನೂ ಓದಿ: ಗೋಹತ್ಯೆ ಆರೋಪ: ಉತ್ತರ ಪ್ರದೇಶದಲ್ಲಿ ಗುಂಪು ಗಲಭೆ; ಇನ್‌ಸ್ಪೆಕ್ಟರ್‌, ಯುವಕ ಸಾವು

ಸೋಮವಾರದ ಗಲಭೆ ಬಳಿಕ ಪೊಲೀಸ್‌ ಅಧಿಕಾರಿ ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರ ಸಾವಿನ ಸಂಬಂಧ ಹಾಗೂ ದನಗಳ ಹತ್ಯೆ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪೊಲೀಸ್‌ ಅಧಿಕಾರಿ ಹತ್ಯೆಯ ಪ್ರಮುಖ ಆರೋಪಿ ಎನ್ನಲಾದ ಹಾಗೂ ಭಜರಂಗ ದಳ ಕಾರ್ಯಕರ್ತ ಯೋಗೇಶ್‌ ರಾಜ್‌ ಸದ್ಯ ತಲೆ ಮರೆಸಿಕೊಂಡಿದ್ದು, ದನಗಳ ಹತ್ಯೆ ಸಂಬಂಧ ದೂರು ನೀಡಿದ್ದಾರೆ.

ಚಿಂಗರ್‌ವಾಟಿ ಪೊಲೀಸ್‌ ಹೊರಠಾಣೆಯ ಸಮೀಪ ಗದ್ದೆಯಲ್ಲಿ ಪ್ರಾಣಿಯ ಎಲುಬುಗಳು ಸಿಕ್ಕಿದ್ದವು. ಆ ಸ್ಥಳದ ಪಕ್ಕದ ಊರಿನ ಏಳು ಜನರ ಹೆಸರುಗಳನ್ನು ಯೋಗೇಶ್‌ ತಮ್ಮ ದೂರಿನಲ್ಲಿ ಉಲ್ಲೇಖಸಿದ್ದಾರೆ. ಅದರಲ್ಲಿ ಹನ್ನೊಂದು ಮತ್ತು ಹನ್ನೆರಡು ವರ್ಷ ವಯಸ್ಸಿನ ಇಬ್ಬರು ಬಾಲಕರ ಹೆಸರುಗಳು ಸೇರಿವೆ. ಉಳಿದಂತೆ ನಾಲ್ಕು ಸುಳ್ಳು ಹೆಸರುಗಳನ್ನು ನಮೂದಿಸಲಾಗಿದೆ.

ಇದನ್ನೂ ಓದಿ: ಗೋಹತ್ಯೆ ಆರೋಪ, ಗುಂಪು ಗಲಭೆ: ಪೊಲೀಸ್‌ ಅಧಿಕಾರಿ ಹತ್ಯೆ ಸಂಬಂಧ ನಾಲ್ವರ ಬಂಧನ

ದೂರಿನ ಆಧಾರದಲ್ಲಿ ಸೋದರ ಸಂಬಂಧಿಗಳಾದ ಇಬ್ಬರೂ ಬಾಲಕರನ್ನು ಕರೆದೊಯ್ದಿದ್ದ ಪೊಲೀಸರು, ಹಲವು ಗಂಟೆಗಳ ಕಾಲ ಠಾಣೆಯಲ್ಲಿ ಇರಿಸಿದ್ದಾರೆ. ಈ ಬಗ್ಗೆ ಒಬ್ಬ ಬಾಲಕನ ತಂದೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

‘ಪೊಲೀಸರು ನಮ್ಮನ್ನು ಠಾಣೆಗೆ ಕರೆದೊಯ್ದರು. ನಾಲ‌್ಕುಗಂಟೆಗಳ ಕಾಲ ಅಲ್ಲಿಯೇ ಇರಿಸಿಕೊಂಡಿದ್ದರು. ಬಾಲಕರ ಹೆಸರುಗಳನ್ನು ಕೇಳಿ ದಾಖಲಿಸಿಕೊಂಡರು. ಬಳಿಕ ನನ್ನ ಮೊಬೈಲ್‌ ನಂಬರ್‌ ಪಡೆದುಕೊಂಡರು. ಅಗತ್ಯವಿದ್ದರೆ ಮತ್ತೆ ಬರಬೇಕಾಗುತ್ತದೆ ಎಂದು ತಿಳಿಸಿದರು’ ಎಂದು ಹೇಳಿಕೆ ನೀಡಿದ್ದಾರೆ.

ಈ ವಿಚಾರವು ಬಹಿರಂಗಗೊಳ್ಳುತ್ತಿದ್ದಂತೆ ಪ್ರಕರಣ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ. ‘ಮಕ್ಕಳ ಹೆಸರಿನಲ್ಲಿ ಪ್ರಕರಣ ದಾಖಲಿಸಕೊಂಡಿರುವುದು ಪಿತೂರಿ. ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಆ ಹೆಸರುಗಳ ಬೇರೆ ಯಾರೂ ಊರಿನಲ್ಲಿ ಇಲ್ಲ’ ಎಂದು ಬಾಲಕನ ತಂದೆ ದೂರಿದ್ದಾರೆ.

ಇದನ್ನೂ ಓದಿ: ಪೊಲೀಸ್ ಅಧಿಕಾರಿ ಸುಬೋಧ್ ಸಿಂಗ್ ಮೇಲೆ ದಾಳಿ ಪೂರ್ವಯೋಜಿತ ಕೃತ್ಯ?

ಪ್ರಕರಣದ ತನಿಖೆ ಬಳಿಕವೇ ಯಾರನ್ನಾದರೂ ಬಂಧಿಸಲು ಅಥವಾ ಪ್ರಶ್ನಿಸಲು ಸಾಧ್ಯ. ದೂರುದಾರರು ನೀಡಿರುವ ಮಾಹಿತಿ ಆಧಾರದಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಗಲಭೆ ನಡೆದ ದಿನ(ಸೋಮವಾರ) ರಾತ್ರಿ ಸ್ವ ಕ್ಷೇತ್ರ ಗೋರಕ್‌ಪುರದಲ್ಲಿ ನಡೆದ ಲೈಟ್‌ ಶೋ ಹಾಗೂ ಮಂಗಳವಾರ ರಾತ್ರಿ ಆಯೋಜನೆಗೊಂಡಿದ್ದ ಕಬಡ್ಡಿ ಪಂದ್ಯಾವಳಿ ವೀಕ್ಷಿಸಲು ಯೋಗಿ ಆಗಮಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು