ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರದಲ್ಲಿ ಜಗನ್ ವೈಭವ: 5 ಉಪಮುಖ್ಯಮಂತ್ರಿಗಳು, 25 ಸಚಿವರು

Last Updated 7 ಜೂನ್ 2019, 10:17 IST
ಅಕ್ಷರ ಗಾತ್ರ

ಆಂಧ್ರಪ್ರದೇಶ:ದಕ್ಷಿಣ ಭಾರತ ರಾಜ್ಯಗಳಲ್ಲಿಯೇ ಯುವ ಮುಖ್ಯಮಂತ್ರಿ ಹಾಗೂ ವೈಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ನೂತನ ಸಂಪುಟದಲ್ಲಿ ಐವರು ಉಪ ಮುಖ್ಯಮಂತ್ರಿಗಳು, 25 ಮಂದಿ ಸಚಿವರನ್ನು ಒಳಗೊಂಡಿದ್ದು, ಇದು ವಿಶಿಷ್ಟವಾದ ಹಾಗೂ ರಾಷ್ಟ್ರಕ್ಕೆ ಪ್ರಥಮ ಸಚಿವ ಸಂಪುಟ ಎಂಬ ದಾಖಲೆ ನಿರ್ಮಿಸಲಿದೆ.

ಸಚಿವ ಸಂಪುಟದ ಪ್ರಮಾಣ ವಚನ ಕಾರ್ಯಕ್ರಮ ಶನಿವಾರ ನಡೆಯಲಿದೆ. ಐವರು ಉಪ ಮುಖ್ಯಮಂತ್ರಿಗಳಲ್ಲಿ ಸಮಾಜದ ಎಲ್ಲಾ ವರ್ಗಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ. ಪರಿಶಿಷ್ಟ ಜಾತಿ ಒಂದು, ಪರಿಶಿಷ್ಟ ಪಂಗಡಕ್ಕೆ ಒಂದು, ಹಿಂದುಳಿದ ವರ್ಗಗಳಿಗೆ ಒಂದು, ಅಲ್ಪಸಂಖ್ಯಾತರಿಗೆ ಒಂದು, ಕಾಪು ಜನಾಂಗಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿದೆ ಎಂದು ಜಗನ್ ತಿಳಿಸಿದ್ದಾರೆ.

ಅಮರಾವತಿಯ ತಡೇಪಲ್ಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ವೈಎಸ್ ಆರ್ ಪಕ್ಷದ ಶಾಸಕರ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಯಾರು, ಸಚಿವರು ಯಾರು ಎಂಬುದನ್ನು ಮುಖ್ಯಮಂತ್ರಿ ರೆಡ್ಡಿ ಬಿಟ್ಟುಕೊಟ್ಟಿಲ್ಲ.

ಯಾರು ಸಚಿವರು, ಯಾರು ಉಪಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದಾರೋ ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ವಿಜಯಸಾಯಿರೆಡ್ಡಿ ಇಂದು ಮಾಹಿತಿ ನೀಡಲಿದ್ದಾರೆ ಎಂದಿದ್ದಾರೆ.ಇದೇ ಮೊದಲಬಾರಿಗೆ ಮುಖ್ಯಮಂತ್ರಿಯೊಬ್ಬರು ಐವರು ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದ್ದಾರೆ. ತೆಲುಗು ದೇಶಂ ಪಾರ್ಟಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು, ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೊಂದಿದ್ದರು. ಒಬ್ಬರು ನಿಮ್ಮಕಾಯಲ ಚಿನ್ನರಾಜಪ್ಪ ಮತ್ತೊಬ್ಬರು ಕೆ.ಇ.ಕೃಷ್ಣಮೂರ್ತಿ. ಇಬ್ಬರಿಗೂ ಗೃಹಖಾತೆ ಹಾಗೂ ಕಂದಾಯ ಖಾತೆಗಳನ್ನು ನೀಡಲಾಗಿತ್ತು. ಜಗನ್ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಚಿವ ಸಂಪುಟಕ್ಕೆ ಐವರು ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಐವರು ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರು ಯಾರು ಎಂಬುದನ್ನು ತಿಳಿಯಬೇಕಾದಲ್ಲಿ ಶನಿವಾರ ಸಂಜೆಯವರೆಗೂ ಕಾಯಬೇಕಾಗಿದೆ.

30 ತಿಂಗಳ ನಂತರ ಹೊಸಬರಿಗೆ ಅವಕಾಶ: ಶನಿವಾರ ಶೇ.90 ರಷ್ಟು ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರ ಅಧಿಕಾರಾವಧಿ 30 ತಿಂಗಳು (ಎರಡೂವರೆ ವರ್ಷ) ಮಾತ್ರ. 30 ತಿಂಗಳ ನಂತರ ಈ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಈಗ ಯಾರೂ ಸಚಿವ ಸಂಪುಟದಲ್ಲಿ ಸಚಿವರಾಗಲಿಲ್ಲ ಎಂದು ಅತೃಪ್ತಿಪಟ್ಟುಕೊಳ್ಳುವುದು ಬೇಡ. ಉಳಿದ ಅವಧಿಗೆ ಅವಕಾಶ ನೀಡಲಾಗುವುದು ಎಂದು ಜಗನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT