ಮಂಗಳವಾರ, ಜನವರಿ 21, 2020
28 °C

12 ಬಾರಿ ಗರ್ಭ ಧರಿಸಿದ್ದ ಮಹಿಳೆಯ ಪತ್ತೆ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: 12 ಬಾರಿ ಗರ್ಭ ಧರಿಸಿದ್ದ ಮಹಾರಾಷ್ಟ್ರದ ಕಾರ್ಮಿಕ ಮಹಿಳೆಯನ್ನು ಧಾರವಾಡ ಜಿಲ್ಲೆಯ ಮಮ್ಮಿಗಟ್ಟಿ ಬಳಿ ವೈದ್ಯಾಧಿಕಾರಿಗಳು ಪತ್ತೆ ಹಚ್ಚಿದ್ದು, ಮಹಿಳೆ ಆರೋಗ್ಯದಿಂದ ಇದ್ದಾರೆ.

ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮಜಲಗಾಂವ್‌ ನಿವಾಸಿ ಲಂಕಾಬಾಯಿ (34) ಹಾಗೂ ಅವರ ಪತಿ ಕಬ್ಬು ಕಡಿಯುವ ಕೆಲಸಕ್ಕಾಗಿ ಇತ್ತೀಚೆಗೆ ಸಂಕೇಶ್ವರಕ್ಕೆ ಬಂದಿದ್ದರು. ಅದಾಗಲೇ ಅವರಿಗೆ 2 ಗಂಡು ಹಾಗೂ 9 ಜನ ಹೆಣ್ಣು ಮಕ್ಕಳು ಇದ್ದರು. ಪ್ರಯಾಣ ಹಾಗೂ ದೈಹಿಕ ಕಸರತ್ತಿನ ಕಾರಣದಿಂದಾಗಿ ಲಂಕಾಬಾಯಿ ಅವರ 12ನೇ ಗರ್ಭವು ಪಾತವಾಗಿತ್ತು.

ಇದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಸತ್ಯಾಸತ್ಯತೆಯನ್ನು ಕಂಡು ಹಿಡಿಯಲು ವೈದ್ಯಾಧಿಕಾರಿಗಳ ತಂಡವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಕಾಂತ ವಿ. ಮುನ್ಯಾಳ ರಚಿಸಿದರು. ಕಬ್ಬು ಕಡಿಯುವ ಗ್ಯಾಂಗ್‌ಗಳ ಸದಸ್ಯರ ಮಾಹಿತಿಯ ಮೂಲಕ ಲಂಕಾಬಾಯಿಯನ್ನು ಧಾರವಾಡ ಜಿಲ್ಲೆಯ ಮಮ್ಮಿಗಟ್ಟಿ ಬಳಿ ಶನಿವಾರ ಸಂಜೆ ಪತ್ತೆ ಹಚ್ಚಿದರು.

‘ಕಬ್ಬು ಕಡಿಯುವ ಕೆಲಸಕ್ಕಾಗಿ ಗಡಿಭಾಗದ ಕೂಲಿಕಾರ್ಮಿಕ ಪುರುಷರು ಹಾಗೂ ಮಹಿಳೆಯರು ಬರುತ್ತಾರೆ. ಅದೇ ರೀತಿ ಲಂಕಾಬಾಯಿ ಕೂಡ ತನ್ನ ಪತಿ ಹಾಗೂ ಮಕ್ಕಳ ಜೊತೆ ಬಂದಿದ್ದರು. ಬರುವ ವೇಳೆಯೇ ಅವರು ತುಂಬು ಗರ್ಭಿಣಿಯಾಗಿದ್ದರು. ಪ್ರಯಾಣದ ಆಯಾಸ ಹಾಗೂ ಕಬ್ಬು ಕಡಿಯುವ ಕಠಿಣ ಕೆಲಸದಿಂದಾಗಿ ಗರ್ಭಪಾತವಾಗಿದೆ. ಇದಕ್ಕೂ ಮುಂಚೆ ಅವರು 11 ಮಕ್ಕಳಿಗೆ ಜನ್ಮ ನೀಡಿದ್ದಾರೆ’ ಎಂದು ಡಾ.ಶಶಿಕಾಂತ ಮುನ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಮ್ಮಿಗಟ್ಟಿ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಂಕಾಬಾಯಿ ಅವರ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಆರೋಗ್ಯದಿಂದ ಇದ್ದಾರೆ. ಕುಟುಂಬ ಯೋಜನೆ ಪಾಲಿಸುವಂತೆ ಸಲಹೆ ನೀಡಿದ್ದೇವೆ. ಪ್ರತಿಬಾರಿ ಗರ್ಭ ಧರಿಸಿದಾಗ ಗರ್ಭಾಶಯ ಪೊರೆ ತೆಳುವಾಗುತ್ತದೆ. ಸಾಮಾನ್ಯ 4– 5 ಮಕ್ಕಳನ್ನು ಹೆರುವವರೆಗೆ ಗರ್ಭಾಶಯ ತಡೆದುಕೊಳ್ಳುತ್ತದೆ. ಆದರೆ, ಈ ಮಹಿಳೆ 12 ಬಾರಿ ಗರ್ಭ ಧರಿಸಿರುವುದು ಹಾಗೂ ಆರೋಗ್ಯದಿಂದ ಇರುವುದು ಆಶ್ಚರ್ಯದ ಸಂಗತಿ’ ಎಂದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು