ಶನಿವಾರ, ಮಾರ್ಚ್ 28, 2020
19 °C
ಸೆಂಧ್ವ, ಮುಂಗೇರ್‌ಗೆ ಹೋಗಿ ಶಸ್ತ್ರಾಸ್ತ್ರ ತಂದಿದ್ದ ಮಹಾರಾಷ್ಟ್ರದ ಮಾಜಿ ಕಾರ್ಪೊರೇಟರ್

ಹಿಟ್‌ಲಿಸ್ಟ್‌ನಲ್ಲಿದ್ದವರ ಹತ್ಯೆಗೆಂದೇ 15 ಪಿಸ್ತೂಲ್ ಖರೀದಿಸಿದ್ದರು!

ಎಂ.ಸಿ.ಮಂಜುನಾಥ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಬಳಿಕ ತಮ್ಮ ಹಿಟ್‌ಲಿಸ್ಟ್‌ನಲ್ಲಿದ್ದ ಇತರರನ್ನು ತ್ವರಿತವಾಗಿ ಮುಗಿಸಲೆಂದೇ ಹಂತಕರ ಜಾಲದ ಮುಖಂಡರು ಮಹಾರಾಷ್ಟ್ರದ ಸೆಂಧ್ವ ಹಾಗೂ ಉತ್ತರ ಪ್ರದೇಶದ ಮುಂಗೇರ್ ಜಿಲ್ಲೆಗಳಿಂದ 15 ಪಿಸ್ತೂಲ್‌ಗಳನ್ನು ತರಿಸಿಕೊಂಡಿದ್ದರು ಎಂಬ ಮಾಹಿತಿ ತನಿಖೆಯಿಂದ ಬಹಿರಂಗವಾಗಿದೆ.

ಹಿಂದೂ ಸಂಘಟನೆಗಳ ಮುಖಂಡ
ರಾದ ವೈಭವ್ ರಾವತ್, ಸುಧನ್ವ ಗೊಂಧಾಳೇಕರ್ ಹಾಗೂ ಶರದ್ ಕಲಾಸ್ಕರ್ ಅವರನ್ನು ಇತ್ತೀಚೆಗೆ ಬಂಧಿಸಿದ್ದ ಮಹಾರಾಷ್ಟ್ರದ ಎಟಿಎಸ್, 16 ಪಿಸ್ತೂಲ್‌ಗಳನ್ನು ಜಪ್ತಿ ಮಾಡಿತ್ತು. ಅವುಗಳಲ್ಲಿ 15 ಪಿಸ್ತೂಲ್‌ಗಳನ್ನು ಗೌರಿ ಹತ್ಯೆ ನಡೆದ ನಂತರ ಖರೀದಿಸಿದ್ದಾರೆ. ಬಾಕಿ ಒಂದು ಪಿಸ್ತೂಲ್ ಗೌರಿ ಹತ್ಯೆಗೆ ಬಳಸಿದ್ದು ಎನ್ನಲಾಗುತ್ತಿದೆ. ಅವೆಲ್ಲವನ್ನೂ ಗುಜರಾತ್ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಒಂದು ವಾರದಲ್ಲಿ ವರದಿ ಕೈಸೇರುವ ನಿರೀಕ್ಷೆ ಇದೆ ಎಂದು ಎಸ್ಐಟಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

10 ತಿಂಗಳಲ್ಲಿ ಸಾವಿರ ಕರೆ

‘ನಾಡಪಿಸ್ತೂಲ್ ಎಷ್ಟೇ ಗುಣಮಟ್ಟದ್ದಾದರೂ, ಏಳೆಂಟು ಬಾರಿ ಬಳಸಿದರೆ ಜಾಮ್ ಆಗಿಬಿಡುತ್ತದೆ. ಈಗಾಗಲೇ ಮಹಾರಾಷ್ಟ್ರದ ವಿಚಾರವಾದಿ ಗೋವಿಂದ ಪಾನ್ಸರೆ, ಕರ್ನಾಟಕದ ಸಂಶೋಧಕ ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಗೆ ಒಂದೇ ಪಿಸ್ತೂಲ್ ಬಳಸಿದ್ದರಿಂದ ಜಾಲದ ಮುಖಂಡರು ನಂತರದ ಕಾರ್ಯಾಚರಣೆಗಳಿಗೆ ಪಿಸ್ತೂಲ್ ಬದಲಿಸಲು ನಿರ್ಧರಿಸಿದ್ದರು. ಗುಣಮಟ್ಟದ ಪಿಸ್ತೂಲ್‌
ತರುವ ಜವಾಬ್ದಾರಿಯನ್ನು  ಮಹಾರಾಷ್ಟ್ರದ ಜಲ್ನಾ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ್‌ ಪಂಗಾರ್ಕರ್‌ಗೆ, ಅಮೋಲ್‌ಕಾಳೆ ಹಾಗೂ ಸುಧನ್ವ ವಹಿಸಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಪಂಗಾರ್ಕರ್‌ ಹಾಗೂ ಕಾಳೆಯ ಮೊಬೈಲ್ ಕರೆ ವಿವರ (ಸಿಡಿಆರ್) ಪರಿಶೀಲಿಸಿದಾಗ, 2017ರ ಏಪ್ರಿಲ್‌ನಿಂದ 2018ರ ಫೆಬ್ರುವರಿವರೆಗೆ ಅವರ ನಡುವೆ ಸಾವಿರಕ್ಕೂ ಹೆಚ್ಚು ಕರೆಗಳು ವಿನಿಮಯವಾಗಿದ್ದವು. ಪಂಗಾರ್ಕರ್‌ನ ಮೊಬೈಲ್ ಸೆಂಧ್ವ ಹಾಗೂ ಮುಂಗೇರ್‌ ಜಿಲ್ಲೆಗಳ ವ್ಯಾಪ್ತಿಯ ಟವರ್‌ಗಳಿಂದ ಹಲವು ಸಲ ಸಂಪರ್ಕ ಪಡೆದಿರುವುದು ‘ಟವರ್ ಡಂಪ್’ ತನಿಖೆಯಿಂದ ಗೊತ್ತಾಯಿತು. ಹೀಗಾಗಿ, ಆತನೇ ಆ ಪ್ರದೇಶಗಳಿಂದ ಪಿಸ್ತೂಲ್‌ಗಳನ್ನು ತಂದು ಸುಧನ್ವನಿಗೆ ನೀಡಿರುವುದು ಸ್ಪಷ್ಟವಾಗಿದೆ’ ಎಂದು ವಿವರಿಸಿದರು.

ನವೀನ್‌ ಬಂದದ್ದೂ ಪಿಸ್ತೂಲ್‌ಗಾಗಿ

‘ಸಾಹಿತಿ ಕೆ.ಎಸ್.ಭಗವಾನ್ ಅವರನ್ನು ಮುಗಿಸಲು ಬೇರೆ ಪಿಸ್ತೂಲ್ ಹೊಂದಿಸುವಂತೆ ಕಾಳೆ ಮದ್ದೂರಿನ ಕೆ.ಟಿ.ನವೀನ್‌ಕುಮಾರ್‌ಗೂ ಸೂಚಿಸಿದ್ದ. ಇದೇ ವಿಚಾರವಾಗಿ ನವೀನ್ ಹಾಗೂ ಸುಜಿತ್ ನಿತ್ಯ ಫೋನ್‌ ಸಂಭಾಷಣೆ ನಡೆಸಿದ್ದರು. ಇತ್ತ ಸಂಭಾಷಣೆ ಆಲಿಸುತ್ತಿದ್ದ ನಮ್ಮ ಸಿಬ್ಬಂದಿ, ಫೆ.18ರಂದು ಪಿಸ್ತೂಲ್ ಖರೀದಿಗಾಗಿ ನಗರಕ್ಕೆ ನವೀನ್ ಬರುತ್ತಿರುವ ವಿಚಾರ ತಿಳಿದುಕೊಂಡರು. ಆತ ಬ್ಯಾಟರಾಯನಪುರ ಅಥವಾ ಮೆಜೆಸ್ಟಿಕ್‌ನಲ್ಲಿ ಬಸ್ ಇಳಿಯ ಬಹುದೆಂದು ಎರಡೂ ಕಡೆ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದೆವು. ಆಗ ನವೀನ್ ಮೆಜೆಸ್ಟಿಕ್‌ನಲ್ಲಿ ಸಿಕ್ಕಿಬಿದ್ದಿದ್ದ’ ಎಂದು ಮಾಹಿತಿ ನೀಡಿದರು.

ಶ್ರೀಕೃಷ್ಣನ ಹೆಸರಿನಲ್ಲೇ ಕೋಡ್‌ವರ್ಡ್‌!

ಕಾಳೆಯು ತನ್ನ ಡೈರಿಯಲ್ಲಿ ಸುಧನ್ವನ ಹೆಸರನ್ನು ‘ಗೋವಿಂದ’ ಎಂದೂ, ಪಿಸ್ತೂಲಿಗೆ ‘ಸುದರ್ಶನ ಚಕ್ರ’ ಎಂದೂ ಬರೆದುಕೊಂಡಿದ್ದ. ಈ ರಹಸ್ಯ ಭಾಷೆಯ ಬಗ್ಗೆ ಅಧ್ಯಯನ ನಡೆಸಿದ ಎಸ್‌ಐಟಿ ಅಧಿಕಾರಿಗಳಿಗೆ, ಗೌರಿ ಹತ್ಯೆಗೆ ಪಿಸ್ತೂಲ್ ಕೊಟ್ಟವನೂ ಹಾಗೂ ಕೃತ್ಯದ ಬಳಿಕ ಕುಣಿಗಲ್‌ನ ಸುರೇಶ್‌ನಿಂದ ಅದನ್ನು ತೆಗೆದುಕೊಂಡು ಹೋದವನೂ ಸುಧನ್ವನೇ ಎಂಬುದು ಖಚಿತವಾಗಿದೆ.

‘ಸುಧನ್ವ ಎಂಬುವುದು ಕೃಷ್ಣ ಪರಮಾತ್ಮನ ಮತ್ತೊಂದು ಹೆಸರು. ಅದೇ ರೀತಿ ಗೋವಿಂದ ಕೂಡ. ‘ಕೃಷ್ಣ ಸುದರ್ಶನ ಚಕ್ರ ಬಿಟ್ಟರೆ, ಕೆಲಸ ಯಶಸ್ವಿಯಾಗುತ್ತಿತ್ತು. ಹಾಗೆಯೇ, ಆ ಚಕ್ರ ಸುರಕ್ಷಿತವಾಗಿ ವಾಪಸ್ ಕೃಷ್ಣನ ಕೈಸೇರುತ್ತಿತ್ತು. ನಮ್ಮ ಕಾರ್ಯಾಚರಣೆ ಕೂಡ ಹಾಗೆಯೇ ಇತ್ತು’ ಎಂದು ಕಾಳೆ ಹೇಳಿಕೆ ಕೊಟ್ಟಿದ್ದ. ಆ ಸಾಲು ಆಧರಿಸಿ ತನಿಖೆ ನಡೆಸಿದಾಗ ಸುಧನ್ವನ ಪಾತ್ರಕ್ಕೆ ಹೋಲಿಕೆಯಾಯಿತು. ಆ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಮೂರು ತಿಂಗಳು ಸುಮ್ಮನಾಗಿದ್ದೇಕೆ?

‘ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ದೃಶ್ಯ 2 ರಿಂದ 3 ತಿಂಗಳವರೆಗೆ ಮಾತ್ರ ಉಳಿಯುತ್ತದೆ ಎಂಬುದು ನಮಗೆ ಗೊತ್ತಿತ್ತು. ಹೀಗಾಗಿ, ನಾವೆಲ್ಲ ಏಪ್ರಿಲ್ ಹಾಗೂ ಮೇ ತಿಂಗಳಲ್ಲೇ ಗೌರಿ ಲಂಕೇಶ್ ಮನೆ ಹತ್ತಿರ ಹೋಗಿ ಅವರ ಚಲನವಲನಗಳನ್ನು ಗಮನಿಸಿದ್ದೆವು. ಯಾವ ಯಾವ ರಸ್ತೆಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳಿವೆ ಎಂಬುದನ್ನೂ ನೋಡಿ ಬಂದಿದ್ದೆವು. ಆ ನಂತರ ಮೂರು ತಿಂಗಳು ಬಿಡುವು ಕೊಟ್ಟು, ಕ್ಯಾಮೆರಾಗಳಿಲ್ಲದ ರಸ್ತೆಗಳಲ್ಲಿ ಸೆ.5ರಂದು ವಾಘ್ಮೋರೆ ಹಾಗೂ ಗಣೇಶ್ ಮಿಸ್ಕಿನ್‌ನನ್ನು ಬೈಕ್‌ನಲ್ಲಿ ಕಳುಹಿಸಿ ಗೌರಿ ಲಂಕೇಶ್‌ ಹತ್ಯೆ ಮಾಡಿಸಿದ್ದೆವು’ ಎಂದು ಕಾಳೆ ಹೇಳಿಕೆ ಕೊಟ್ಟಿರುವುದಾಗಿ ಎಸ್‌ಐಟಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮುಖ್ಯಾಂಶಗಳು
* 16 ಪಿಸ್ತೂಲ್‌ ಜಪ್ತಿ
* ಗುಜರಾತ್ ಎಫ್‌ಎಸ್‌ಎಲ್‌ಗೆ ಪಿಸ್ತೂಲ್‌ ರವಾನೆ
* ಭಗವಾನ್ ಹತ್ಯೆಗೆ ಪಿಸ್ತೂಲ್‌ ಹೊಂದಿಸಲು ಸಜ್ಜು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು