ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಾಯುಕ್ತ: ಸಿದ್ದರಾಮಯ್ಯ ವಿರುದ್ಧ 50 ಪ್ರಕರಣ ಬಾಕಿ

Last Updated 30 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ 2014ರ ಏಪ್ರಿಲ್‌ನಿಂದ 2018ರ ಮಾರ್ಚ್‌ 31ರ ವರೆಗೆ 61 ಪ್ರಕರಣಗಳು ದಾಖಲಾಗಿದ್ದು, 50 ಪ್ರಕರಣಗಳ ವಿಚಾರಣೆಯೇ ನಡೆದಿಲ್ಲ.

ವಿಂಗ್‌ ಕಮಾಂಡರ್‌ (ನಿವೃತ್ತ) ಜಿ.ಬಿ.ಅತ್ರಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಮಾಹಿತಿಗೆ ಲೋಕಾಯುಕ್ತ ಸಂಸ್ಥೆಯ ಉಪ ರಿಜಿಸ್ಟ್ರಾರ್ (ಆಡಳಿತ) ಅವರು ಈ ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಈ ದೂರುಗಳು ದಾಖಲಾಗಿದ್ದವು.

‘ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉದ್ದೇಶದಿಂದ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಸಿದ್ದರಾಮಯ್ಯ ಅವರ ವಿರುದ್ಧದ ಪ್ರಕರಣಗಳ ವಿಚಾರಣೆ ವಿಳಂಬದ ಹಿಂದೆ ರಾಜಕೀಯ ಪ್ರಭಾವದ ಶಂಕೆ ಇದೆ. ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ದುರುದ್ದೇಶದಿಂದಲೇ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಸ್ಥಾಪಿಸಿದರು. ಲೋಕಾಯುಕ್ತ ಸಂಸ್ಥೆಯ ಎಲ್ಲ ಅಧಿಕಾರಗಳನ್ನು ಕಿತ್ತುಕೊಂಡಿದ್ದು, ಸಂಸ್ಥೆ ಹಲ್ಲು ಕಿತ್ತ ಹಾವಿನಂತಾಗಿದೆ’ ಎಂದು ಅತ್ರಿ ಹೇಳಿದರು.

‘35 ವರ್ಷಗಳ ಸಂಸ್ಥೆಯ ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಇಷ್ಟೊಂದು ಪ್ರಮಾಣದಲ್ಲಿ ದೂರು ದಾಖಲಾಗಿಲ್ಲ. ತಾವೊಬ್ಬ ಸಮಾಜವಾದಿ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಇಷ್ಟೊಂದು ಪ್ರಕರಣಗಳನ್ನು ಹೆಗಲಲ್ಲಿ ಇಟ್ಟುಕೊಂಡು ಕುಖ್ಯಾತಿ ಗಳಿಸಿರುವವರು ಸಮಾಜವಾದಿ ಹೇಗಾಗುತ್ತಾರೆ. ಲೋಕಾಯುಕ್ತರು ಹಗಲು ರಾತ್ರಿ ವಿಚಾರಣೆ ನಡೆಸಿ ಪ್ರಕರಣ ನಿಜವೇ ಅಥವಾ ಸುಳ್ಳೇ ಎಂಬುದನ್ನು ಬಹಿರಂಗ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

‘ಸಂಸ್ಥೆಯಲ್ಲಿ 7 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಜ್ಯೇಷ್ಠತೆಯ ಆಧಾರದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಯಾವುದೇ ಪ್ರಕರಣಗಳ ವಿಚಾರಣೆ ವಿಳಂಬ ಮಾಡಿಲ್ಲ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT