ಗುರುವಾರ , ನವೆಂಬರ್ 14, 2019
19 °C

ಮುಂಬೈ ತಂಡ ಸೇರಿದ ಬೋಪಯ್ಯ, ಅಶೋಕ್

Published:
Updated:

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಂಬೈ ಹೋಟೆಲ್‌ನಲ್ಲಿ ತಂಗಿರುವ ಕಾಂಗ್ರೆಸ್, ಜೆಡಿಎಸ್ ಮುಖಂಡರ ತಂಡವನ್ನು ಬುಧವಾರ ವಿಧಾನಸಭೆ ಮಾಜಿ ಅಧ್ಯಕ್ಷ ಬಿಜೆಪಿಯ ಕೆ.ಜಿ.ಬೋಪಯ್ಯ, ಶಾಸಕ ಆರ್‌.ಅಶೋಕ್ ಸೇರಿಕೊಂಡಿದ್ದಾರೆ.

ಐವರು ಶಾಸಕರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿವೆ. ಉಳಿದವರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಪ್ರಕಟಿಸಿದ್ದಾರೆ. ತಂಡದಲ್ಲಿರುವ ಬಹುತೇಕರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ. ಹಾಗಾಗಿ ವಿಧಾನಸಭೆ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿ ಅನುಭವ ಇರುವ ಬೋಪಯ್ಯ ಅವರಿಂದ ಮಾಹಿತಿ ಕೊಡಿಸಲು ಮುಂಬೈಗೆ ಕರೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗುತ್ತಿದೆ.

ಸಚಿವರಾದ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ ಮುಂಬೈಗೆ ಹೋಗಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸುವ ಪ್ರಯತ್ನ ನಡೆಸಿದರು. ಏನಾದರೂ ಸಮಸ್ಯೆಯಾದರೆ ಬೆಂಬಲಕ್ಕೆ ಇರಲಿ ಎಂದು ಅಶೋಕ್ ಅವರನ್ನು ಕರೆದುಕೊಂಡು ಹೋಗಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೋಟೆಲ್‌ನಲ್ಲಿ ತಂಗಿದ್ದ ಮುಖಂಡರು ಸಚಿವರನ್ನು ಭೇಟಿಯಾಗಲು ನಿರಾಕರಿಸಿದರು. ‘ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ.‌ ಯಾರನ್ನೂ ಭೇಟಿ ಮಾಡುವುದಿಲ್ಲ. ಶಿವಕುಮಾರ್ ಬಗ್ಗೆ ನಮಗೆ ಗೌರವವಿದೆ. ಆದರೆ ಇದು ರಾಜಕೀಯ. ವೈಯಕ್ತಿಕವಾಗಿ ಅವರ ಜತೆ ಒಡನಾಟವಿದೆ. ಆದರೆ ಈ ಸಂದರ್ಭದಲ್ಲಿ ಭೇಟಿ ಅಸಾಧ್ಯ’ ಎಂಬ ಹೇಳಿಕೆ ನೀಡಿ ಭೇಟಿ ಮಾಡಲಿಲ್ಲ.

ಪ್ರತಿಕ್ರಿಯಿಸಿ (+)