ವಿಶ್ವವಿದ್ಯಾಲಯ ಕುಲಪತಿಗಳ ನೇಮಕಕ್ಕೆ ಶೈಕ್ಷಣಿಕ ವಲಯ ಆಕ್ಷೇಪ

7
ಸಮ್ಮಿಶ್ರ ಸರ್ಕಾರದ ಸಹಮತ ಪಡೆಯದೆ ಆದೇಶ?

ವಿಶ್ವವಿದ್ಯಾಲಯ ಕುಲಪತಿಗಳ ನೇಮಕಕ್ಕೆ ಶೈಕ್ಷಣಿಕ ವಲಯ ಆಕ್ಷೇಪ

Published:
Updated:

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯ, ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ರಾಜ್ಯ ಸರ್ಕಾರದ ಸಹಮತವಿಲ್ಲದೆ ರಾಜ್ಯಪಾಲ ವಜುಭಾಯಿ ವಾಲಾ ನೇಮಿಸಿದ್ದಾರೆ’ ಎಂದು ಶೈಕ್ಷಣಿಕ ವಲಯದಲ್ಲಿ ಅಪಸ್ವರ ಕೇಳಿಬಂದಿದೆ.

ಬೆಂಗಳೂರು ವಿವಿಗೆ ವೇಣುಗೋಪಾಲ್‌, ಆರೋಗ್ಯ ವಿವಿಗೆ ಡಾ ಎಸ್‌. ಸಚ್ಚಿದಾನಂದ ಹಾಗೂ ಕಾನೂನು ವಿವಿಗೆ ಈಶ್ವರ ಭಟ್‌ ಅವರನ್ನು ಕುಲಾಧಿಪತಿಗಳೂ ಆದ ವಾಲಾ ಕಳೆದ ವಾರ ನೇಮಕ ಮಾಡಿದ್ದಾರೆ. ‘ಅಧಿಕೃತ ಆದೇಶ ಹೊರಡಿಸುವ ಮುನ್ನ ಸರ್ಕಾರದ ಸಹಮತ ಪಡೆಯಬೇಕಿತ್ತು. ಆದರೆ, ಈ ನೇಮಕಕ್ಕೆ ಸರ್ಕಾರದ ಸಹಮತ ಇದ್ದಂತಿಲ್ಲ’ ಎಂದು ಅನೇಕ ಶಿಕ್ಷಣ ತಜ್ಷರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ವಿಶ್ವವಿದ್ಯಾಲಯಗಳು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಕುಲಪತಿಗಳು ಇಲ್ಲದೆ ಸೊರಗಿದ್ದವು. ಶೋಧನಾ ಸಮಿತಿಗಳು, ಕುಲಪತಿಗಳ ಹುದ್ದೆಗೆ ಅರ್ಹರ ಹೆಸರನ್ನು ಶಿಫಾರಸು ಮಾಡಿದ್ದರೂ ರಾಜಭವನ– ಸರ್ಕಾರದ ನಡುವಿನ ತಿಕ್ಕಾಟದಿಂದ ನೇಮಕ ವಿಳಂಬವಾಗಿತ್ತು. ಈಗ ಮೂರು ವಿವಿಗಳಿಗೆ ಕುಲಪತಿಗಳನ್ನು ನೇಮಿಸಲಾಗಿದೆ. ಇನ್ನೂ ಮೈಸೂರು ವಿವಿ ಕುಲಪತಿ ನೇಮಕ ಆಗಬೇಕಾಗಿದೆ. 

ತಿಕ್ಕಾಟ ಏಕೆ?
ರಾಜ್ಯ ಸರ್ಕಾರ ಹೇಳಿದ ಹೆಸರನ್ನು ರಾಜ್ಯಪಾಲರು ಒಪ್ಪುತ್ತಿರಲಿಲ್ಲ. ರಾಜ್ಯಪಾಲರು ಸೂಚಿಸಿದ ಹೆಸರಿಗೆ ಸರ್ಕಾರದ ಸಹಮತ ಇರಲಿಲ್ಲ. ಹೀಗಾಗಿ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಕಗ್ಗಂಟಾಗಿ ಉಳಿದಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ– 2000ದ ಸೆಕ್ಷನ್‌ 14 (4) ರ ಅನ್ವಯ ‘ಶೋಧನಾ ಸಮಿತಿ, ಮೂವರು ಅರ್ಹರ ಹೆಸರನ್ನು ಕುಲಪತಿ ಹುದ್ದೆಗೆ ಅನುಕ್ರಮವಾಗಿ ಶಿಫಾರಸು ಮಾಡಬೇಕು. ಸರ್ಕಾರ ಅದನ್ನು ರಾಜ್ಯಪಾಲರಿಗೆ ಕಳಿಸಬೇಕು. ರಾಜ್ಯಪಾಲರು ಅರ್ಹತೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ಮೊದಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಒಬ್ಬರನ್ನು ಸರ್ಕಾರದ ಸಹಮತದೊಂದಿಗೆ ನೇಮಕ ಮಾಡಬೇಕು. ಆದರೆ, ಈ ನಿಯಮ ಪಾಲನೆಯಾಗಿಲ್ಲ’ ಎಂದು ಉನ್ನತ ಮೂಲಗಳು ಹೇಳಿವೆ.

‘ವೇಣುಗೋಪಾಲ್‌, ಸಚ್ಚಿದಾನಂದ ಹಾಗೂ ಈಶ್ವರ ಭಟ್‌ ಅವರ ಹೆಸರು ಹಿಂದಿನ ಸರ್ಕಾರದ ಅವಧಿಯಲ್ಲೇ ಶಿಫಾರಸು ಆಗಿದ್ದವು. ವೇಣುಗೋಪಾಲ್‌ ಸೇರಿದಂತೆ ಒಂದೆರಡು ಹೆಸರಿನ ಬಗ್ಗೆ ತಕರಾರು ಇದ್ದುದ್ದರಿಂದ ನೇಮಕಾತಿ ವಿಳಂಬವಾಗಿತ್ತು. ಇದರ ನಡುವೆ ವಿಧಾನಸಭೆ ಚುನಾವಣೆ ಬಂದಿದ್ದರಿಂದ ಶಿಫಾರಸು ರಾಜಭವನದಲ್ಲೇ ಉಳಿಯಿತು. ಚುನಾವಣೆ ಮುಗಿದು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ, ಮೂರು ವಿವಿಗಳ ಕುಲಪತಿಗಳ ನೇಮಕಾತಿ ನಡೆದಿದೆ. ಆದರೆ, ಇದಕ್ಕೆ ಹೊಸ ಸರ್ಕಾರದ ಸಹಮತ ಸಿಕ್ಕಿಲ್ಲ’ ಎಂದೂ ಮೂಲಗಳು ಖಚಿತಪಡಿಸಿವೆ. 

‘ನನಗೆ ಉನ್ನತ ಶಿಕ್ಷಣ ಇಲಾಖೆ ಬೇಡ; ಬೇರೆ ಇಲಾಖೆ ಕೊಡಿ’ ಎಂದು ಸಚಿವ ಜಿ.ಟಿ.ದೇವೇಗೌಡರು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಮುಂದೆ ಬೇಡಿಕೆ ಇಟ್ಟಿದ್ದಾಗಲೇ, ಹೊಸ ಕುಲಪತಿಗಳ ಪಟ್ಟಿಯೂ ಬಿಡುಗಡೆ ಆಗಿದೆ. ಹೀಗಾಗಿ, ಕುಲಪತಿಗಳ ನೇಮಕ ವಿಷಯ ಮುಖ್ಯಮಂತ್ರಿ ಅಥವಾ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ಬಂದಿಲ್ಲ’ ಎಂದೂ ಮೂಲಗಳು ತಿಳಿಸಿವೆ. 

ಈ ಬಗ್ಗೆ ಪ್ರತಿಕ್ರಿಯಿಸಲು ರಾಜಭವನದ ಮೂಲಗಳು ನಿರಾಕರಿಸಿವೆ. ರಾಜಭವನದ ಹಿರಿಯ ಅಧಿಕಾರಿಯೊಬ್ಬರು ರಾಜ್ಯಪಾಲರ ಕಚೇರಿಯಲ್ಲಿರುವ ಶಿಕ್ಷಣ ವಿಭಾ್ವನ್ನು ಸಂಪರ್ಕಿಸುವಂತೆ ಹೇಳಿದರು. ಆದರೆ, ಶಿಕ್ಷಣ ವಿಭಾಗದ ಅಧಿಕಾರಿಗಳು ದೂರವಾಣಿಗೇ ಸಿಗಲಿಲ್ಲ.

ಅಧಿಕಾರ ಇದೆ: ‘ರಾಜ್ಯ ಸರ್ಕಾರ ಕಳುಹಿಸಿದ್ದ ಹೆಸರುಗಳಲ್ಲಿ ಯಾವುದನ್ನಾದರೂ ಅಂತಿಮಗೊಳಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ಒಮ್ಮೆ ಅರ್ಹ ಅಭ್ಯರ್ಥಿಗಳ ಪಟ್ಟಿ ರಾಜಭವನಕ್ಕೆ ಬಂದ  ಮೇಲೆ ಪುನಃ ಕೇಳಬೇಕು ಎಂದೇನಿಲ್ಲ’ ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

‘ಆರೋಪಗಳಿದ್ದರೂ ವೇಣುಗೋಪಾಲ್‌ ನೇಮಕ’
ಹಿಂದಿನ ಸರ್ಕಾರದ ಶಿಫಾರಸ್ಸನ್ನು ಲೆಕ್ಕಿಸದೆ, ಕೆ.ಆರ್‌. ವೇಣುಗೋಪಾಲ್‌ ಅವರನ್ನು ಬೆಂಗಳೂರು ವಿವಿ ಕುಲಪತಿಯಾಗಿ ರಾಜ್ಯಪಾಲರು ನೇಮಕ ಮಾಡಿದ್ದಾರೆ ಎನ್ನಲಾಗಿದೆ.

ಯು.ವಿ.ಸಿ.ಇ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ವೇಣುಗೋಪಾಲ್‌, ಉದ್ಯೋಗಕ್ಕೆ ಸೇರಲು ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿದ್ದರು. ಇದು ಗಂಭೀರ ಆರೋಪವಾದ್ದರಿಂದ ಅವರನ್ನು ಕೆಲಸದಿಂದ ವಜಾ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಶಿಫಾರಸು ಮಾಡಿತ್ತು.

ಅಲ್ಲದೆ, ತರಗತಿಗೆ ಗೈರು ಹಾಜರಾಗಿದ್ದರೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟ ವೇಣುಗೋಪಾಲ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪ ಲೋಕಾಯುಕ್ತ ಸರ್ಕಾರಕ್ಕೆ ವರದಿ ನೀಡಿದ್ದರು. ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರವು ಅವರನ್ನು ಕುಲಪತಿ ಹುದ್ದೆಗೆ ನೇಮಕ ಮಾಡಬಾರದು ಎಂದು ರಾಜ್ಯಪಾಲರಿಗೆ ಹೇಳಿತ್ತು.

ಬೆಂಗಳೂರು ವಿವಿ ಕುಲಪತಿ ಹುದ್ದೆಗೆ ಅರ್ಹರ ಹೆಸರನ್ನು ಶಿಫಾರಸು ಮಾಡಲು ನೇಮಕಗೊಂಡಿದ್ದ ಸಮಿತಿ ಮೊದಲಿಗೆ ಪ್ರೊ. ನಾಗಭೂಷಣ್‌, ಸಂಗಮೇಶ ಪಾಟೀಲ ಹಾಗೂ ವೇಣುಗೋಪಾಲ್‌ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಹಿಂದಿನ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರು ಪಾಟೀಲರ ನೇಮಕಕ್ಕೆ ಒಲವು ತೋರಿದ್ದರು.

ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ತಿಕ್ಕಾಟದಿಂದ ಶಿಫಾರಸು ವಾಪಸ್‌ ಬಂದಿತ್ತು. ಎರಡನೇ ಬಾರಿಗೆ ತಜ್ಞರ ಸಮಿತಿಯು ನಾಗಭೂಷಣ್‌ ಅವರ ಹೆಸರನ್ನು ಬಿಟ್ಟು ಬೆಂಗಳೂರು ವಿವಿ ಪ್ರಾಧ್ಯಾಪಕ ಪ್ರೊ. ಲಿಂಗೇಗೌಡರ ಹೆಸರನ್ನು ಸೇರ್ಪಡೆ ಮಾಡಿತ್ತು. ಉಳಿದೆರಡು ಹೆಸರುಗಳನ್ನು ಹಾಗೆ ಉಳಿಸಿ ಹೊಸ ಪಟ್ಟಿ ಕಳುಹಿಸಿತ್ತು. ಅಂತಿಮವಾಗಿ ವೇಣುಗೋಪಾಲ್‌ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದಾರೆ.

ಈ ಕುರಿತ ಪ್ರತಿಕ್ರಿಯೆಗೆ ವೇಣುಗೋಪಾಲ್‌ ಅವರು ಸಿಗಲಿಲ್ಲ 

 *****

ವಿವಿ ಕುಲಪತಿಗಳನ್ನು ರಾಜ್ಯಪಾಲರು ನೇಮಿಸುವಾಗ ಸರ್ಕಾರದ ಸಹಮತ ಕಡ್ಡಾಯ. ಶೋಧನಾ ಸಮಿತಿ ಶಿಫಾರಸು ಮಾಡಿದ ಮೂರು ಹೆಸರುಗಳಲ್ಲಿ ಒಂದನ್ನು ಸರ್ಕಾರ ಟಿಕ್‌ ಮಾಡಬೇಕು
ಎಂ.ಎಸ್‌. ತಿಮ್ಮಪ್ಪ, ವಿಶ್ರಾಂತ ಕುಲಪತಿ, ಬೆಂಗಳೂರು ವಿವಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !