ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ನಿಂದನೆ ನಿಶ್ಚಿತ: ಆಚಾರ್ಯ

ಅತೃಪ್ತ ಶಾಸಕರ ಅನರ್ಹತೆ–ಸ್ಪೀಕರ್‌ ನಡೆ ಕ್ರಮಬದ್ಧ: ರವಿವರ್ಮ ಕುಮಾರ್‌
Last Updated 28 ಜುಲೈ 2019, 18:38 IST
ಅಕ್ಷರ ಗಾತ್ರ

ಬೆಂಗಳೂರು:‘ಸಭಾಧ್ಯಕ್ಷರಆದೇಶ ಕಾನೂನು ಬಾಹಿರ. ಸುಪ್ರೀಂ ಕೋರ್ಟ್ ಶಾಸಕರ ರಾಜೀನಾಮೆ ಇತ್ಯರ್ಥ ಮಾಡಲು ಸೂಚಿಸಿತ್ತು. ಇದೀಗ ಶಾಸಕರನ್ನು ಅನರ್ಹ ಮಾಡಿರುವುದು ನ್ಯಾಯಾಂಗ ನಿಂದನೆಯಾಗಲಿದೆ’ ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಹೇಳಿದರು.

‘ಶಾಸಕರನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸಭಾಧ್ಯಕ್ಷರುಕೈಗೊಂಡಿಲ್ಲ. ಮೊದಲು ರಾಜೀನಾಮೆ ಸ್ವೀಕರಿಸಿ, ಸದನಕ್ಕೆ ಬರುವುದು, ಬಿಡುವುದು ಶಾಸಕರ ಹಕ್ಕು ಎಂಬುದನ್ನು ಸುಪ್ರೀಂ ಕೋರ್ಟ್‌ ತನ್ನ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಇದನ್ನು ಸಭಾಧ್ಯಕ್ಷರು ಪಾಲಿಸಬೇಕಿತ್ತು. ಹಾಗೆ ಮಾಡದ ಕಾರಣ ಅವರು ನ್ಯಾಯಾಂಗ ನಿಂದನೆಗೆ ಗುರಿಯಾಗುವ ಅಪಾಯ ಇದೆ’ ಎಂದು ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಸಕರು ಸಭಾಧ್ಯಕ್ಷರಿಗೆ ಮೊದಲಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಬಳಿಕ ಅನರ್ಹತೆ ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಅದೇ ಪ್ರಕಾರವೇ ಸಭಾಧ್ಯಕ್ಷರು ತೀರ್ಪನ್ನೂ ನೀಡಬೇಕಿತ್ತು. ರಾಜೀನಾಮೆ ಬಗ್ಗೆ ಕ್ರಮ ಕೈಗೊಳ್ಳದೆ ಅನರ್ಹತೆ ಬಗ್ಗೆ ಮಾತ್ರ ಕ್ರಮ ಕೈಗೊಂಡಿದ್ದು ಅವರು ಯಾರದೋ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಸಂಶಯಕ್ಕೆ ಎಡೆಮಾಡಿದೆ’ ಎಂದು ಅಭಿಪ್ರಾಯಪಟ್ಟರು.

‘ಸಭಾಧ್ಯಕ್ಷರು ನೈಸರ್ಗಿಕ ನ್ಯಾಯ ವಿಧಾನವನ್ನು ಉಲ್ಲಂಘಿಸಿದ್ದಾರೆ. ಅನರ್ಹತೆ ಕುರಿತಂತೆ ಕೇವಲ ಮೂರು ದಿನ ಕಾಲಾವಕಾಶ ನೀಡಿದ ಅವರು, ರಾಜೀನಾಮೆ ಕುರಿತಂತೆ ಹಲವು ದಿನಗಳಿಂದ ನಿರ್ಧಾರ ಕೈಗೊಳ್ಳಲೇ ಇಲ್ಲ. ರಾಜೀನಾಮೆ ಪತ್ರ ಸ್ವೀಕರಿಸುವ ವಿಚಾರದಲ್ಲಿ ಶನಿವಾರ, ಭಾನುವಾರ ರಜೆ ಎಂದು ಹೇಳುತ್ತಿದ್ದ ಅವರು, ಅನರ್ಹತೆ ಬಗ್ಗೆ ತೀರ್ಮಾನಿಸಲು ಶನಿವಾರ, ಭಾನುವಾರಗಳಂದು ಕಚೇರಿಗೆ ಬಂದು ತೀರ್ಪು ನೀಡಿದ್ದಾರೆ. ಇದು ಅವರ ಪಕ್ಷಪಾತ ಧೋರಣೆಯನ್ನು ತೋರಿಸುತ್ತದೆ’ ಎಂದು ಹೇಳಿದರು.

‘ಸಭಾಧ್ಯಕ್ಷರಿಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಇದ್ದರೂ, 2023ರವರೆಗೆ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಆದೇಶ ನೀಡುವಂತಿಲ್ಲ’ ಎಂದರು.

‘ಸಭಾಧ್ಯಕ್ಷರ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಕ್ಷಣಕ್ಕೆತಡೆಯಾಜ್ಞೆ ನೀಡುವಸಾಧ್ಯತೆ ಇದೆ. ಹೀಗಿದ್ದಾಗ ಅನರ್ಹಗೊಂಡ ಶಾಸಕರೆಲ್ಲ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘ಅನರ್ಹತೆ ಕ್ರಮ ನ್ಯಾಯಸಮ್ಮತ’
‘ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಪರಮೋಚ್ಚ ಅಧಿಕಾರ ಹೊಂದಿದ್ದಾರೆ. ಸುಪ್ರೀಂ ಕೋರ್ಟ್‌ ಸಹ ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸಂವಿಧಾನ ಪೀಠವೇ ತೀರ್ಪು ನೀಡಿದೆ. ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸಭಾಧ್ಯಕ್ಷರ ಕ್ರಮ ನ್ಯಾಯ ಸಮ್ಮತವಾಗಿಯೇ ಇದೆ’ ಎಂದು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಹೇಳಿದರು.

‘ಸಭಾಧ್ಯಕ್ಷರು ನೀಡಿರುವ ಈ ತೀರ್ಪಿಗೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಬೆಂಬಲ ಇದೆ. ಒಂದು ವೇಳೆ ಅತೃಪ್ತ ಶಾಸಕರು ತಮ್ಮ ಅನರ್ಹತೆ ತೀರ್ಪನ್ನು ಮರುಪರಿಶೀಲಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಒಂದೇ ನಿಮಿಷದಲ್ಲಿ ಅದು ತಿರಸ್ಕಾರಗೊಳ್ಳುವ ಸಾಧ್ಯತೆ ಇದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಸಭಾಧ್ಯಕ್ಷರ ತೀರ್ಪಿನಿಂದ ಬಿಜೆಪಿಗೆ ಅನುಕೂಲವಂತೂ ಆಗಿದೆ. ಅತೃಪ್ತರ ಸಚಿವ ಸ್ಥಾನ ಬೇಡಿಕೆಯಿಂದ ಸದ್ಯಕ್ಕೆ ತಪ್ಪಿಸಿಕೊಂಡಂತಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT