ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲ್ಪವನಕ್ಕೆ 18 ಸಾವಿರ ಪ್ರವಾಸಿಗರು ಭೇಟಿ

ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ನಿರ್ಮಾಣ: ಒಂದೇ ತಿಂಗಳಲ್ಲಿ ಉತ್ತಮ ಆದಾಯ ಗಳಿಕೆ
Last Updated 2 ಏಪ್ರಿಲ್ 2018, 11:30 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಫೆಬ್ರುವರಿ ಕೊನೆಯ 25ರಂದು ಉದ್ಘಾಟನೆಯಾದ ಶಿಲ್ಪವನ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರವಾಸೋದ್ಯಮ ಇಲಾಖೆಗೂ ಉತ್ತಮ ಆದಾಯ ತರುತ್ತಿದೆ. ವಾರದ ದಿನಗಳಲ್ಲಿ ಪ್ರತಿದಿನ ಕನಿಷ್ಠ 400, ವಾರಾಂತ್ಯದಲ್ಲಿ 1000ಕ್ಕೂ ಅಧಿಕ ನಾಗರಿಕರು ಭೇಟಿ ನೀಡುತ್ತಿದ್ದಾರೆ.ಶಿಲ್ಪವನದ ಬಗ್ಗೆ ಗೂಗಲ್, ಫೇಸ್‌ಬುಕ್, ಟ್ವಿಟರ್, ವಾಟ್ಸ್‌ ಆ್ಯಪ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಮಾಹಿತಿ ಸಿಗುತ್ತಿದ್ದು, ದೂರದೂರುಗಳ ಪ್ರವಾಸಿಗರ ಕುತೂ ಹಲ ಕೆರಳಿಸಿದೆ. ಪ್ರತಿಮೆಗಳ ಪಕ್ಕದಲ್ಲೇ ನಿಂತು ಫೋಟೊ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ನಿರ್ಬಂಧ ಇಲ್ಲದಿರುವುದೂ ಪ್ರವಾಸಿಗರ ಆಕರ್ಷಣೆ ಹೆಚ್ಚಲು ಕಾರಣವಾಗಿದೆ ಎನ್ನುತ್ತಾರೆ ಲಾವಣ್ಯಾ.

ವಯಸ್ಕರಿಗೆ ₹ 35 , ಮಕ್ಕಳಿಗೆ ₹ 25 ಪ್ರವೇಶದರ ನಿಗದಿ ಮಾಡಲಾಗಿದೆ. ಸುಮಾರು ₹ 3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಈ ಉದ್ಯಾನದ ನಿರ್ವ
ಹಣೆಗೆ ಹಣ ಇದರಿಂದಲೇ ಹೊಂದಾಣಿಕೆ ಆಗಬೇಕು ಎಂಬುದು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ಗುರಿಯಾಗಿದೆ. ಪ್ರವೇಶ ದರದಿಂದ ಸಿಗುವ ಲಾಭದಲ್ಲಿ ಶೇ 50ರಷ್ಟು ರವೀಂದ್ರನಾಥ ಟ್ಯಾಗೋರ್ ಕಡಲತೀರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿಗೆ ದೊರೆಯಲಿದ್ದು, ಸಿಬ್ಬಂದಿ ವೇತನವನ್ನೂ ಹಣದಲ್ಲೇ ನಿಭಾಯಿಸಲಾಗುತ್ತದೆ. ಆರು ಎಕರೆ ಪ್ರದೇಶದಲ್ಲಿ ವಿನ್ಯಾಸ ಮಾಡಲಾಗಿರುವ ಉದ್ಯಾನದಲ್ಲಿ ಜಿಲ್ಲೆಯ ಬುಡಕಟ್ಟು ಸಂಸ್ಕೃತಿ, ಯಕ್ಷಗಾನ, ಮೀನುಗಾರರ ಜೀವನ ಕಟ್ಟಿಕೊಡುವ ರೀತಿಯ ಪ್ರತಿಮೆಗಳನ್ನು ಕಲಾವಿದರ ತಂಡ ನಿರ್ಮಿಸಿದೆ. ವಿವಿಧ ಸಮುದಾಯದವರ ನೈಜ ಎತ್ತರದ ಪ್ರತಿಮೆಗಳು ಹಾಗೂ ಅವರ ಜೀವನ ಶೈಲಿ ಬಿಂಬಿಸುವ ರೀತಿಯಲ್ಲಿ ಗುಡಿಸಲುಗಳು, ಅವರ ಸಾಕುಪ್ರಾಣಿಗಳ ಪ್ರತಿಕೃತಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಕಲಾವಿದ ಮೋಹನ್ಸೋನಾ, ‘ಮುಂದಿನ ದಿನಗಳಲ್ಲಿ ಇಲ್ಲಿನ ಗುಡಿಸಲುಗಳ ಅಂದವನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ. ಆಯಾ ಸಮುದಾಯಗಳು ಬಳಸುವ ಪರಿಕರಗಳು, ಅವರ ಉಡುಪು ಗುಡಿಸಲುಗಳಲ್ಲಿ ಇಟ್ಟು ವಸ್ತು ಸಂಗ್ರಹಾಲಯವನ್ನಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಈ ಮೂಲಕ ಜಿಲ್ಲೆಯ ಸಂಸ್ಕೃತಿಯ ರಕ್ಷಣೆ ಹಾಗೂ ಪರಿಚಯಕ್ಕೆ ಯತ್ನಿಸಲಾಗುತ್ತದೆ’ ಎಂದರು. ಪ್ರತಿ ಭಾನುವಾರ ಸಂಜೆ 5ರಿಂದ 7ರವರೆಗೆ
ಶಿಲ್ಪವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ಬುಡಕಟ್ಟು, ಜಾನಪದ ಕಲಾ ತಂಡಗಳನ್ನು ಆಹ್ವಾನಿಸಿ ಅವರಿಂದ ಸಾಂಸ್ಕೃತಿಕ ಪರಿಚಯ ಮಾಡಿಸಲಾಗುತ್ತಿದೆ. ಕಲಾವಿದರಿಗೆ ಗೌರವಧನವನ್ನೂ ನೀಡಲಾಗುತ್ತಿದೆ.

ಎರಡು ದ್ವಾರಕ್ಕೆ ಬೇಡಿಕೆ

ಶಿಲ್ಪವನದ ಪ್ರವೇಶದ್ವಾರವು ನಗರದಿಂದ ಸ್ವಲ್ಪ ದೂರದಲ್ಲಿದೆ. ಆದ್ದರಿಂದ ಆಂಜನೇಯನ ವಿಗ್ರಹ ಇರುವ ಕಡಲತೀರದ ಭಾಗದಲ್ಲಿ ಮತ್ತೊಂದು ಪ್ರವೇಶದ್ವಾರ ತೆರೆಯಬೇಕು. ಇದರಿಂದ ಹೋಟೆಲ್‌ ಬಳಿ ವಾಹನ ನಿಲ್ಲಿಸಿ ನಡೆದುಕೊಂಡು ಬರುವವರಿಗೆ ಅನುಕೂಲವಾಗುತ್ತದೆ. ಈ ಮೂಲಕ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಬಹುದು ಎನ್ನುವ ಅಭಿಪ್ರಾಯ ಸ್ಥಳೀಯ ನಿವಾಸಿ ಮಯಾಂಕ್ ಅವರದ್ದು.

**

ಕೆಲ ಯೋಜನೆ ಆರಂಭದ ಬಳಿಕ ಉಳಿಯುತ್ತವೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತದೆ. ಆದರೆ, ಶಿಲ್ಪವನವನ್ನು ಪ್ರೀತಿಸಿದ್ದು, ನಮ್ಮ ಶ್ರಮ ಸಾರ್ಥಕ ಎಂಬ ಭಾವನೆ ಮೂಡಿದೆ – ಮೋಹನ್ ಸೋನಾ, ಕಲಾವಿದ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT