ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆಗೆ ಅಮಿತ್‌ ಶಾ ಅಸ್ತು: ಮುಂದಿದೆ ಕಸರತ್ತು

13 ಶಾಸಕರಿಗೆ ಸಚಿವ ಭಾಗ್ಯ l ಸೋಮವಾರ ಪ್ರಮಾಣ ವಚನ ಸಾಧ್ಯತೆ
Last Updated 31 ಜನವರಿ 2020, 20:15 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ/ ಬೆಂಗಳೂರು: ಸರ್ಕಾರ ಅಸ್ತಿತ್ವಕ್ಕೆ ಬರಲು ನೆರವಾದ ‘ಅರ್ಹ’ ಶಾಸಕರಿಗೆ ಮಂತ್ರಿ ಭಾಗ್ಯ ಕೊಡಿಸಲೇಬೇಕೆಂಬ ಜಿದ್ದಿಗೆ ಬಿದ್ದಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ‘ಛಲ’ಕ್ಕೆ ಕೊನೆಗೂ ಮಣಿದ ಬಿಜೆಪಿ ವರಿಷ್ಠರು ಅಳೆದು ತೂಗಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಿದ್ದಾರೆ.

ವಿಸ್ತರಣೆ ವೇಳೆ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಮತ್ತು ಯಾರಿಗೆ ಯಾವ ಖಾತೆ ಹಂಚಬೇಕು ಎಂಬ ಕಸರತ್ತು ನಡೆಸಿ, ಉತ್ತಮ ಆಡಳಿತ ಕೊಡುವ ಸವಾಲು ಈಗ ಮುಖ್ಯಮಂತ್ರಿ ಹೆಗಲೇರಿದೆ.

ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ದೆಹಲಿಯ ಸಂಸತ್‌ ಭವನದಲ್ಲಿ ಶುಕ್ರವಾರ ಸಂಜೆ ಅರ್ಧ ಗಂಟೆ ಸಮಾಲೋಚನೆ ನಡೆಸಿ, ಸಂಭಾವ್ಯ ಸಚಿವರ ಪಟ್ಟಿಗೆ ಒಪ್ಪಿಗೆ ಪಡೆದರು.

ಸೋಮವಾರ (ಫೆ. 3) 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಾತುಕತೆ ಬಳಿಕ ಸುದ್ದಿಗಾರರ ಎದುರು ಹಸನ್ಮುಖಿಯಾಗಿ ಕಾಣಿಸಿಕೊಂಡ ಯಡಿಯೂರಪ್ಪ, ‘ಸಂಪುಟ ವಿಸ್ತರಣೆಗೆ ಒಪ್ಪಿಗೆ ಸಿಕ್ಕಿದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಶಾ ಮತ್ತು ನಡ್ಡಾ ಸಲಹೆ ನೀಡಿದ್ದಾರೆ. ಬೆಂಗಳೂರಿಗೆ ಹೋಗಿ ಪಕ್ಷದ ರಾಜ್ಯ ಮುಖಂಡರ ಜತೆ ಮಾತುಕತೆ ನಡೆಸಿ, 2–3 ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇನೆ’ ಎಂದರು.

‘ವಿಸ್ತರಣೆ ಕುರಿತ ಚರ್ಚೆ ಫಲಪ್ರದವಾಗಿದೆ. ರಾಜ್ಯ ರಾಜಕೀಯ ಮತ್ತು ಪಕ್ಷದ ಸ್ಥಿತಿಗತಿ ಕುರಿತು ಸಮಗ್ರ ಮಾಹಿತಿ ಪಡೆದ ಶಾ ಹಾಗೂ ನಡ್ಡಾ, ಎಲ್ಲ ವಿಷಯಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿದರು’ ಎಂದು ವಿವರಿಸಿದರು.

ಗುರುವಾರವೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಯಡಿಯೂರಪ್ಪ ಅವರಿಗೆ ಶಾ ಮತ್ತು ನಡ್ಡಾ ಜತೆ ಮಾತುಕತೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಶಾ ಭೇಟಿಗಾಗಿ ಶುಕ್ರವಾರ ಸಂಜೆಯವರೆಗೂ ಅವರು ಕರ್ನಾಟಕ ಭವನದಲ್ಲೇ ಕಾದು ಕೂರಬೇಕಾಯಿತು.

ಸಂಪುಟಕ್ಕೆ ಒಟ್ಟು 13 ಶಾಸಕರು ಸೇರ್ಪಡೆ ಆಗಲಿದ್ದು, ಇದರಲ್ಲಿ ಉಪಚುನಾವಣೆಯಲ್ಲಿ ಗೆದ್ದವರ ಪೈಕಿ 9 ಅಥವಾ 10, ಮೂಲ ಬಿಜೆಪಿಯ 3 ಅಥವಾ 4 ಮಂದಿಗೆ ಅವಕಾಶ ಸಿಗಲಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಹಾಲಿ ಸಚಿವರಲ್ಲಿ ಕೆಲವರು ಈಗ ಹೊಂದಿರುವ ಖಾತೆಗಳ ಬಗ್ಗೆ ಅಸಮಾಧಾನ ಹೊಂದಿದ್ದು, ಬದಲಾವಣೆ ಬಯಸಿದ್ದಾರೆ. ಸಂಪುಟ ಸೇರಲಿರುವ ನೂತನ ಶಾಸಕರೂ ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿರುವುದರಿಂದ ಖಾತೆಗಳ ಮರು ಹಂಚಿಕೆಯ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸೋತವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರ ಭೇಟಿ ವೇಳೆ ಪ್ರಸ್ತಾಪವಾಗಲಿಲ್ಲ. ಹೀಗಾಗಿ, ಎಂ.ಟಿ.ಬಿ.ನಾಗರಾಜ್‌ ಮತ್ತು ಎಚ್‌.ವಿಶ್ವನಾಥ್‌ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇಲ್ಲ. ಅವರ ಕೋಪವನ್ನು ಶಮನ ಮಾಡುವ ಜವಾಬ್ದಾರಿಯೂ ಮುಖ್ಯಮಂತ್ರಿ ಬೆನ್ನೇರಿದೆ. ಪಕ್ಷದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರಾದ ನೆಹರೂ ಓಲೆಕಾರ, ಎಸ್.ಎ. ರಾಮದಾಸ್‌, ಜಿ.ಎಚ್‌. ತಿಪ್ಪಾರೆಡ್ಡಿ, ಬಸನಗೌಡ ಪಾಟೀಲ ಯತ್ನಾಳ ಅಲ್ಲದೆ, ಕರಾವಳಿ ಭಾಗದ ಶಾಸಕರನ್ನೂ ಮನವೊಲಿಸುವ ಕಾರ್ಯವನ್ನೂ ಯಡಿಯೂರಪ್ಪ ಕೈಗೊಳ್ಳಬೇಕಾಗುತ್ತದೆ.

ಮೂಲ ಬಿಜೆಪಿಯವರ ಪೈಕಿ ಉಮೇಶ ಕತ್ತಿಯವರಿಗೆ ಸಚಿವ ಸ್ಥಾನ ಖಚಿತ. ಉಳಿದ ಎರಡು ಸ್ಥಾನಗಳಿಗೆ ಪೈಪೋಟಿ ನಡೆದಿದೆ. ಅರವಿಂದ ಲಿಂಬಾವಳಿ ಜತೆಗೆ ಹಾಲಪ್ಪ ಆಚಾರ್‌ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿದೆ. ಇವರಿಬ್ಬರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಇದೆ. ಯಡಿಯೂರಪ್ಪ ಅವರು ಲಿಂಬಾವಳಿ ಪರ ಒಲವು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಆಪರೇಷನ್‌ ಕಮಲ’ವನ್ನು ಯಶಸ್ವಿಯಾಗಿ ಮಾಡಿದ ಕಾರಣಕ್ಕಾಗಿ ಶಾಸಕರಲ್ಲದ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ಮನಸ್ಸು ಮಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಮೇಲೆ ಕಣ್ಣು

ಅತಿ ಹೆಚ್ಚು ಆದಾಯ ತರುವ ಖಾತೆ ಎನಿಸಿರುವ ಬೆಂಗಳೂರು ಅಭಿವೃದ್ಧಿ ಮೇಲೆ ಹಲವರ ಕಣ್ಣು ಬಿದ್ದಿದೆ. ಈಗ ಇದು ಮುಖ್ಯಮಂತ್ರಿ ಬಳಿ ಇದೆ. ವಲಸೆ ಬಂದಿರುವ ಎಸ್.ಟಿ.ಸೋಮಶೇಖರ್ ಮತ್ತು ಬೈರತಿ ಬಸವರಾಜ್‌ ಅವರು ಈ ಖಾತೆ ಪಡೆಯಲು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಹಾಲಿ ಸಚಿವರಾದ ಆರ್‌.ಅಶೋಕ, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಈ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ. ಈ ಖಾತೆಯನ್ನು ಮುಖ್ಯಮಂತ್ರಿ ತಮ್ಮ ಬಳಿಸಿ ಉಳಿಸಿಕೊಳ್ಳುತ್ತಾರೋ ಅಥವಾ ಬಿಜೆಪಿ ಮೂಲದವರಿಗೇ ಕೊಟ್ಟು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಾರೋ ಎಂಬ ಚರ್ಚೆ ನಡೆದಿದೆ.

ಉಪಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಶಾಸಕ ಮಹೇಶ್‌ ಕುಮಠಳ್ಳಿ ಅವರನ್ನು ದೆಹಲಿ ಪ್ರತಿನಿಧಿಯಾಗಿ ನೇಮಿಸಿ, ಮುಂದೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT