ಗುರುವಾರ , ಸೆಪ್ಟೆಂಬರ್ 19, 2019
29 °C
13 ಸಾವಿರ ಅಡಿ ಎತ್ತರದಿಂದ ಹಾರಿದ ವಿಟ್ಲದ ಸಫ್ವಾನ್ ಶಾ

ಅಣ್ಣಾಮಲೈ ಅಭಿಮಾನಿಯ ಸಾಹಸಗಾಥೆ

Published:
Updated:
Prajavani

ಮಂಗಳೂರು: ವಿಟ್ಲ ಸಮೀಪದ ಕೋಡಪದವು ನಿವಾಸಿ ಸಫ್ವಾನ್ ಶಾ ಅವರು, ದುಬೈನ ಪಾಮ್ ಜುಮೈರಾ ಡ್ರೋಪ್ ಝೋನ್‌ನಲ್ಲಿ 13 ಸಾವಿರ ಅಡಿ ಎತ್ತರದಿಂದ ವಿಮಾನದ ಹೊರಗೆ ಹಾರುವ ಮೂಲಕ ಸಾಹಸ ಪ್ರದರ್ಶಿಸಿದ್ದಾರೆ.

ವಿಟ್ಲದ ಸಫ್ವಾನ್ ಶಾ ಅವರು ಬಹರೇನ್‌ ರಾಷ್ಟ್ರದಲ್ಲಿ ಉದ್ಯೋಗಿ. ಸಾಹಸಮಯ ಪ್ರದರ್ಶನ ಇವರ ಹವ್ಯಾಸ. ಬಹರೇನ್‌ನ ಕಡಲಲ್ಲಿ ಬೋಟ್‌ಗಳಲ್ಲಿ ಹಲವಾರು ಸಾಹಸ ಪ್ರದರ್ಶನ ಮಾಡಿದ್ದಾರೆ. ಸ್ವಾತಂತ್ರ್ಯ ದಿನ ಭಾರತದ ತ್ರಿವರ್ಣ ಧ್ವಜ ಹಿಡಿದು, ಡೈವ್ ಬೋಟ್ ಪ್ರದರ್ಶನ ಮಾಡಿದ್ದ ವಿಡಿಯೊ ವೈರಲ್ ಆಗಿತ್ತು. ಇದೇ 7 ರಂದು ಜಗತ್ತಿನ ಅತಿ ದೊಡ್ಡ ದುಬೈಯ ‘ಸ್ಕೈ ಡೈವ್’ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರ ಅಭಿಮಾನಿಯಾಗಿರುವ ಸಫ್ವಾನ್ ಶಾ, ಸ್ಕೈ ಡೈವ್‌ಗಾಗಿ ಬಹರೇನ್‌ನಿಂದ ದುಬೈಗೆ ತೆರಳಿ, ಈ ಸಾಹಸವನ್ನು ಪ್ರದರ್ಶಿಸಿದ್ದಾರೆ. ಜಗತ್‌ಪ್ರಸಿದ್ಧ ದುಬೈ ಸ್ಕೈ ಡೈವ್, ದುಬೈಯಿಂದ 35 ಕಿ.ಮೀ. ದೂರದ ಪಾಮ್ ಜುಮೈರಾದಲ್ಲಿದೆ. ಸುಮಾರು ಎರಡು ತಾಸುಗಳ ಪ್ರಕ್ರಿಯೆಯಲ್ಲಿ 20 ರಿಂದ 25 ನಿಮಿಷಗಳ ಕಾಲ ಸಫ್ವಾನ್ ಶಾ, ಆಕಾಶದಲ್ಲಿ ವಿಹರಿಸಿದ್ದಾರೆ.

ಕೈಯ್ಯಲ್ಲಿ ‘ಐ ಲವ್ ಇಂಡಿಯಾ’ ಎಂದು ಬರೆದು, ಎದೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅಳವಡಿಸಿ, ಸಾಹಸ ಪ್ರದರ್ಶನ ಮಾಡಿದ್ದಾರೆ. ‘ಸ್ಕೈ ಡೈವ್ ಮಾಡುವಾಗ ಪ್ರಾರಂಭದಲ್ಲಿ ಕೇವಲ ಮಸುಕು ಮಸುಕಾಗಿ ಕಾಣುತ್ತಿತ್ತು. ನಂತರ ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ತುದಿ ಗೋಚರಿಸಿತು. ಕ್ರಮೇಣ ಖರ್ಜೂರ ಮರ ಆಕಾರದ ಪಾಮ್ ಜುಮೈರಾ ಕಟ್ಟಡಗಳು, ಸಮುದ್ರ ಕಂಡವು ಎಂದು ಸಫ್ವಾನ್ ಶಾ ವಿವರಿಸಿದರು.

ಸ್ಕೈಡೈವ್ ಪ್ರಾರಂಭಿಸುವ ಮುನ್ನ ಅಣ್ಣಾಮಲೈ, ಸಫ್ವಾನ್ ಶಾಗೆ ಫೋನ್ ಮಾಡಿ ಶುಭ ಹಾರೈಸಿದ್ದಾರೆ. ಸ್ಕೈಡೈವ್ ಮುಗಿದು ಭೂಸ್ಪರ್ಶವಾದ ಬಳಿಕವೂ ಅಣ್ಣಾಮಲೈ ಜತೆಗೆ ಅದ್ಭುತ ಅನುಭವವನ್ನು ಹಂಚಿಕೊಂಡಿದ್ದಾರೆ.

Post Comments (+)