ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ನೇ ತರಗತಿ ಪಾಸು: ಆಯುಕ್ತರ ಹುದ್ದೆ ಬೇಕು!

ಹೋಟೆಲ್ ಕೆಲಸಗಾರರಿಂದಲೂ ಹುದ್ದೆಗೆ ಅರ್ಜಿ ಸಲ್ಲಿಕೆ
Last Updated 3 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: 9ನೇ ತರಗತಿ, ಎಸ್‌ಎಸ್‌ಎಲ್‌ಸಿ ಪಾಸಾದವರು, ಆರ್‌ಟಿಐ ಕಾರ್ಯಕರ್ತರು, ಹೋಟೆಲ್ ಕೆಲಸಗಾರರು, ಅಡುಗೆ ಕೆಲಸ ಮಾಡುವವರೂ ರಾಜ್ಯ ಮಾಹಿತಿ ಆಯುಕ್ತ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ!

ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದ ಮಾಹಿತಿ ಆಯುಕ್ತ ಹುದ್ದೆಗೆ ಸಿಬ್ಬಂದಿ ಮತ್ತು ಆಡಳಿತಸುಧಾರಣಾ ಇಲಾಖೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಿರುವ 170 ಮಂದಿಯ ಪಟ್ಟಿ ನೋಡಿದರೆ ಆಯುಕ್ತ ಹುದ್ದೆ ಅಷ್ಟು ಸಲೀಸಾಗಿ ಸಿಗುತ್ತದೆಯೇ ಎಂಬ ಅನುಮಾನ ಮೂಡುತ್ತದೆ.

ಆಯುಕ್ತ ಹುದ್ದೆಗೆ ಅರ್ಹತೆ ಎನ್ನಬಹುದಾದ ವೃತ್ತಿ ನಿಭಾಯಿಸಿದ ನಿವೃತ್ತ ಐಎಎಸ್, ಐಪಿಎಸ್‌, ಕೆಎಎಸ್‌ ಅಧಿಕಾರಿಗಳು, ಅರಣ್ಯ ಇಲಾಖೆ ನಿವೃತ್ತ ಅಧಿಕಾರಿಗಳು, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಹೈಕೋರ್ಟ್ ವಕೀಲರು, ಅತಿಥಿ ಉಪನ್ಯಾಸಕರು, ವೃತ್ತಿನಿರತ ಮತ್ತು ಹವ್ಯಾಸಿ ಪತ್ರಕರ್ತರೂ ಅರ್ಜಿ ಸಲ್ಲಿಸಿದವರ ಪಟ್ಟಿಯಲ್ಲಿ ಇದ್ದಾರೆ.

ಕೃಷಿಯಲ್ಲಿ ಅನುಭವ ಇದ್ದ ಮಾತ್ರಕ್ಕೆ ಆಯುಕ್ತ ಹುದ್ದೆಗೆ ಅರ್ಹತೆ ಎಂದು ಪರಿಗಣಿಸುವಂತಿಲ್ಲ. ಹಾಗಿದ್ದರೂ ವ್ಯವಸಾಯ
ಗಾರರೂ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ನಮೂನೆಯಲ್ಲಿ ಕ್ಷೇತ್ರ ಪರಿಣತಿ ಏನಿದೆ ಎಂದು ವಿವರಿಸುವಾಗ, ಕೆಲವರು ನೀಡಿರುವ ಅನುಭವವೇ ಕುತೂಹಲಕಾರಿಯಾಗಿದೆ. ಒಬ್ಬರು ಹೋಟೆಲ್‌ನಲ್ಲಿ ಕೆಲಸ ಎಂದಿದ್ದರೆ, ಮತ್ತೊಬ್ಬರು ಪುಸ್ತಕ
ದಂಗಡಿಯಲ್ಲಿ ‍ಕೆಲಸ ಎಂದು ಬರೆದು
ಕೊಂಡಿದ್ದಾರೆ. ನಿರ್ದಿಷ್ಟ ಕ್ಷೇತ್ರದಲ್ಲಿ ನೈಪುಣ್ಯ ಅಥವಾ ಜ್ಞಾನ ಇರಬೇಕು ಎಂದಿದ್ದರೂ ಆರ್‌ಟಿಐ ಕಾರ್ಯಕರ್ತರು, ಈಗಷ್ಟೇ ಪತ್ರಿಕೋದ್ಯಮ ಪದವಿ ಪಡೆದು ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವವರು, ತಾಂತ್ರಿಕ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬುಕ್‌ ಹೌಸ್‌ನಲ್ಲಿ ಕೆಲಸ ಮಾಡುವವರೂ ಅರ್ಜಿ ಸಲ್ಲಿಸಿದ್ದಾರೆ.

‘ಮಾಹಿತಿ ಆಯುಕ್ತರ ಹುದ್ದೆಗೆ ಈ ರೀತಿಯ ಅರ್ಜಿಗಳು ಸಲ್ಲಿಕೆಯಾಗುವುದು ಹೊಸದೇನೂ ಅಲ್ಲ. ಈ ಹಿಂದೆ ಮೂರು ಹುದ್ದೆಗಳಿಗೆ 450ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅರ್ಜಿ ಹಾಕಲು ಎಲ್ಲರೂ ಅರ್ಹರು, ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿಯು ‘ಅರ್ಹರು’ ಯಾರು
ಎಂಬುದನ್ನು ತೀರ್ಮಾನಿಸುತ್ತದೆ’ ಎಂದು ಮಾಹಿತಿ ಆಯುಕ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ದಂಡ ಪಾವತಿಸಿದ್ದವರಿಂದಲೂ ಅರ್ಜಿ: ‘ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಎನ್. ಭೃಂಗೇಶ್ ಅವರು ಮಾಹಿತಿ ಆಯುಕ್ತರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರನ್ನು ಆಯ್ಕೆ ಮಾಡಬಾರದು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗೆಹೈಕೋರ್ಟ್‌ ವಕೀಲ ಕೊಡೂರು ವೆಂಕಟೇಶ್ ದೂರು ನೀಡಿದ್ದಾರೆ.

‘ಭೃಂಗೇಶ್ ಅವರು 2017ರಲ್ಲಿ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರ ಆಪ್ತ ಕಾರ್ಯದರ್ಶಿಯಾಗಿದ್ದಾಗ ನಾನು ಕೇಳಿದ್ದ ಮಾಹಿತಿ ನೀಡದ ಕಾರಣಕ್ಕೆ ಮಾಹಿತಿ ಆಯೋಗ ₹10 ಸಾವಿರ ದಂಡ ವಿಧಿಸಿತ್ತು. ಅದನ್ನು ಅವರು ಪಾವತಿಸಿದ್ದರು. ಅವರಿಗೆ ಅವಕಾಶ ಕಲ್ಪಿಸಬಾರದು. ಕಲ್ಪಿಸಿದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT