ಬಜೆಟ್ ಅಧಿವೇಶನ: ಬಿಜೆಪಿ ಶಾಸಕರ ಗದ್ದಲ, ರಾಜ್ಯಪಾಲರ ಭಾಷಣ ಮೊಟಕು

ಬೆಂಗಳೂರು: ಬುಧವಾರ ಆರಂಭವಾದ ಬಜೆಟ್ ಅಧಿವೇಶನ ವೇಳೆ ರಾಜ್ಯಪಾಲರ ಭಾಷಣ ಆರಂಭವಾದ ಕೆಲಹೊತ್ತಿನಲ್ಲೇ ಬಿಜೆಪಿ ಶಾಸಕರು ಗದ್ದಲ ಆರಂಭಿಸಿದರು. ‘ಬಹುಮತವಿಲ್ಲದ ಸರ್ಕಾರದಿಂದ ಬಜೆಟ್ ಅಧಿವೇಶನ’ ಎಂಬ ಘೋಷಣೆಗಳನ್ನು ಕೂಗಿದ ಬಿಜೆಪಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರು.
ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ‘ಸಮ್ಮಿಶ್ರ ಸರ್ಕಾರವು ರಾಜ್ಯಪಾಲರಿಂದ ಸುಳ್ಳುಗಳ ರಾಶಿಯನ್ನೇ ಓದಿಸುತ್ತಿದೆ. ಎಲ್ಲಿದೆ ಸರ್ಕಾರ’ ಎಂದು ಪ್ರಶ್ನಿಸಿದರು. ಇದರೊಂದಿಗೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ರಾಜ್ಯಪಾಲರು ಮನವಿ ಮಾಡಿಕೊಂಡರೂ ಬಿಜೆಪಿ ನಾಯಕರು ಕಿವಿಗೊಡಲಿಲ್ಲ.
ಗದ್ದಲದ ನಡುವೆಯೂ ಭಾಷಣ ಮುಂದುವರಿಸಿದ ರಾಜ್ಯಪಾಲ ವಾಜುಭಾಯ್ ವಾಲಾ 22 ಎರಡು ಪುಟಗಳ ತಮ್ಮ ಭಾಷಣವನ್ನು ಕೇವಲ ಎರಡು ಪುಟಗಳಿಗೆ ಮೊಟಕು ಗೊಳಿಸಿದರು.
ಇತ್ತೀಚೆಗೆ ನಿಧನರಾದ ಕರ್ನಾಟಕ ರತ್ನ ಶಿವಕುಮಾರ ಸ್ವಾಮೀಜಿ ಹಾಗೂ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಗೆ ಸಭಾಪತಿ ರಮೇಶ್ ಕುಮಾರ್ ಸಂತಾಪ ನಿಲುವಳಿ ಓದುವ ವೇಳೆಯೂ ಬಿಜೆಪಿ ಶಾಸಕರ ಗದ್ದಲ ಮುಂದುವರಿಯಿತು. ಸಂತಾಪ ನಿಲುವಳಿ ವೇಳೆ ಶಾಸಕರು ತಮ್ಮ ಸ್ಥಾನಗಳನ್ನು ಬಿಟ್ಟು ಓಡಾಡಬಾರದು ಎಂದು ಸೂಚಿಸಿದ ರಮೇಶ್ ಕುಮಾರ್, ನಾಯಕರ ವರ್ತನೆಗೆ ಗರಂ ಆದರು.
ಇದನ್ನೂ ಓದಿ: ಅತೃಪ್ತರಿಗೆ ಸಿದ್ದರಾಮಯ್ಯ ಪತ್ರ, ಅಧಿವೇಶನ ಅವಧಿಯಲ್ಲಿ ಖುದ್ದು ಭೇಟಿಗೆ ಸೂಚನೆ
ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲ. ಅವರಿಗೆ ಪ್ರಬುದ್ಧತೆ ಇಲ್ಲ. ಉದ್ದಟತನ ತೋರುವ ಕೆಲಸ ಮಾಡಿದ್ದಾರೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ಅವರು ಕಿಡಿಕಾರಿದರು.
ಕಾಂಗ್ರೆಸ್‌ನ ಅತೃಪ್ತ ಶಾಸಕರಾದ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಬಿ. ನಾಗೇಂದ್ರ, ಉಮೇಶ ಜಾಧವ್ ಹಾಗೂ ಬಿಜೆಪಿಯ ಅಶ್ವಥ್ ನಾರಾಯಣ್, ಬಾಲಚಂದ್ರ ಜಾರಕಿಹೋಳಿ ಸೇರಿದಂತೆ ಒಟ್ಟು ಒಂಬತ್ತು ಶಾಸಕರು ಅಧಿವೇಶನಕ್ಕೆ ಗೈರಾಗಿದ್ದಾರೆ.
ಫೆಬ್ರುವರಿ 08ರಂದು(ಶುಕ್ರವಾರ) ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಮಂಡನೆಯಾಗಲಿದೆ.
ನನ್ನ ಆರೋಗ್ಯ ಸುಧಾರಿಸಿದೆ: ಆನಂದ್ ಸಿಂಗ್
ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ನಡೆದ ಗಲಾಟೆ ವೇಳೆ ಕಂಪ್ಲಿ ಶಾಸಕ ಗಣೇಶ್ ಅವರಿಂದ ಹಲ್ಲೆಗೊಳಗಾಗಿದ್ದ ಶಾಸಕ ಆನಂದ್ ಸಿಂಗ್ ಅಧಿವೇಶನದಲ್ಲಿ ಭಾಗವಹಿಸಿದರು. ಅವರು ‘ನನ್ನ ಆರೋಗ್ಯ ಸುಧಾರಿಸಿದೆ’ ಎಂದು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.