ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕ್ವಾರಂಟೈನ್‌ನಲ್ಲಿದ್ದವರಿಂದ ಕೊರೊನಾ ಯೋಧರ ಮೇಲೆ ಹಲ್ಲೆ

Last Updated 12 ಜೂನ್ 2020, 14:13 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಮರಣಹೋಳ ಗ್ರಾಮದ ಸರ್ಕಾರಿ ಶಾಲೆಯ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರದಲ್ಲಿರುವವರು ಶುಕ್ರವಾರ ಪರೀಕ್ಷೆಗಾಗಿ ಗಂಟಲು ದ್ರವದ ಮಾದರಿ ನೀಡಲು ನಿರಾಕರಿಸಿ, ಕೊರೊನಾ ಯೋಧರ ಮೇಲೆ ಹಲ್ಲೆ ನಡೆಸಿದ್ದಾರೆ.

ಮಹಾರಾಷ್ಟ್ರದಿಂದ ವಾಪಸಾದ ಇಬ್ಬರು ಮಕ್ಕಳು ಹಾಗೂ ಮಹಿಳೆ ಸೇರಿದಂತೆ 22 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ‘ಜ್ವರ ಸೇರಿದಂತೆ ರೋಗದ ಯಾವುದೇ ಲಕ್ಷಣಗಳಿಲ್ಲ; ಹೀಗಾಗಿ, ಗಂಟಲು ದ್ರವದ ಮಾದರಿ ಕೊಡುವುದಿಲ್ಲ’ ಎಂದು ಅವರು ಪಟ್ಟು ಹಿಡಿದಿದ್ದಾರೆ. ಈ ವೇಳೆ ಅವರು ಹಾಗೂ ಕೊರೊನಾ ಯೋಧರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೆಲವರು ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಬೆಳಿಗ್ಗೆ ಕೇಂದ್ರಕ್ಕೆ ಹೋಗಿದ್ದ ತಹಶೀಲ್ದಾರ್‌ ಆರ್‌.ಕೆ. ಕುಲಕರ್ಣಿ, ‘ಪರೀಕ್ಷೆಗೆ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗುವುದು. ನೆಗೆಟಿವ್ ಬಂದರೆ ನಿಮ್ಮನ್ನು ಮನೆಗಳಿಗೆ ಕಳುಹಿಸಲು ಅನುಕೂಲವಾಗುತ್ತದೆ’ ಎಂದು ತಿಳಿಸಿದ್ದರು. ಆಗಲೂ ಮೊದಲ ವಿರೋಧ ವ್ಯಕ್ತ‍ಪಡಿಸಿದ್ದ ಅವರು ನಂತರ ಸಮ್ಮತಿಸಿದ್ದರು. ಆದರೆ, ಮಧ್ಯಾಹ್ನ ಬಂದ ಪಿಡಿಒ ಪ್ರಶಾಂತ ಮುನವಳ್ಳಿ, ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ ನೇಸರಗಿ ಹಾಗೂ ಆಶಾ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿದ್ದಾರೆ. ಕರೆ ಮಾಡಿ ಊರಿನವರನ್ನೂ ಕರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

‘ಕೋವಿಡ್–19 ನಿಯಂತ್ರಣಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಹೊರ ರಾಜ್ಯದಿಂದ ಬಂದವರು ಹಾಗೂ ಅವರ ಕುಟುಂಬದವರ ಆರೋಗ್ಯದ ದೃಷ್ಟಿಯಿಂದಾಗಿ ಕ್ವಾರಂಟೈನ್ ಮಾಡುತ್ತಿದ್ದೇವೆ. ಆದರೆ, ಅವರು ನಮಗೆ ಸಹಕಾರ ನೀಡಲಿಲ್ಲ. ಮುತ್ತಿಗೆ ಹಾಕಿದರು. ಹಲ್ಲೆ ನಡೆಸಿ, ನನ್ನ ಹಾಗೂ ಗ್ರಾಮ ಲೆಕ್ಕಾಧಿಕಾರಿಯ ಶರ್ಟ್‌ ಹರಿದರು. ಮಹಿಳೆಯರಲ್ಲಿ ಕೆಲವರು ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದರು. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಲಿದ್ದೇನೆ’ ಎಂದು ಪಿಡಿಒ ಪ್ರಶಾಂತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT