ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಮುಂದೆ ಆಸ್ಪತ್ರೆಗಳಿಗೂ ‘ಆಯುಷ್ಮಾನ್‌’

ಎಬಿಎಆರ್‌ಕೆ ಯೋಜನೆಯಡಿ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ
Last Updated 28 ಮೇ 2019, 18:42 IST
ಅಕ್ಷರ ಗಾತ್ರ

ಬೆಂಗಳೂರು: ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆ’ಯಡಿ (ಎಬಿಎಆರ್‌ಕೆ) ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ.

ರಾಜ್ಯದ 1.15 ಕೋಟಿ ಬಿಪಿಎಲ್ ಕುಟುಂಬಗಳ ಪೈಕಿ ಸದ್ಯ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯಡಿ ಚಿಕಿತ್ಸೆ ಪಡೆಯುವ 62 ಲಕ್ಷ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಶೇ 60ರಷ್ಟು ಅನುದಾನ ಭರಿಸುತ್ತಿದೆ.ರಾಜ್ಯ ಸರ್ಕಾರವು ಶೇ 40ರಷ್ಟು ಅನುದಾನ ಪಾವತಿಸುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಹೊರಗುಳಿದ53 ಲಕ್ಷ ಕುಟುಂಬ ಹಾಗೂ ಸಾಮಾನ್ಯ ವರ್ಗದ 19 ಲಕ್ಷ ಕುಟುಂಬಗಳಿಗೆ ರಾಜ್ಯ ಸರ್ಕಾರವೇ ಶೇ 100ರಷ್ಟು ಅನುದಾನ ಭರಿಸುತ್ತಿದೆ. ಈವರೆಗೆ ಯೋಜನೆಯಡಿ 1,52,551 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಸರ್ಕಾರ ಪ್ರತಿ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆಗೆ ಪ್ಯಾಕೇಜ್ ರೂಪದಲ್ಲಿ ಶುಲ್ಕ ನಿಗದಿಪಡಿಸಿದೆ. ರೋಗಿಗಳು ಪಡೆದ ಚಿಕಿತ್ಸೆ ಆಧರಿಸಿ, ಪ್ಯಾಕೇಜ್ ಮೊತ್ತವನ್ನು ಆಯಾ ಆಸ್ಪತ್ರೆಗಳಿಗೆ ಸುವರ್ಣ ಸುರಕ್ಷಾ ಟ್ರಸ್ಟ್ ಬಿಡುಗಡೆ ಮಾಡಲಿದೆ. ಈ ಹಣವನ್ನು ಇನ್ನು ಮುಂದೆ ಆಸ್ಪತ್ರೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ.

ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿ ಹಾಗೂ ಅನುದಾನದ ಸಮರ್ಪಕ ಬಳಕೆ ಬಗ್ಗೆ ನಿಗಾವಹಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದೆ.

ಈ ಸಮಿತಿಯಲ್ಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಎಬಿಎಆರ್‌ಕೆ ಜಿಲ್ಲಾ ನೋಡಲ್ ಅಧಿಕಾರಿ, ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕರು ಹಾಗೂ ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದ ಪ್ರತಿನಿಧಿಗಳು ಸಮಿತಿಯಲ್ಲಿರುವರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಗಾಗಲೇ ಸಮಿತಿ ರಚಿಸಲಾಗಿದೆ. ಸಮಿತಿಯು ಯೋಜನೆಯಡಿ ಚಿಕಿತ್ಸೆಗಳಿಗೆ ಪಾವತಿಯಾದ ಹಣವನ್ನು ಆಸ್ಪತ್ರೆಗಳಿಗೆ ಅಗತ್ಯವಿರುವ ಉಪಕರಣ ಹಾಗೂ ಸೌಕರ್ಯ ಒದಗಿಸುವ ಯೋಜನೆ ರೂಪಿಸಲಿದೆ.

‘ಬಿಪಿಎಲ್ ಪಡಿತರ ಕಾರ್ಡು ಹೊಂದಿರುವವ ಫಲಾನುಭವಿಗಳಿಗೆ ವರ್ಷಕ್ಕೆ ₹5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ.ಎಪಿಎಲ್ ಕಾರ್ಡುದಾರರು ಹಾಗೂ ಬಿಪಿಎಲ್ ಕಾರ್ಡು ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ30ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದೆ. ವಾರ್ಷಿಕ ಪ್ರತಿ ಕುಟುಂಬ ₹1.50 ಲಕ್ಷ ವರೆಗೆ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಚಿಕಿತ್ಸಾ ಪ್ಯಾಕೇಜ್ ಮೊತ್ತವನ್ನು ಸುವರ್ಣ ಸುರಕ್ಷಾ ಟ್ರಸ್ಟ್ ಆಸ್ಪತ್ರೆಗಳಿಗೆ ಪಾವತಿಸಲಿದೆ. ಹಾಗಾಗಿ ಈ ಚಿಕಿತ್ಸಾ ಮೊತ್ತವನ್ನು ಆಸ್ಪತ್ರೆಯ ಅಭಿವೃದ್ಧಿ ಕಾರ್ಯಕ್ಕೆ ಬಳಕೆ ಮಾಡಲಾಗುತ್ತದೆ’ ಎಂದುಎಬಿಎಆರ್‌ಕೆ ನೋಡಲ್ ಅಧಿಕಾರಿ ಡಾ. ಚಂದ್ರಮೋಹನ್ ಅವರು ‘ಪ್ರಜಾವಾಣಿಗೆ ತಿಳಿಸಿದರು.

1650 ಚಿಕಿತ್ಸೆಗಳು ಲಭ್ಯ: ಆಯುಷ್ಮಾನ್‌ ಭಾರತ್– ಆರೋಗ್ಯ ಕರ್ನಾಟಕ ಯೋಜನೆಯಡಿ ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಸೇರಿದಂತೆ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಲಭ್ಯವಿದೆ.169 ತುರ್ತು ಚಿಕಿತ್ಸೆಗಳು ಮತ್ತು 36 ಉಪ ಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಬಿಪಿಎಲ್ ಕುಟುಂಬದ ಸದಸ್ಯರಿಗೆ ದೊರೆಯಲಿದೆ. 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆಯಬಹುದಾಗಿದೆ.

ಕಾರ್ಡ್ ‍ಪಡೆಯುವುದು ಸುಲಭ
‘ಯೋಜನೆಯ ಫಲಾನುಭವಿಗಳಿಗೆ ಆರಂಭಿಕ ಹಂತದಲ್ಲಿ ರಾಜ್ಯದ 11 ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಯಿತು. ಇದರಿಂದಾಗಿ ಕಾರ್ಡ್‌ ಪಡೆಯಲು ಆಸ್ಪತ್ರೆಗಳ ಮುಂದೆ ಜನದಟ್ಟಣೆ ಉಂಟಾಗಿ, ಕಾರ್ಡ್ ವಿತರಣೆಯಲ್ಲಿ ಸಮಸ್ಯೆ ಎದುರಾಗಿದ್ದವು. ಇದೀಗ ಕಾರ್ಡ್ ವಿತರಣೆಯನ್ನು ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ವಿಸ್ತರಿಸುವ ಜತೆಗೆ ಆಯ್ದ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರದಲ್ಲಿ ಆರೋಗ್ಯ ಕಾರ್ಡ್‌ ನೀಡಲಾಗುತ್ತಿದೆ.

ಈವರೆಗೆ34,78,624 ಮಂದಿ ಆರೋಗ್ಯ ಕಾರ್ಡ್ ಪಡೆದುಕೊಂಡಿದ್ದಾರೆ. ಆಧಾರ್ ಕಾರ್ಡ್ ಜತೆಗೆ ಪಡಿತರ ಚೀಟಿಯ ಪ್ರತಿಯನ್ನು ನೀಡಿ, ಆರೋಗ್ಯ ಕಾರ್ಡ್ ಪಡೆಯಬಹುದು.ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ₹10 ಹಾಗೂ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ₹35 ಶುಲ್ಕದೊಂದಿಗೆ ಎಬಿ-ಎಆರ್‌ಕೆ ಕಾರ್ಡ್ ಪಡೆಯಬಹುದಾಗಿದೆ.

ರಾಜ್ಯದ ವಿವಿಧೆಡೆ ಕಾರ್ಡ್ ವಿತರಣೆ
‘55 ಬೆಂಗಳೂರು ಒನ್ ಹಾಗೂ 51ಕರ್ನಾಟಕ ಒನ್ ಕೇಂದ್ರದಲ್ಲಿ ಸದ್ಯ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ಕಾರ್ಡ್‌ಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ ಆರೋಗ್ಯ ಕಾರ್ಡ್‌ ವಿತರಣೆಗೆ ಪ್ರತ್ಯೇಕ ಕೌಂಟರ್ ಆರಂಭಿಸಲು ಚಿಂತನೆ ನಡೆದಿದೆ ಎನ್ನುವುದು ಇ–ಗವರ್ನೆನ್ಸ್ ಮೂಲಗಳಿಂದ ತಿಳಿದುಬಂದಿದೆ.

ಕರ್ನಾಟಕ ಒನ್ ಕೇಂದ್ರಗಳು ಬಳ್ಳಾರಿ, ಬೆಳಗಾವಿ, ದಾವಣಗೆರೆ, ಕಲಬುರ್ಗಿ, ಹುಬ್ಬಳ್ಳಿ–ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಕಾರವಾರ, ಉಡುಪಿ, ಗದಗ ಮತ್ತು ವಿಜಯಪುರ ಜಿಲ್ಲೆಯಲ್ಲಿವೆ. ಉಳಿದ ಜಿಲ್ಲೆಗಳಲ್ಲಿ ಕೂಡ ಶೀಘ್ರವೇ ಕರ್ನಾಟಕ ಒನ್ ಕೇಂದ್ರ ಆರಂಭಿಸಿ, ಆರೋಗ್ಯ ಕಾರ್ಡ್ ಸೇರಿದಂತೆ ವಿವಿಧ ಸೇವೆಗಳನ್ನು ಆರಂಭಿಸಲಾಗುತ್ತದೆ’ಎಂದು ಮಾಹಿತಿ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT