ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನ ಬದುಕಿನ ಅಲಾಪಗಳು

Last Updated 22 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಮೌನ ಬದುಕಿನ ಅಲಾಪಗಳು

ಬಾಯಿಲ್ಲದ ಮೌನದಲ್ಲಿ

ಅಲೆಯುತಿರುವ ದನಿಗಳೆ

ಉಸಿರನ್ನಿಡುವೆ,ಹೆಸರ ಕೊಡುವೆ

ಬನ್ನಿ ನನ್ನ ಹೃದಯಕೆ (–ಜಿ.ಎಸ್.ಎಸ್)

ಹೌದು, ನನ್ನದ್ದು ಪ್ರತಿ ದಿನದ ಜಪ ಇದೇ. ಪ್ರತಿಯೊಬ್ಬರನ್ನು ನನ್ನ ಹೃದಯಕ್ಕೆ ಕರೆಯುತ್ತೇನೆ.ಕರೆದಿಟ್ಟ ಒಲವಿನಿಂದ ಆಹ್ವಾನಿಸುತ್ತೇನೆ. ಆದರೆ ಯಾಕೋ ನನ್ನ ಹೃದಯದ ಸಮೀಪಕ್ಕೆ ಯಾರು ಬರೋಲ್ಲ.ನನಗೂ ನಿಮ್ಮ ತರ ಪ್ರೀತಿಸುವ ಮನಸ್ಸು ಇದೆ,ಚೆಲುವಾದ ಭಾವನೆಗಳಿವೆ,ಬಣ್ಣ ಬಣ್ಣದ ಕನಸುಗಳಿವೆ,ಬದುಕಿನ ಹಂಬಲಗಳಿವೆ. ಏನು ಮಾಡೋದು ಇವೆಲ್ಲವನ್ನು ನಿಮ್ಮ ಮುಂದೆ ಬಿಚ್ಚಿಡಲು ಬೇಕಾದ ಶಬ್ದ ನನ್ನ ನಾಲಿಗೆಯಿಂದ ಹೊರ ಹೊಮ್ಮಲ್ಲ.ನಿಮ್ಮ ಭಾಷೆಯಲ್ಲಿ ನನ್ನನ್ನು ನೀವು ಮೂಕ ಅನ್ನುತ್ತೀರ. ನನ್ನ ಭಾಷೆಯಲ್ಲಿ ನನ್ನನ್ನು ನಾನು ನಿರಂತರ ಮೌನಿ ಅಂದ್ಕೊಳುತ್ತೀನಿ.

ನನ್ಗೆ ನೆನಪು ಇರುವಂತೆ ಚಿಕ್ಕ ವಯಸ್ಸಿನಲ್ಲಿಯೇ ನನ್ಗೆ ಮಾತು ಬರುತ್ತಿರಲಿಲ್ಲ. ನನ್ನ ವಾರಿಗೆಯ ಹುಡುಗರು ಮಾತನಾಡುತ್ತಿದ್ದರೆ ಅವರ ಮುಖ, ನಾಲಿಗೆಯನ್ನೇ ನೋಡ್ತಾ ಇದ್ದೆ. ಅವರಂತೆ ಮಾತನಾಡಲು ಹಪಹಪಿಸುತ್ತಿದ್ದೆ. ದೇವ್ರ ಮುಂದೆ ಕೂತು ಪ್ರತಿ ದಿನ ಅವರಂತೆ ನನ್ಗೂ ಮಾತು ಅನುಗ್ರಹಿಸು ಅಂತ ಕೇಳಿಕೊಳ್ಳುತ್ತಿದ್ದೆ. ಕೆಲವು ಬಾರಿ ಒಬ್ಬನೇ ಕೂತು ಅತ್ತಿದ್ದು ಇದೆ. ಆದರೆ ವಿಧಿ ಲಿಖಿತ ಮೀರುವುದು ಉಂಟೆ? ಎದೆ ಕೊಟ್ಟು ನಿಂತು ಮಾತಬಾರದ ನೋವುಗಳನ್ನು ಗೆದ್ದೆ.

ಅಪ್ಪನಿಗೆ ನನ್ನ ಓದಿಸುವ ಅಸೆ ಇತ್ತು. ಆದರೆ ಓದುವ ಆಸಕ್ತಿ ನನಗೆ ಇರಲಿಲ್ಲ. ಹತ್ತನೆಯ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗಳಿಸಿದೆ.

ತುಮಕೂರಿನ ಪ್ರಿಂಟಿಂಗ್‍ ಪ್ರೆಸ್‌ವೊಂದರಲ್ಲಿ ಕೆಲಸಕ್ಕೆ ಸೇರಿದೆ.ಐದು ಸಾವಿರ ಸಂಬಳ. ಮೊದಲ ಒಂದು ವಾರ ಎಲ್ಲರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರು ತಂದಿದ್ದ ಬುತ್ತಿಯಲ್ಲಿ ಒಂದು ಪಾಲು ನನಗೆ ಕೊಡುತ್ತಿದ್ದರು. ಪ್ರತಿಯೊಬ್ಬರೂ ತೋರಿಸುತ್ತಿದ್ದ ಒಲವಿಗೆ,ಅನುರಾಗಕ್ಕೆ,ಕೆಲಸ ಮಾಡುವ ಹುಮ್ಮಸ್ಸು ನನ್ನಲ್ಲಿ ಚಿಮ್ಮಿ ಚಿಮ್ಮಿ ಬರುತ್ತಿತ್ತು. ಹದಿನೈದು ದಿನಗಳು ಅದ್ಮೇಲೆ ವಾತಾವರಣ ತುಸು ಬದಲಾಯಿತ್ತು. ಎಲ್ಲರೂ ನನ್ನ “ಲೇ ಮೂಕ ಬಾರೋ ಇಲ್ಲಿ” “ಲೇ ಮೂಕ ಅದನ್ನು ಕೊಡೋ” ಅಂತ ಕರೆಯುತ್ತಿದ್ದರು.

ಒಂದು ಬಿಳಿ ಹಾಳೆಯ ಮೇಲೆ ನನ್ನ ಹೆಸ್ರು ಕೆಂಪರಾಜು,ಕೆಂಪ ಅಂತ ಕರೆಯಿರಿ,ಇಲ್ಲ ರಾಜು ಅಂತ ಕರೆಯಿರಿ,ಮೂಕ ಅಂತ ಅನ್ನಬೇಡಿ ಎಂದು ಬರೆದು ಕೊಟ್ಟೆ. ನೋಡಪ್ಪ ಮೂಕನನ್ನು ಮೂಕ ಅಂತ ಕರೋಬಾರದಂತೆ ಎಂದು ಅಪಹಾಸ್ಯ ಮಾಡಿದರು. ಪ್ರತಿ ದಿನ ಐವತ್ತರಿಂದ ಅವರತ್ತು ಸಾರಿ ಮೂಕ ಅಂತ ಕರೆಯಲು ಶುರು ಮಾಡಿದರು. ನನ್ಗೆ ಮಾತು ಬರಲ್ಲ ಅನ್ನೋದು ಸತ್ಯ. ಆದರೆ ಆ ಸತ್ಯ ಇಟ್ಟುಕೊಂಡು ಚುಚ್ಚುವುದು ಎಷ್ಟು ಸರಿ? ಯಾಕೋ ಸಹಿಸಿಕೊಳ್ಳಲು ಅಗಲಿಲ್ಲ. ಅಲ್ಲಿ ಕೆಲಸ ಬಿಟ್ಟು ಬಿಟ್ಟೆ.

ಕೆಲ್ಸ ಬಿಟ್ಟು ಚಿಕ್ಕಬಾಣಾವರಕ್ಕೆ ಬಂದೆ. ಮನೆಯಲ್ಲಿ ಕೆಲ್ಸ ಬಿಟ್ಟ ಬಗ್ಗೆ ತುಸು ಕೋಪ ವ್ಯಕ್ತಪಡಿಸಿದರು. ಅದು ಸಹಜವಾದ ಕೋಪ

ಚಿಕ್ಕಬಾಣಾವರದ ಹೋಟೆಲ್ ಒಂದರಲ್ಲಿ ಕ್ಲೀನರ್ ಅಗಿ ಕೆಲಸಕ್ಕೆ ಸೇರಿದೆ. ಪ್ರತಿ ದಿನ ನೂರು ರೂಪಾಯಿ ಸಂಬಳ. ಕೆಲ್ಸ ಮಾಡಿ ಬದುಕು ಕಟ್ಟುವ ನನ್ನ ಹಂಬಲಕ್ಕೆ ಅದು ಚೇತನವಾಯಿತ್ತು. ನನ್ನ ಪಾಡಿಗೆ ನನ್ನ ಕೆಲ್ಸ ಮುಗಿಸಿಕೊಂಡು ಬರುತ್ತಿದ್ದೆ. ನೂರು ರೂಪಾಯಿಗಳಿಗೆ ನನ್ನ ಬದುಕಿನ ಕನಸುಗಳನ್ನು ಹೊಸೆದು ಕೊಂಡಿದ್ದೆ. ಊಟ ತಿಂಡಿಗಳು ಅಲ್ಲೇ ಕಳೆದು ಹೋಗುತ್ತಿತ್ತು. ಐವತ್ತು ರೂಪಾಯಿಗಳು ಪಿಗ್ಮಿ ಕಟ್ಟುತ್ತಿದ್ದೆ.

ಆರು ತಿಂಗಳಲ್ಲಿ ಬದುಕಿನಲ್ಲಿ ಚೇತರಿಕೆ ಕಂಡು ಬಂತು. ದುರಾದೃಷ್ಣ ಅಂದ್ರೆ ಇದೇ ಇರ್ಬೇಕು ನೋಡಿ. ಕೆಲ್ಸ ಮಾಡುತ್ತಿದ್ದ ಹೋಟೆಲ್ ನಷ್ಟವಾಗಿ ಬಾಗಿಲು ಮುಚ್ಚಿತ್ತು. ಮತ್ತೆ ನಿರುದ್ಯೋಗದ ಬವಣೆ ಎದುರಾಯಿತ್ತು.

ಎದೆಗುಂದಲಿಲ್ಲ. ಈಗ ಇಂತಹುದೇ ಅಂತ ಕೆಲಸ ಇಲ್ಲ. ಬೆಳಿಗ್ಗೆ ಎದ್ದು ಅಂಗಡಿಗಳಿಗೆ ನೀರು ಹಾಕ್ತೀನಿ. ಕೆಲವು ಅಂಗಡಿಯವರು ತಮಗೆ ಬೇಕಾದ ಸಾಮಾನುಗಳನ್ನು ತರಲು ಚೀಟಿ ಬರೆದು ಕೊಡ್ತಾರೆ. ಹೋಗಿ ತಂದು ಕೊಡುತ್ತೀನಿ. ಕೆಲವರು ಐವತ್ತು ರೂಪಾಯಿ ಕೊಟ್ಟರೆ ಮತ್ತೆ ಕೆಲವರು ಇಪ್ಪತ್ತು ರೂಪಾಯಿ ಕೊಡ್ತಾರೆ.

ಇಷ್ಟೇ ಬೇಕು ಅಂತ ಕೇಳುವ ಬದುಕು ನನ್ನದ್ದಲ್ಲ. ಮಾತು ಬಾರದ ನಾನು ಹೇಗೆ ಡಿಮ್ಯಾಂಡ್ ಮಾಡ್ಲಿ? ಅಷ್ಟಕ್ಕೂ ನಾನು ಕೈ ಸನ್ನೆ ಬಾಯಿ ಸನ್ನೆ ಮಾಡಿದ್ರೆ ಅದನ್ನು ಯಾರು ಅರ್ಥ ಮಾಡಿಕೊಳ್ಳಲ್ಲ. ಹಾಗಾಗಿ ಅವರು ಕೊಟ್ಟಷ್ಟು ನಾನು ತೆಗೆದುಕೊಂಡು ಅವರ ಕೆಲ್ಸ ಮಾಡಿ ಕೊಡುತ್ತೀನಿ.

ಭಗವಂತ ಕೊಟ್ಟಿರುವ ಈ ಬದುಕನ್ನು ನಾನು ಬಾಳಲೇ ಬೇಕು,ಬಾಳುತ್ತಿದ್ದೀನಿ.ಬೊಗಸೆಗೆ ಬರುವ ಹತ್ತು ರೂಪಾಯಿ ಇಲ್ಲವೇ ನೂರು ರೂಪಾಯಿಗಳಿಗೆ ನನ್ನ ಕನಸುಗಳನ್ನು ಹೊಸೆದು ಕೊಳ್ಳುತ್ತೇನೆ.ಇಷ್ಟು ಸತ್ಯ ನಾಳೆ ನನ್ನದ್ದು ಎನ್ನುವ ಭರವಸೆಯ ಬೆನ್ನೇರಿ ಬದುಕುನ್ನು ಬಾಳಿಸಿ ಕೊಳ್ಳುತ್ತಿದ್ದೀನಿ.

ನಿರೂಪಣೆ: ಸಿ.ಎಸ್.ನಿರ್ವಾಣ ಸಿದ್ದಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT