ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ಕ್ಕೆ ಕಚ್ಚಾತೈಲ ಆಮದು ಶೇ.10ರಷ್ಟು ಕಡಿಮೆ ಮಾಡುವ ಗುರಿ: ನರೇಂದ್ರ ಮೋದಿ

Last Updated 3 ಜನವರಿ 2020, 6:53 IST
ಅಕ್ಷರ ಗಾತ್ರ

ಬೆಂಗಳೂರು: ‘ಆವಿಷ್ಕಾರ, ಸ್ವಾಮ್ಯತೆ, ಉತ್ಪಾದನೆ ಮತ್ತು ಅಭಿವೃದ್ಧಿ. ಈ ನಾಲ್ಕು ಮಂತ್ರ ನಮ್ಮ ದೇಶವನ್ನು ವೇಗವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಇಲ್ಲಿನ ಜಿಕೆವಿಕೆ ಆವರಣದಲ್ಲಿ ನಡೆಯತ್ತಿರುವ ಐದು ದಿನಗಳ ಕೃಷಿ ವಿಜ್ಞಾನ ಕಾಂಗ್ರೆಸ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನನ್ನ ಹೊಸ ವರ್ಷದ ಪ್ರಾರಂಭವು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಈ ಕಾರ್ಯಕ್ರಮದೊಂದಿಗೆ ಆರಂಭವಾಗಿರುವುದು ಸಂತಸದ ವಿಚಾರ. ಚಂದ್ರಯಾನ–2 ಉಡಾವಣೆ ಸಂದರ್ಭದಲ್ಲಿ ನಾನು ಬೆಂಗಳೂರಿಗೆ ಬಂದಿದ್ದೆ. ಆಗ ನಮ್ಮ ದೇಶ ವಿಜ್ಞಾನವನ್ನು ಸಂಭ್ರಮಿಸಿದ ರೀತಿ ಈಗಲೂ ನನ್ನ ಕಣ್ಣಮುಂದಿದೆ’ ಎಂದು ಸ್ಮರಿಸಿದರು.

‘ಯುವ ವಿಜ್ಞಾನಿ, ಉದ್ಯಮಿಗಳು ವೈಯಕ್ತಿಕ ಪ್ರಗತಿಗಾಗಿ ಶ್ರಮಿಸುವುದರ ಜೊತೆಗೆ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ತುಡಿತವನ್ನು ಒಳಗೊಂಡಿರಬೇಕು. ತಮ್ಮ ಸಾಧನೆ ದೇಶದ ಸಾಧನೆ ಆಗಬೇಕು ಎನ್ನುವ ಆಕಾಂಕ್ಷೆ ನಿಮ್ಮಲ್ಲಿರಬೇಕು’ ಎಂದು ಹೇಳಿದರು.

‘ತಂತ್ರಜ್ಞಾನದ ಸದ್ಬಳಕೆಯಿಂದಲೇ ಎಲ್ಲರೂ ಸರ್ಕಾರದ ಭಾಗವಾಗಲು ಸಾಧ್ಯವಾಗಿದೆ. ಇಂಥ ಪರಿವರ್ತನೆಯನ್ನು ನಾವು ಪ್ರೋತ್ಸಾಹಿಸಬೇಕು ಮತ್ತು ಸದೃಢಪಡಿಸಬೇಕು. ಸಪ್ಲೇ ಚೈನ್ ವ್ಯವಸ್ಥೆಯಲ್ಲಿ ದೇಶಕ್ಕೆ ದೊಡ್ಡ ನಷ್ಟವಾಗುತ್ತದೆ. ಇದನ್ನು ಉಳಿಸಲು ತಂತ್ರಜ್ಞಾನ ಹೆಚ್ಚು ಬಳಕೆಯಾಗಬೇಕು. ಇದಕ್ಕೆಸರಳ ವ್ಯವಸ್ಥೆ ಯೋಚಿಸಿ’ ಎಂದರು.

‘ಗ್ರಾಮೀಣಾಭಿವೃದ್ಧಿಯಲ್ಲಿ ವಿಜ್ಞಾನ ತಂತ್ರಜ್ಞಾನದ ಮಹತ್ವ ಎಷ್ಟು ದೊಡ್ಡದು ಎಂಬುದು ಕಳೆದ ಐದು ವರ್ಷದಲ್ಲಿ ಜನತೆಗೆ ಅರಿವಾಗಿದೆ. ಅದು ಸ್ವಚ್ಛ ಭಾರತ ಇರಬಹುದು, ಆಯುಷ್ಮಾನ ಭಾರತ ಇರಬಹುದು. ತಂತ್ರಜ್ಞಾನದಿಂದ ಅವು ಜನರನ್ನು ಪ್ರಾಮಾಣಿಕವಾಗಿ ತಲುಪಲು ಸಾಧ್ಯವಾಗಿದೆ. ತುಮಕೂರಿನಲ್ಲಿ ಒನ್ ಬಟನ್ ಒತ್ತುವ ಮೂಲಕ ಆರು ಕೋಟಿ ಕೃಷಿಕರ ಖಾತೆಗೆ ಹಣ ವರ್ಗಾವಣೆ ಮಾಡಿ ದಾಖಲೆ ನಿರ್ಮಿಸಿದ್ದೇವೆ. ಇದು ಸಾಧ್ಯವಾಗಿದ್ದು ತಂತ್ರಜ್ಞಾನದ ಬಳಕೆಯಿಂದ’ ಎಂದು ಹೇಳಿದರು.

‘ಗ್ರಾಮೀಣ ಭಾಗದಲ್ಲಿ ಮನೆ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತಿವೆ.ಡೇಟಾ ವಿಜ್ಞಾನ, ಜಿಐಎಸ್, ರಿಯಲ್ ಟೈಮ್ ಮಾನಿಟರಿಂಗ್ ಬಳಸಿ ಕಾಮಗಾರಿ ಮೇಲೆ ನಿಗಾ ಇಡಲಾಗುತ್ತಿದೆ. ಇದರಿಂದ ಕಾಲಮಿತಿಯಲ್ಲಿ ಕಾಮಗಾರಿ ಮುಗಿಯುತ್ತಿದೆ. ವಿಜ್ಞಾನದ ಮೂಲಕ ಕೆಲಸ ಹಗುರಾಗಿ ಸುಲಭವಾಗುತ್ತಿದೆ. ಇದರಿಂದ ರೆಡ್ ಟೇಪಿಸಂ ಕಡಿಮೆಯಾಗಿದೆ.ಕೃಷಿಕರು ತಾವು ಬೆಳೆದ ಉತ್ಪನ್ನವನ್ನು ಮಧ್ಯವರ್ತಿಗಳಿಲ್ಲದೇ ನೇರವಾಗಿ ಮಾರುಕಟ್ಟೆಗೆ ತಲುಪಿಸುತ್ತಿದ್ದಾರೆ.ಇದಕ್ಕೆ ಡಿಜಿಟಲ್ ಮಾರ್ಕೆಟಿಂಗ್, ಇ‌ ಕಾಮರ್ಸ್ ಸಹಕಾರಿಯಾಗಿದೆ’ ಎಂದು ತಿಳಿಸಿದರು.

‘ಭಾರತ ಸರ್ಕಾರ ಜಲ ಜೀವನ್ ಎಂಬ ದೊಡ್ಡ ಕಾರ್ಯಕ್ರಮ ರೂಪಿಸಿದ್ದು ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಇದಕ್ಕೆ ತಂತ್ರಜ್ಞಾನದ ನೆರವು ದೊಡ್ಡ ಮಟ್ಟದಲ್ಲಿ ಬೇಕು.ಜಲ‌ ನಿರ್ವಹಣೆ, ಪ್ರತಿ ಮನೆಯಿಂದ ಹೊರ ಬರುವ ನೀರನ್ನು ಮರು ಬಳಕೆ ಮಾಡುವ ನಿಟ್ಟಿನಲ್ಲಿ ಸರಳ ತಂತ್ರಜ್ಞಾನದ ಅವಶ್ಯಕತೆ ಇದೆ. ಅದನ್ನು ನೀವು ಮಾಡಬೇಕು’ ಎಂದು ವಿಜ್ಞಾನಿಗಳಿಗೆ ಸಲಹೆ ನೀಡಿದರು.

‘ಮರುಬಳಕೆಯಾಗದ ಪ್ಲಾಸ್ಟಿಕ್ ಅನ್ನು ನಿಷೇಧಿಸಿದ್ದೇವೆ. ಈಗ ಅದಕ್ಕಿಂತಲೂ ಕಡಿಮೆ ಬೆಲೆಯ ಪರ್ಯಾಯವೊಂದರ ಬಗ್ಗೆ ವಿಜ್ಞಾನಿಗಳು ಯೋಚಿಸಬೇಕು. ಎಲೆಕ್ಟ್ರಾನಿಕ್ ಉಪಕರಣಗಳಲ್ಲಿರುವ ಲೋಹವನ್ನು ಹೊರತೆಗೆದು ಬಳಸಲು ಸಾಧ್ಯವಾಗುವ ಸುಲಭ ತಂತ್ರಗಳ ಬಗ್ಗೆ ಯೋಚಿಸಿ. ಇದರಿಂದ ವಾತಾವರಣವೂ ಸುರಕ್ಷಿತವಾಗುತ್ತದೆ. ಸಣ್ಣ ಉದ್ಯೋಗಗಳು ಸೃಷ್ಟಿಯಾಗುತ್ತವೆ’ ಎಂದು ಹೇಳಿದರು.

‘2022ರ ಹೊತ್ತಿಗೆ ನಾವು ಕಚ್ಚಾತೈಲದ ಆಮದನ್ನು ಶೇ 10ರಷ್ಟು ಕಡಿಮೆ ಮಾಡುವಂತೆ ಆಗಬೇಕು. ಜೈವಿಕ ಇಂಧನ, ಎಥೆನಾಲ್‌ ಬಳಕೆಯಿಂದ ಇದು ಸಾಧ್ಯವಾಗುತ್ತೆ. ನೀವು ಈ ಬಗ್ಗೆ ಯೋಚಿಸಿ. ಭಾರತವನ್ನು 5 ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಯಾಗಿಸಲು ನಿಮ್ಮೆಲ್ಲರ ಸಹಕಾರ ಬೇಕಿದೆ. ಕೃಷಿ ತ್ಯಾಜ್ಯ ನಿರ್ವಹಣೆ, ಶುದ್ಧ ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳಿಗೆ ರೈತ ಕೇಂದ್ರಿತ ಪರಿಹಾರಗಳನ್ನು ಅನ್ವೇಷಿಸಿ’ ಎಂದರು.

‘ಆರೋಗ್ಯವೇ ದೊಡ್ಡ ಸಂಪತ್ತು. ಚಿನ್ನದ ತುಣುಕಲ್ಲ ಎಂದು ಮಹಾತ್ಮಗಾಂಧಿ ಒಮ್ಮೆ ಹೇಳಿದ್ದರು. 2024ರ ಹೊತ್ತಿಗೆ ಕ್ಷಯ ರೋಗ ನಿರ್ಮೂಲನೆಯ ಗುರಿ ಹಾಕಿಕೊಂಡಿದ್ದೇವೆ. ಜಗತ್ತಿನ ದೊಡ್ಡ ಔಷಧ ರಫ್ತು ದೇಶವಾಗುವ ಗುರಿ ಇದೆ. ತಂತ್ರಜ್ಞಾನ ನಿಷ್ಪಕ್ಷವಾಗಿರುತ್ತದೆ. ಮಾನವೀಯತೆ ಮತ್ತು ಅಧುನಿಕ ತಂತ್ರಜ್ಞಾನದ ಸಹಯೋಗದಿಂದ ಹೊಸ ದಶಕದಲ್ಲಿ ಹೊಸ ಭಾರತವನ್ನು ಮತ್ತಷ್ಟು ಸದೃಢಗೊಳಿಸಲು ಸಾಧ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT