ತುಮಕೂರು- ಬೆಂಗಳೂರು ಪ್ಯಾಸೆಂಜರ್ ರೈಲು ಸಂಚಾರ ಪ್ರಾರಂಭಗೊಂಡ 5 ವರ್ಷ: ಸಂಭ್ರಮ

7

ತುಮಕೂರು- ಬೆಂಗಳೂರು ಪ್ಯಾಸೆಂಜರ್ ರೈಲು ಸಂಚಾರ ಪ್ರಾರಂಭಗೊಂಡ 5 ವರ್ಷ: ಸಂಭ್ರಮ

Published:
Updated:

ತುಮಕೂರು: ಸದಾ ಗಿಜಿಗಿಡುವ ನಗರದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ಹಬ್ಬದ ವಾತಾವರಣ. ಮಾವಿನ ತಳಿರು, ಬಾಳೆ ಗಿಡ, ಬಲೂನ್, ಹೂವುಗಳಿಂದ ಅಲಂಕಾರ.

ಇದೇನಿದು ವಿಶೇಷ. ಈ ದಿನ ಯಾವುದು ಹಬ್ಬ ಇಲ್ಲವಲ್ಲ. ಹೊಸ ರೈಲು ಏನಾದ್ರೂ ಪ್ರಾರಂಭವಾಯಿತೇ? –ಹೀಗೆ ಅಂದುಕೊಂಡವರು ಸ್ವಲ್ಪ ಮುಂದೆ ಹೋಗಿ ನೋಡಿದಾಗ ಹುಟ್ಟುಹಬ್ಬದ ಸಂಭ್ರಮ.

ತುಮಕೂರು- ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲು ಪ್ರಾರಂಭಗೊಂಡು ಆಗಸ್ಟ್ 3ಕ್ಕೆ 5 ವರ್ಷವಾಯಿತು. ಈ ಪ್ರಯುಕ್ತ ತುಮಕೂರು -ಬೆಂಗಳೂರ ರೈಲ್ವೆ ಪ್ರಯಾಣಿಕರ ವೇದಿಕೆಯು ತುಮಕೂರು- ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲಿನ ಹುಟ್ಟುಹಬ್ಬವನ್ನು ಪ್ರತಿ ವರ್ಷದಂತೆ ಆಚರಣೆ ಮಾಡಿತು.

ನಿತ್ಯ ನಗರದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರು, ವೇದಿಕೆ ಪದಾಧಿಕಾರಿಗಳು ತಮ್ಮ ಮನೆಯಲ್ಲಿ ಮಗುವಿನ ಹುಟ್ಟು ಹಬ್ಬ ಅಚರಣೆ ಮಾಡಿದಷ್ಟೇ ಸಡಗರದಿಂದ ರೈಲಿನ ಹುಟ್ಟು ಹಬ್ಬ ಅಚರಣೆ ಮಾಡಿದರು.

7 ಗಂಟೆಗೆ ಬಂದು ರೈಲಿನ ಪ್ರತಿ ಬೋಗಿಗೂ ಹೊರ ಭಾಗದಲ್ಲಿ ಅಲಂಕಾರ ಮಾಡಿದರು. ರೈಲು ಹೊರಡುವ ವೇಳೆಗೆ ಕೇಕ್ ಕತ್ತರಿಸಿ ಖುಷಿಪಟ್ಟರು. ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಅಧಿಕಾರಿಗಳಿಗೆ ಕೇಕ್ ವಿತರಿಸಿದರು.

ವೇದಿಕೆಯ ಗೌರವ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ‘ಹೋರಾಟ ಮಾಡಿ ಈ ರೈಲನ್ನು ಪಡೆದುಕೊಂಡಿದ್ದು, ಏನೊ ಒಂದು ಸಂಭ್ರಮ. ಸಾವಿರಾರು ಪ್ರಯಾಣಿಕರಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ. ರೈಲು ಚಾಲಕರಿಂದಲೇ ಕೇಕ್ ಕತ್ತರಿಸಿ ಎಲ್ಲರೂ ಸಿಹಿ ಹಂಚಿಕೊಳ್ಳುವುದು ವಿಶೇಷ. ರೈಲ್ವೆ ಇತಿಹಾಸದಲ್ಲಿಯೇ ಈ ರೀತಿ ಒಂದು ರೈಲಿನ ಹುಟ್ಟು ಹಬ್ಬದ ಆಚರಣೆ ಮಾಡಿಲ್ಲ. ನಾವು ಮಾಡುತ್ತಿದ್ದೇವೆ’ ಎಂದರು.

'ಮೂಲಸೌಕರ್ಯ ಕಲ್ಪಿಸುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಸಂಸದರಿಗೆ, ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ' ಎಂದರು.

ವೇದಿಕೆಯ ಪದಾಧಿಕಾರಿ ನಾಗರಾಜ್ ಮಾತನಾಡಿ, ‘ಐದು ವರ್ಷಗಳ ಹಿಂದೆ ಬೆಳಿಗ್ಗೆ ಬೆಂಗಳೂರಿಗೆ ಹೋಗಲು ರೈಲುಗಳಿರಲಿಲ್ಲ. 8 ಗಂಟೆಗೆ ಈ ನಿಲ್ದಾಣದಿಂದ ಗೋಲಗುಂಬಜ್ ರೈಲು ಹೊರಡುತ್ತಿತ್ತು. ಇದ್ದಕ್ಕಿದ್ದ ಹಾಗೆ ಬೆಳಿಗ್ಗೆ 6.30ಕ್ಕೆ ಸಮಯ ಬದಲಾಯಿಸಲಾಯಿತು. ಇದರಿಂದ ನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ನೌಕರರು, ವ್ಯಾಪಾರಸ್ಥರು, ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಯಿತು. ಈ ನಿಲ್ದಾಣದಿಂದಲೇ ಬೆಳಿಗ್ಗೆ ಒಂದು ರೈಲು ಒದಗಿಸಬೇಕು ಎಂದು ಅಂದಿಮ ರೈಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದಾಗ ಸ್ಪಂದಿಸಿದರು. ಹೀಗಾಗಿ, ಅಂದಿನಿಂದ ಈ ರೈಲಿನ ಹುಟ್ಟುಹಬ್ಬ ಆಚರಿಸುತ್ತಿದ್ದೇವೆ’ ಎಂದು ವಿವರಿಸಿದರು.

ಕೇಕ್ ಕತ್ತರಿಸಿದ ರೈಲು ಚಾಲಕ ನೀಲಕುಮಾರ್ ನಾಗ್ ಮಾತನಾಡಿ, ‘ನನ್ನ ಹದಿನಾಲ್ಕು ವರ್ಷದ ವೃತ್ತಿ ಜೀವನದಲ್ಲಿ ಇಂತಹ ಕಾರ್ಯಕ್ರಮ ಕಂಡಿಲ್ಲ. ತುಂಬಾ ಸಂತೋಷವಾಯಿತು. ಮೈಸೂರಿನಲ್ಲಿ ರೈಲುಗಳಿಗೆ ದಸರಾ ಹಬ್ಬದಲ್ಲಿ ಅಲಂಕಾರ ಮಾಡುವುದು ಕಂಡಿದ್ದೇನೆ. ರೈಲಿನ ಜನ್ಮದಿನಾಚರಣೆ ಮಾಡುತ್ತಿರುವುದನ್ನು ಇಲ್ಲಿಯೇ ಕಂಡಿದ್ದು’ ಎಂದರು.

 ಪದಾಧಿಕಾರಿಗಳಾದ ಬಾಲಾಜಿ, ನಾಗರಾಜ್, ರಘೋತ್ತಮರಾವ್, ರಾಜಶೇಖರ್, ದಯಾನಂದ್, ಹುಸೇನ್, ಅರ್ಷದ್, ಚಕ್ರವರ್ತಿ, ಸಾಗರ್, ಗಂಗರಾಮಯ್ಯ, ಸ್ಟೇಷನ್ ಮಾಸ್ಟರ್ ರಮೇಶ್, ರೈಲ್ವೆ ಪೊಲೀಸ್ ಅಧಿಕಾರಿ ಕುಬೇರಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 15

  Happy
 • 2

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !