ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುದುರೆ ವ್ಯಾಪಾರ’ ಆರೋಪ– ಪಾಲಿಕೆ ಕಲಾಪ ಬಲಿ

ಶಾಸಕರ ರಾಜೀನಾಮೆ ಖಂಡಿಸಿ ಆಡಳಿತ ಪಕ್ಷ ಪ್ರತಿಭಟನೆ: ಸಭೆ ಮುಂದೂಡಿದ ಮೇಯರ್
Last Updated 9 ಜುಲೈ 2019, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದಲೇ ರಾಜ್ಯದ ಕೆಲವು ಶಾಸಕರು ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ‘ಕುದುರೆ ವ್ಯಾಪಾರ’ವನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿ ಆಡಳಿತ ಪಕ್ಷದ ಸದಸ್ಯರು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಗದ್ದಲ ನಡೆಸಿದರು.

ಗದ್ದಲ ಹತೋಟಿಗೆ ಬಾರದ ಕಾರಣ ಮೇಯರ್‌ ಗಂಗಾಂಬಿಕೆ ಅವರು ಸಭೆಯನ್ನು ಬುಧವಾರಕ್ಕೆ ಮುಂದೂಡಿದರು.

ಚುಕ್ಕಿ ಗುರುತಿನ ಪ್ರಶ್ನೆಗಳ ಚರ್ಚೆ ಸಲುವಾಗಿ ಕರೆಯಲಾಗಿದ್ದ ವಿಶೇಷ ಸಭೆ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್‌ ಸದಸ್ಯ ವೇಲು ನಾಯ್ಕರ್‌, ‘ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ನಮ್ಮ ಕ್ಷೇತ್ರಕ್ಕೆ ಅಪ್ಪ ಅಮ್ಮ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಶಾಸಕರನ್ನು ನಮಗೆ ವಾಪಸ್‌ ಕೊಡಿಸಿ’ ಎಂದರು.

‘ನಿಮ್ಮ ಶಾಸಕರು ಪಂಚತಾರಾ ಹೋಟೆಲ್‌ನಲ್ಲಿ ಆರಾಮವಾಗಿದ್ದಾರೆ. ಚಿಂತೆ ಬಿಡಿ’ ಎಂದು ಬಿಜೆಪಿ ಸದಸ್ಯರು ಚುಚ್ಚಿದರು.

ಅಷ್ಟರಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ‘ಕುದುರೆ ವ್ಯಾಪಾರ ನಿಲ್ಲಿಸಿ’ ಎಂಬ ಘೋಷಣಾ ಫಲಕ ಗಳನ್ನು ಹಿಡಿದು ಬಿಜೆಪಿ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಬಳಿಕ ಮೇಯರ್‌ ಪೀಠದ ಎದುರಿಗೆ ಬಂದು ಗಲಾಟೆ ನಡೆಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಮೇಜು ಕುಟ್ಟುತ್ತಾ, ‘ಶೇಮ್‌... ಶೇಮ್‌...’ ಎಂದು ಹಂಗಿಸತೊಡಗಿದರು.

ಆಡಳಿತ ಪಕ್ಷದ ಸದಸ್ಯರೆಲ್ಲ ಪ್ರತಿಭಟನೆ ನಡೆಸುತ್ತಿದ್ದರೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ (ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಗೋಪಾಲಯ್ಯ ಅವರ ಪತ್ನಿ) ಸುಮ್ಮನೆ ಕುಳಿತಿದ್ದರು. ‘ಸದಸ್ಯರು ಆಸನಗಳಿಗೆ ಮರಳಬೇಕು. ಸಭೆ ನಡೆಸಲು ಅನುವು ಮಾಡಿಕೊಡಬೇಕು’ ಎಂದು ಮೇಯರ್‌ ಗಂಗಾಂಬಿಕೆ ಮನವಿ ಮಾಡಿದರು. ಬಳಿಕವೂ ಗದ್ದಲ ಮುಂದುವರಿದಿದ್ದರಿಂದ ಮೇಯರ್‌ ಅವರು ಸಭೆಯನ್ನು ಬುಧವಾರಕ್ಕೆ ಮುಂದೂಡಿದರು.

ಬಿಜೆಪಿ ಸದಸ್ಯರು ‘ಗೋವಿಂದಾ... ಗೋವಿಂದಾ...’ ಎಂದು ಘೋಷಣೆ ಕೂಗುತ್ತಾ ಸಭಾಂಗಣದಿಂದ ಹೊರನಡೆದರು.

ಆಡಳಿತ ಪಕ್ಷದವರೇ ಗದ್ದಲ ನಡೆಸಿದರೂ ನಿಯಂತ್ರಿಸದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮೇಯರ್‌, ‘ಎಷ್ಟೇ ಮನವಿ ಮಾಡಿದರೂ ಸದಸ್ಯರು ಸಭೆ ನಡೆಸಲು ಅವಕಾಶ ಕೊಡಲಿಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸದಸ್ಯರು ಗದ್ದಲವನ್ನುಂಟುಮಾಡಿದ್ದರಿಂದ ಸಭೆ ಮುಂದೂಡದೇ ಬೇರೆ ವಿಧಿ ಇರಲಿಲ್ಲ’ ಎಂದರು.

‘ಚುಕ್ಕಿ ಗುರುತಿನ ಪ್ರಶ್ನೆಗಳನ್ನು ಚರ್ಚಿಸಲು ಇನ್ನೂ ಅವಕಾಶ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮಾಸಾಂತ್ಯಕ್ಕೆ ಕೆಂಪೇಗೌಡ ಜಯಂತಿ’
‘ಈ ತಿಂಗಳ ಅಂತ್ಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಗುತ್ತದೆ. ಕೆಂಪೇಗೌಡ ಪ್ರಶಸ್ತಿಗೆ ಅರ್ಹರ ಆಯ್ಕೆಗೆ ಇನ್ನೂ ಸಮಿತಿ ರಚಿಸಿಲ್ಲ. ಕಾರ್ಯಕ್ರಮದ ದಿನಾಂಕವನ್ನು ಅಂತಿಮಗೊಳಿಸಿದ ಬಳಿಕ ಸಮಿತಿಯನ್ನು ರಚಿಸುತ್ತೇವೆ’ ಎಂದು ಮೇಯರ್‌ ತಿಳಿಸಿದರು.

‘ಮೇಯರ್‌, ರಾಜೀನಾಮೆ ನೀಡಲಿ’
‘ಆಡಳಿತ ಪಕ್ಷದವರೇ ಕೌನ್ಸಿಲ್‌ ಸಭೆಯಲ್ಲಿ ಧರಣಿ ನಡೆಸುವುದೆಂದರೆ ಏನರ್ಥ. ಕೌನ್ಸಿಲ್‌ ಸಭೆಯನ್ನು ಸಮರ್ಪಕವಾಗಿ ನಡೆಸಲು ಬಾರದ ಮೇಯರ್‌ ಹಾಗೂ ಆಡಳಿತ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಒತ್ತಾಯಿಸಿದರು.

‘ಯಾರೋ ಕೆಲವು ಶಾಸಕರು ಮುಂಬೈಗೆ ಹೋಗಿದ್ದಾರೆ ಎಂಬ ಕುಂಟು ನೆಪ ಹೇಳಿ ಆಡಳಿತ ಪಕ್ಷದವರು ಪ್ರತಿಭಟನೆ ನಡೆಸಿದ್ದಾರೆ. ಸಭೆ ನಡೆಸಲು ಅವಕಾಶ ನೀಡದ ಆಡಳಿತ ಪಕ್ಷದ ಸದಸ್ಯರನ್ನು ಮೇಯರ್‌ ಅವರು ಅಮಾನತು ಮಾಡಬೇಕಿತ್ತು. ನಾವೂ ಅದಕ್ಕೆ ಬೆಂಬಲ ನೀಡುತ್ತಿದ್ದೆವು’ ಎಂದರು.

‘ಚುಕ್ಕಿ ಗುರುತಿನ ಪ್ರಶ್ನೆಗಳನ್ನು ಚರ್ಚಿಸಲು ಮೇಯರ್‌ ಅವರು ಪ್ರತಿ ತಿಂಗಳೂ ಸಭೆ ಕರೆಯಬೇಕು. ಇವರ ಅವಧಿಯಲ್ಲಿ ಈ ಕುರಿತ ಒಂದು ಸಭೆಯೂ ನಡೆದಿಲ್ಲ. ಟಿಡಿಆರ್‌ ನೀಡುವ ವಿಚಾರದಲ್ಲಿ ನಡೆದಿರುವ ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಗರಣದ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಸಭೆಯನ್ನೇ ಮುಂದೂಡಿದ್ದಾರೆ’ ಎಂದು ಆರೊಪಿಸಿದರು.

‘ಮೇಯರ್‌, ಆಡಳಿತ ಪಕ್ಷದ ನಾಯಕ ರಾಜೀನಾಮೆ ನೀಡಲಿ’

**

ಶಾಸಕರೂ ಬಿಬಿಎಂಪಿ ಕೌನ್ಸಿಲ್‌ನ ಸದಸ್ಯರು. ನಾವೂ ಸರ್ಕಾರದ ಅಧೀನ. ಕೇಂದ್ರವು ರಾಜ್ಯ ಸರ್ಕಾರವನ್ನು ಉರುಳಿಸಲು ಯತ್ನಿಸಿದ್ದು, ಅದನ್ನು ಖಂಡಿಸುತ್ತೇವೆ.
-ಅಬ್ದುಲ್‌ ವಾಜಿದ್‌, ಆಡಳಿತ ಪಕ್ಷದ ನಾಯಕ

**

ಸಭೆಯನ್ನು ಮುಂದೂಡುವ ಮೂಲಕ ಮೇಯರ್‌ ಜನರ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆ. ಅವರು ಜನರ ಕ್ಷಮೆ ಕೇಳಬೇಕು.
-ಪದ್ಮನಾಭ ರೆಡ್ಡಿ, ಪಾಲಿಕೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT