ನಕ್ಸಲ್‌ ಆಗುವುದು ಅಪರಾಧ ಅಲ್ಲ: ಡಾ.ಎಲ್‌.ಹನುಮಂತಯ್ಯ ಪ್ರತಿಪಾದನೆ

7

ನಕ್ಸಲ್‌ ಆಗುವುದು ಅಪರಾಧ ಅಲ್ಲ: ಡಾ.ಎಲ್‌.ಹನುಮಂತಯ್ಯ ಪ್ರತಿಪಾದನೆ

Published:
Updated:
Deccan Herald

ದಾವಣಗೆರೆ: ‘ನಕ್ಸಲ್‌ ಆಗುವುದು ಅಪರಾಧ ಅಲ್ಲ; ಹಿಂಸೆ ಮಾಡುವುದು, ಯಾರನ್ನಾದರೂ ಕೊಲ್ಲುವುದು ಮಾತ್ರ ಅಪರಾಧ ಎಸಿಸಿಕೊಳ್ಳುತ್ತದೆ’ ಎಂದು ರಾಜ್ಯಸಭಾ ಸದಸ್ಯ ಡಾ. ಎಲ್‌. ಹನುಮಂತಯ್ಯ ಪ್ರತಿಪಾದಿಸಿದರು.

ಬಾಪೂಜಿ ವಿದ್ಯಾಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಾನವ ಹಕ್ಕುಗಳ ವೇದಿಕೆ ಆಶ್ರಯದಲ್ಲಿ ನಗರದ ಎ.ವಿ.ಕೆ. ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾತ್ವ ಗಾಂಧಿ 150ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಗರ ನಕ್ಸಲ್‌ ಹೆಸರಿನಲ್ಲಿ ಕವಿ ವರವರರಾವ್‌ ಹಾಗೂ ವಕೀಲೆ ಸುಧಾ ಭಾರದ್ವಾಜ್‌ ಅವರನ್ನು ಜೈಲಿನಲ್ಲಿ ಇಟ್ಟಿರುವುದಕ್ಕೆ ಅರ್ಥ ಇದೆಯೇ? ಇಂಥ ಸಂದರ್ಭದಲ್ಲೂ ನ್ಯಾಯಾಲಯ ಮಾತನಾಡದೆ ಮೂಕವಾಗಿರುವುದು ಇನ್ನೂ ಹೆಚ್ಚಿನ ದುಃಖದ ಸಂಗತಿ. ಯಾರು ನಮ್ಮನ್ನು ರಕ್ಷಿಸಬೇಕಿತ್ತೋ ಅವರೇ ಕೈಕೊಟ್ಟ ಪರಿಸ್ಥಿತಿ ನಮ್ಮದಾಗಿದೆ’ ಎಂದು ಹೇಳಿದರು.

‘ನಕ್ಸಲ್‌ ವಾದದಲ್ಲಿ ಕೊಲ್ಲುವ ಹಿಂಸಾ ಮಾರ್ಗ, ಅಹಿಂಸಾ ಮಾರ್ಗ ಹಾಗೂ ಚುನಾವಣಾ ಮಾರ್ಗವೂ ಇದೆ. ಜನರ ಕಷ್ಟಗಳಿಗೆ ಹೋರಾಟ ನಡೆಸುವವರನ್ನು ನಗರ ನಕ್ಸಲರು ಎಂದು ಹಣೆಪಟ್ಟಿ ಕಟ್ಟಿ ಜೈಲಿನಲ್ಲಿ ಇಟ್ಟಿರುವುದನ್ನು ಪ್ರಜಾಪ್ರಭುತ್ವ ಎಂದು ಯಾರಾದರು ಕರೆಯುತ್ತಾರಾ? ನನ್ನಂತೆ ಯೋಚಿಸಬೇಕು, ನನ್ನಂತೆ ಕಾವಿ ಬಟ್ಟೆ ತೊಟ್ಟಿಕೊಂಡು ಓಡಾಡಬೇಕು ಎಂದು ಕಾನೂನು ರೂಪಿಸಿದರೆ ಈ ದೇಶದ ಗತಿ ಏನಾಗಬೇಕು? ಈಗಾಗಲೇ ಉತ್ತರ ಪ್ರದೇಶಗಳಲ್ಲಿ ಎಲ್ಲ ಶಾಲೆಗಳಿಗೂ ಕೇಸರಿ ಬಣ್ಣ ಬಳಿಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನನ್ನಂತೆ ಯೋಚಿಸದೆ ಹೋದರೆ ನನ್ನ ವೈರಿ; ನನ್ನ ತರಹ ಚಿಂತನೆ ಮಾಡದಿದ್ದರೆ, ಊಟ ಮಾಡದಿದ್ದರೆ, ಬಟ್ಟೆ ಹಾಕದಿದ್ದರೆ ದೇಶದ್ರೋಹಿ ಎನ್ನಲು ಆರಂಭಿಸಿದ್ದೇವೆ. ಆದರೆ, ಪ್ರಜಾಪ್ರಭುತ್ವದಲ್ಲಿ ನಿಮಗೆ ಬೇಕಾದ ನಂಬಿಕೆ ಇಟ್ಟುಕೊಳ್ಳುವುದು ಆರೋಗ್ಯಕರ ವಾತಾವರಣ. ಯಾರಾದರೂ ತನನ್ನು ಸಮಾಜವಾದಿ, ಕಮ್ಯುನಿಸ್ಟ್‌ ಎಂದು ಹೇಳಿಕೊಂಡರೆ ಆತ ನಿಜವಾದ ಭಾರತೀಯ. ಅವರ‍್ಯಾರೂ ದೇಶದ್ರೋಹಿಗಳಲ್ಲ. ಅವರಿಗೆ ನಕ್ಸಲ್‌ ವಾದದ ಬಗ್ಗೆ ನಂಬಿಕೆ ಇದೆ. ಬಸವಣ್ಣನ ಅನುಭವ ಮಂಟಪದಲ್ಲಿ ಎಲ್ಲಾ ವರ್ಗದವರಿಗೂ ಮಾತನಾಡಲು ಅವಕಾಶ ನೀಡಲಾಗಿತ್ತು. ಅದು ನಿಜವಾದ ಪ್ರಜಾಪ್ರಭುತ್ವವಾಗಿತ್ತು’ ಎಂದು ಹೇಳಿದರು.

ತಮ್ಮನ್ನು ಅತಿ ಹೆಚ್ಚು ಟೀಕಿಸಿದ್ದ ಡಾ. ಬಿ.ಆರ್‌. ಅಂಬೇಡ್ಕರ್‌ ಹೆಸರನ್ನೇ ಸಂವಿಧಾನದ ಕರಡು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಗಾಂಧೀಜಿ ಶಿಫಾರಸು ಮಾಡಿದ್ದರು. ಗಾಂಧೀಜಿ ಯಾವತ್ತೂ ಅವರ ಮೇಲೆ ದ್ವೇಷ ಕಾರಲಿಲ್ಲ. ಆದರೆ, ಇಂದು ಯಾರಾದರೂ ಟೀಕಿಸಿದರೆ ಅವರನ್ನು ಒಂದು ಸಣ್ಣ ಬೋರ್ಡ್‌ಗೂ ಚೇರ್ಮನ್‌ ಮಾಡುವುದಿಲ್ಲ ಎಂದು ಹೇಳಿದ್ದರು.

‘ವಿರೋಧದ ಅಭಿಪ್ರಾಯವನ್ನು ಗೌರವಿಸುವುದು, ಮನ್ನಣೆ ನೀಡುವುದು ಪ್ರಜಾಪ್ರಭುತ್ವದ ಲಕ್ಷಣ ಎಂಬುದನ್ನು ಗಾಂಧೀಜಿ ನಮಗೆ ಕಲಿಸಿಕೊಟ್ಟಿದ್ದಾರೆ. ಅದನ್ನು ಪಾಲಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !