ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರಕ್ಕಾಗಿ ನೆರೆ ಸಂತ್ರಸ್ತರ ಸತ್ಯಾಗ್ರಹ

‘ಬೇಡಿಕೆ ಈಡೇರುವವರೆಗೂ ಅಹೋರಾತ್ರಿ ಧರಣಿ’
Last Updated 18 ಜೂನ್ 2020, 12:55 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಹೋದ ವರ್ಷ ಉಂಟಾದ ನೆರೆ ಹಾಗೂ ಅತಿವೃಷ್ಟಿಯಿಂದ ಸಂತ್ರಸ್ತರಾದ ಎಲ್ಲರಿಗೂ ಕೂಡಲೇ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಮತ್ತು ನೆರೆ ಸಂತ್ರಸ್ತರ ಹಿತಕ್ಷಣಾ ಸಮಿತಿ ನೇತೃತ್ವದಲ್ಲಿ ರೈತ ಮುಖಂಡರು ಹಾಗೂ ಸಂತ್ರಸ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು.

‘ಬಿದ್ದಿರುವ ಮನೆಗಳ ಜಿಪಿಎಸ್‌ ಪ್ರಕ್ರಿಯೆ ನಡೆಸಿ, ಪರಿಹಾರ ಕಲ್ಪಿಸಬೇಕು. ಬೆಳೆ ಹಾನಿ ಪರಿಹಾರ ನೀಡಿಕೆಯಲ್ಲಿ ಆಗಿರುವ ತಾರತಮ್ಯ ನಿವಾರಿಸಬೇಕು. ಅರ್ಹರೆಲ್ಲರಿಗೂ ನೆರವು ದೊರೆಯುವಂತೆ ನೋಡಿಕೊಳ್ಳಬೇಕು. ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕು. ಗೋವಿನಜೋಳವನ್ನು ಸರ್ಕಾರದಿಂದ ಬೆಂಬಲ ಬೆಲೆಗೆ ಖರೀದಿಸಬೇಕು’ ಎಂದು ಒತ್ತಾಯಿಸಿದರು.

‘ಕೃಷ್ಣಾ, ಘಟಪ್ರಭಾ, ಮಲಪ್ರಭಾ ಮೊದಲಾದ ನದಿಗಳ ಪ್ರವಾಹ ಉಂಟಾಗಿ ವರ್ಷ ಸಮೀಪಿಸುತ್ತಿದೆ. ಆದರೆ, ಸಾವಿರಾರು ಸಂತ್ರಸ್ತರಿಗೆ ಪರಿಹಾರ ದೊರೆತಿಲ್ಲ. ಮನೆಗಳು ಬಿದ್ದಿದ್ದರೂ ತಾಂತ್ರಿಕ ಕಾರಣಗಳನ್ನು ಹೇಳಿ, ದಾಖಲೆಗಳು ಸರಿ ಇಲ್ಲ ಎನ್ನುವ ನೆಪವೊಡ್ಡಿ ಪರಿಹಾರ ನಿರಾಕರಿಸಲಾಗಿದೆ. ಮಾನವೀಯತೆಯಿಂದ ನೋಡುತ್ತಿಲ್ಲ. ಇದರಿಂದಾಗಿ ಅವರು ಅತಂತ್ರವಾಗಿದ್ದಾರೆ. ಆಗಾಗ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಅಹೋರಾತ್ರಿ ಧರಣಿ ಅನಿವಾರ್ಯವಾಗಿದೆ. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುತ್ತೇವೆ’ ಎಂದು ರೈತ ಸಂಘ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ ತಿಳಿಸಿದರು.

‘ಮನೆಗಳು ಹಾಗೂ ಬೆಳೆ ಹಾನಿಗೆ ಸಂಬಂಧಿಸಿದಂತೆ ಸಮರ್ಪಕ ಪರಿಹಾರ ನೀಡಿಲ್ಲ’ ಎಂದು ದೂರಿದರು.

‘ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಜಿಲ್ಲೆಯ ವಿವಿಧೆಡೆಯಿಂದ ಹೊರಟಿದ್ದ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಮಲಪ್ರಭಾ ನದಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡ ರಾಮದುರ್ಗ ತಾಲ್ಲೂಕಿನ ಪಡಕೋಟದ ನಿವಾಸಿ ಶೈಲಾ ಮುನ್ನೋಳ್ಳಿ ಧರಣಿ ವೇಳೆ ಕಣ್ಣೀರಿಟ್ಟರು.

‘ಮನೆ ದುರಸ್ತಿಗೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ತಾಂತ್ರಿಕ ಕಾರಣದಿಂದಾಗಿ ಹಣ ಬಂದಿಲ್ಲ ಎನ್ನುತ್ತಾರೆ. ಸಂತ್ರಸ್ತರಾದ ನಮಗೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ’ ಎಂದು ದೂರಿದರು.

‘ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ಅದರಿಂದ ಬರುವ ಹಣದಿಂದ ಜೀವನ ಸಾಗಿಸುತ್ತಿದ್ದೇನೆ. ಮನೆ ಬಿಟ್ಟರೆ ಬೇರೆ ಇಲ್ಲ. ಅದೂ ನೆರೆಯಿಂದಾಗಿ ಬಿದ್ದಿದೆ. ಇನ್ನಾದರೂ ಸರ್ಕಾರದಿಂದ ಪರಿಹಾರ ಸಿಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಅಳಲು ತೋಡಿಕೊಂಡರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ‘ದಾಖಲೆಗಳಿಲ್ಲದೆ ಕೆಲವರಿಗೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಬರೆಯಲಾಗಿದೆ. ಅಲ್ಲಿಂದ ಬರುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಮುಖಂಡರಾದ ಶ್ರೀನಿವಾಸಗೌಡ ಪಾಟೀಲ, ಭೀಮಶಿ ಗದಾಡಿ, ಶಶಿಕಾಂತ ಪಡಸಲಗಿ, ಮಹಾಂತೇಶ ಪೂಜಾರಿ, ಯಲ್ಲಪ್ಪ ದೊಡ್ಡಮನಿ, ಮಂಜುನಾಥ ಉಪ್ಪಾರ, ರವಿ ಸಿದ್ದಮ್ಮನವರ, ಶಿವಾನಂದ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT