ಭಾನುವಾರ, ಆಗಸ್ಟ್ 18, 2019
23 °C
ಪ್ರಯಾಣ ಮುಂದೂಡಲು ಐಜಿಪಿ ಮನವಿ

ಬೆಳಗಾವಿ: ಬಹುತೇಕ ರಸ್ತೆ ಸಂಪರ್ಕ ಕಡಿತ

Published:
Updated:
Prajavani

ಬೆಳಗಾವಿ: ಭಾರಿ ಮಳೆ ಹಾಗೂ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ಮಾರ್ಗಗಳು ಕಡಿತಗೊಂಡಿವೆ. ಮಹಾರಾಷ್ಟ್ರದ ಕೊಲ್ಹಾಪುರ, ಸಾವಂತವಾಡಿ, ಗೋವಾದ ಪಣಜಿ ಕಡೆ ಹೋಗುವ ಎಲ್ಲ ರೀತಿಯ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರ ಜೊತೆಗೆ ಜಿಲ್ಲೆಯ ಚಿಕ್ಕೋಡಿ ಹಾಗೂ ಗೋಕಾಕ ಮಾರ್ಗದಲ್ಲಿಯೂ ವಾಹನಗಳ ಸಂಚಾರವನ್ನು ತಡೆಹಿಡಿಯಲಾಗಿದೆ.

ಈ ಮಾರ್ಗದ ಎಲ್ಲ ಪ್ರಯಾಣಗಳನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರದ್ದುಪಡಿಸಿದೆ. ಖಾಸಗಿ ವಾಹನಗಳಿಗೂ ತೆರಳಲು ಪೊಲೀಸರು ಅವಕಾಶ ನೀಡುತ್ತಿಲ್ಲ. ಸೇತುವೆ ಹಾಗೂ ರಸ್ತೆ ಕುಸಿದಿರುವ ಸ್ಥಳಗಳಲ್ಲಿ ಬಿಗಿಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

‘ಮಳೆ ತಗ್ಗುವವರೆಗೆ ಹಾಗೂ ರಸ್ತೆ ದುರಸ್ತಿಯಾಗುವವರೆಗೆ ಈ ಮಾರ್ಗದಲ್ಲಿ ಪ್ರಯಾಣಿಕರು ಸಂಚರಿಸಬಾರದು. ತಮ್ಮ ಪ್ರಯಾಣವನ್ನು ಮುಂದೂಡಬೇಕು’ ಎಂದು ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ ಮನವಿ ಮಾಡಿಕೊಂಡಿದ್ದಾರೆ.

ಯಮಕನಮರಡಿ ಬಳಿ ರಸ್ತೆ ಕುಸಿದುಹೋಗಿದ್ದರಿಂದ ಕೊಲ್ಹಾಪುರ ಮಾರ್ಗದ ಕಡೆ ತೆರಳುವ ವಾಹನಗಳನ್ನು ತಡೆಹಿಡಿಯಲಾಗಿದೆ. ಅಂಕಲಗಿ ಬಳಿಯ ಸೇತುವೆ ಘಟಪ್ರಭಾ ನೀರಿನಿಂದ ಜಲಾವೃತವಾಗಿದ್ದು, ಗೋಕಾಕ ಕಡೆ ತೆರಳುವ ವಾಹನಗಳನ್ನು ಸ್ಥಗಿತಗೊಳಿಸಲಾಗಿದೆ.

ಗೋವಾ ಕಡೆ ತೆರಳುವ ಜಾಂಬೋಟಿ, ಅಂಬೋಲಿ ಮಾರ್ಗದಲ್ಲಿ ಭಾರಿ ಮಳೆ ಸುರಿದಿದೆ. ಜಾಂಬೋಟಿ ರಸ್ತೆಯ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಎಂ.ಕೆ. ಹುಬ್ಬಳ್ಳಿ ಬಳಿ ಮಲಪ್ರಭಾ ಮೈದುಂಬಿ ಹರಿಯುತ್ತಿರುವುದರಿಂದ ಸೇತುವೆಯ ಸುರಕ್ಷತಾ ದೃಷ್ಟಿಯಿಂದ ಒಂದೊಂದಾಗಿ ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಹೆಚ್ಚಿನ ವಾಹನಗಳು ಬರದಂತೆ ಧಾರವಾಡದ ಬಳಿ ತಡೆಹಿಡಿಯಲಾಗುತ್ತಿದೆ.

‘ಸದ್ಯಕ್ಕೆ ಬೆಳಗಾವಿ– ಬಾಗಲಕೋಟೆ, ಬೆಳಗಾವಿ– ಬೈಲಹೊಂಗಲ ಮಾರ್ಗ ಮಾತ್ರ ಸುರಕ್ಷಿತವಾಗಿದ್ದು, ಇಲ್ಲಿ ವಾಹನಗಳ ಸಂಚಾರವಿದೆ. ಇನ್ನುಳಿದ ಇತರ ಮಾರ್ಗಗಳು ಬಂದ್‌ ಆಗಿವೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್‌. ಮುಂಜಿ ಹೇಳಿದರು.

Post Comments (+)