ಶನಿವಾರ, ಜನವರಿ 25, 2020
28 °C

ಪತ್ನಿ ಕಿರುಕುಳದಿಂದ ಬೇಸತ್ತು ಟೆಕಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪತ್ನಿ ಹಾಗೂ ಆಕೆಯ ಪೋಷಕರ ಕಿರುಕುಳದಿಂದ ಬೇಸತ್ತಿದ್ದರು’ ಎನ್ನಲಾದ ಸಾಫ್ಟ್‌ವೇರ್ ಎಂಜಿನಿಯರ್ ಶ್ರೀನಾದ್ (39) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಶ್ರೀನಾದ್ ಅವರ ಸಾವಿಗೆ ಪತ್ನಿ ರೇಖಾ ಹಾಗೂ ಆಕೆಯ ಪೋಷಕರು ಕಾರಣವೆಂದು ತಂದೆ ಗುಡ್ಲ ನಾಗೇಶ್ವರರಾವ್ ದೂರು ನೀಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಹಾಗೂ ಅಪರಾಧಿಕ ಸಂಚು (ಐಪಿಸಿ 34) ಆರೋಪದಡಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆಂಧ್ರಪ್ರದೇಶದ ಶ್ರೀನಾದ್ 2009ರಲ್ಲಿ ಮದುವೆ ಆಗಿದ್ದರು. ದಂಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬ್ಯಾಂಕ್‌ನಿಂದ ಸಾಲ ಮಾಡಿ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಫ್ಲ್ಯಾಟ್‌ ಖರೀದಿಸಿ ವಾಸವಿದ್ದರು. ಐಷಾರಾಮಿ ಜೀವನ ಬಯಸುತ್ತಿದ್ದ ಪತ್ನಿ ದುಂದು ವೆಚ್ಚ ಮಾಡುತ್ತಿದ್ದಳು. ಅದನ್ನು ಪ್ರಶ್ನಿಸಿದ್ದ ಶ್ರೀನಾದ್‌, ಆ ರೀತಿ ಮಾಡದಂತೆ ಬುದ್ದಿವಾದ ಹೇಳಿದ್ದರು.’

‘ಅಷ್ಟಕ್ಕೆ ಶ್ರೀನಾದ್‌ ಮೇಲೆ ಕೋಪಗೊಂಡಿದ್ದ ಪತ್ನಿ ಮಾನಸಿಕವಾಗಿ ಕಿರುಕುಳ ನೀಡಲಾರಂಭಿಸಿದ್ದಳು. ತಂದೆ–ತಾಯಿಯಿಂದ ಆಸ್ತಿ ಪಡೆದುಕೊಂಡು ಬರುವಂತೆ ಪತಿಗೆ ಪೀಡಿಸಲಾರಂಭಿಸಿದ್ದಳು. ತಿಂಗಳಿಗೆ ₹ 1 ಲಕ್ಷ ಬಾಡಿಗೆ ಬರುವ ಆಸ್ತಿ ಕೊಡು, ಇಲ್ಲದಿದ್ದರೆ ವಿಚ್ಛೇದನ ನೀಡು ಎಂದು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದರು. ಈ ಬಗ್ಗೆ ನಾಗೇಶ್ವರರಾವ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಬುಧವಾರ (ಡಿ. 11) ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜೆ ನನಗೆ ಕರೆ ಮಾಡಿದ್ದ ಅಪಾರ್ಟ್‌ಮೆಂಟ್‌ ಸಮುಚ್ಚಯದ ಸೆಕ್ಯುರಿಟಿ ಸಿಬ್ಬಂದಿ ವಿಷಯ ತಿಳಿಸಿದ್ದರು’ ಎಂಬುದಾಗಿ ನಾಗೇಶ್ವರರಾವ್ ತಿಳಿಸಿದ್ದಾರೆ. ಸಾವಿನ ಸಂಬಂಧ ಪತ್ನಿ ಹಾಗೂ ಆಕೆಯ ಪೋಷಕರನ್ನು ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು