ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವ-ರುದ್ರ

Last Updated 28 ಜನವರಿ 2019, 20:23 IST
ಅಕ್ಷರ ಗಾತ್ರ

ಗಗನ ತಲೆನವಿರಾಗೆ ಪೆರೆತಾರೆ ಹೂವಾಗೆ |
ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ ||
ನಗುನಗುವ ಬೊಬ್ಬಿಡುವ ಜೀವತಾಂಡವರಸಿಕ |
ಭಗವಂತ ಶಿವರುದ್ರ – ಮಂಕುತಿಮ್ಮ || 86 ||

ಪದ-ಅರ್ಥ: ನವಿರಾಗೆ=ನವಿರ್(ಕೂದಲು)+ಆಗಿ, ಪೆರೆ=ಚಂದ್ರ, ವಪು=ದೇಹ, ಬೊಬ್ಬಿಡುವ-ಅಬ್ಬರಿಸುವ.
ವಾಚ್ಯಾರ್ಥ: ಆಕಾಶವೆಲ್ಲ ತಲೆಯ ಕೂದಲಾಗಿ, ತಾರೆ, ಚಂದ್ರರು ಹೂವಾಗಿ, ಇಡೀ ಜಗತ್ತೇ ಅವನ ದೇಹವಾಗಿ, ಮಾಯೆ ಹೆಂಡತಿಯಾಗಿ ಯಾವಾಗಲೂ ನಗುನಗುವ, ಅಬ್ಬರಿಸುವ ಜೀವ, ತಾಂಡವ, ರಸಿಕನಾದವನು ಭಗವಂತ. ಅವನು ಶಿವನೂ ಹೌದು, ರುದ್ರನೂ ಹೌದು.

ವಿವರಣೆ: ಸಾಕಾರ ಮತ್ತು ನಿರಾಕಾರ ಇವೆರಡೂ ಪರವಸ್ತುವಿನ ಸ್ಥೂಲ-ಸೂಕ್ಷ್ಮ ಅಭಿವ್ಯಕ್ತ ರೂಹುಗಳು. ಪರವಸ್ತು ಎಲ್ಲವನ್ನು ಮೀರಿದ ತತ್ವ. ಅದು ದೃಷ್ಟಿಗೋಚರವೂ ಅಲ್ಲ, ಸಾಮಾನ್ಯ ಬುದ್ಧಿಗಮ್ಯವೂ ಅಲ್ಲ. ಸ್ವಲೀಲೆಯ ಕಾರಣದಿಂದ ಅದು ಬುದ್ಧಿಗಮ್ಯ ಮತ್ತು ದೃಷ್ಟಿಗೋಚರವೆಂಬ ಎರಡು ರೂಪಗಳನ್ನು ತಾಳುತ್ತದೆ. ಸ್ಥೂಲ ರೂಪ ಕಣ್ಣಿಗೆ ಕಾಣುವಂತಹದು; ಸೂಕ್ಷ್ಮರೂಪ ಮನಸ್ಸಿಗೆ ಹೊಳೆಯುವಂಥದ್ದು. ಸಾಕಾರದೇವನಿಗೆ ಅಲಂಕಾರಗಳು, ಉಪಚಾರಗಳು ಬೇಕು. ಆದರೆ ನಿರಾಕಾರ ದೇವನಿಗೆ ಬಾಹ್ಯ ಉಪಚಾರಗಳಿಲ್ಲ; ಅವೆಲ್ಲ ಸಂಪೂರ್ಣ ವಿಸರ್ಜನೆಯಾದವುಗಳು.

ಮನುಷ್ಯನ ಮನಸ್ಸು ನಿರಾಕಾರ ತತ್ವಕ್ಕೆ ನಮಗೊಪ್ಪುವ, ನಮಗಿಷ್ಟವಾದ ಆಕಾರವನ್ನು ಕೊಟ್ಟು, ಉಪಚಾರ, ಅಲಂಕಾರಗಳನ್ನು ಮಾಡಿ ನೋಡಬಯಸುತ್ತದೆ. ನಮಗಿರುವ ಸಂಸಾರವನ್ನು ಅದಕ್ಕೂ ಕಟ್ಟಬಯಸುತ್ತದೆ. ಈ ಕಗ್ಗದಲ್ಲಿರುವುದೂ ಅದೇ. ಇಡೀ ವಿಶ್ವವನ್ನೇ ಆವರಿಸಿದ ಶಿವನನ್ನು ಆಕಾರದಲ್ಲಿ ಕಾಣುವ ತಹತಹಿಕೆ. ಶಿವನ ಆಕಾರ-ನಿರಾಕಾರ ಸ್ವರೂಪವನ್ನು ಅರ್ಥವತ್ತಾಗಿ ಹೇಳುತ್ತಿದ್ದಾರೆ. ನಿನ್ನ ತಲೆಗೆ ಕಪ್ಪಾದ ಆಕಾಶವೇ ಕೂದಲು; ಅಲ್ಲಿ ಮಿನುಗುತ್ತಿರುವ ತಾರೆಗಳ ಹಾಗೂ ಚಂದ್ರ ನಿನ್ನ ತಲೆಯನ್ನು ಅಲಂಕರಿಸುವ ಹೂವುಗಳು; ನೀವೆ ವಿಶ್ವತೋಮುಖ ಅಂದರೆ ಸರ್ವವ್ಯಾಪಕ. ಇಡೀ ಜಗತ್ತೇ ನಿನ್ನ ದೇಹ; ಎಲ್ಲರನ್ನೂ, ಎಲ್ಲವನ್ನೂ ಭ್ರಮೆಯಲ್ಲಿ ಮುಳುಗಿಸಿ, ಕಾಡುವ ಮಾಯೆ ನೀನು ಹೇಳಿದಂತೆ ಕೇಳುವ ಸತಿ. ನೀನು ನಗುನಗುತ ರಸಿಕನೂ ಹೌದು; ಬೊಬ್ಬಿಡುತ ತಾಂಡವ ನೃತ್ಯವನ್ನು ಮಾಡುವ ಭಯಂಕರನೂ ಹೌದು. ಅದಕ್ಕೇ ಭಗವಂತನು ಶಿವನೂ ಹೌದು, ರುದ್ರನೂ ಹೌದು. ತನ್ನ ಪ್ರೀತಿಯಿಂದ, ಶಾಂತಿಯಿಂದ ಮಂಗಳವನ್ನುಂಟು ಮಾಡುವವನು ಶಿವ. ಬೇಡವಾದದ್ದನ್ನು ನಿರ್ದಾಕ್ಷಿಣ್ಯವಾಗಿ ತೊಲಗಿಸಿ, ಲಯವನ್ನುಂಟುಮಾಡುವವನು ರುದ್ರ. ಎರಡೂ ಅವನದೇ ರೂಪುಗಳು.

ಪರಶಿವನನ್ನು ಎಷ್ಟು ರೀತಿಯಲ್ಲಿ, ಯಾವ ಆಕಾರದಲ್ಲಿ ವರ್ಣಿಸಿದರೂ ತೃಪ್ತಿ ಇಲ್ಲ. ಯಾಕೆಂದರೆ ಅವೆಲ್ಲ ನಮ್ಮ ವರ್ಣನೆಗಳು. ಅವನು ಘನಕ್ಕೆ ಘನ. ಪೂರ್ಣಕ್ಕೆ ಪೂರ್ಣ. ಅವನಿಗೆ ಯಾವ ನಾಮವಾದರೂ ಸರಿಯೆ. ನಾಮವೊಂದು ಶಬ್ದಸೀಮೆ. ನಿಸ್ಸೀಮ ದೇವನಿಗೆ ಯಾವ ನಾಮ? ಇಂಥ ದೇವನಿಗೆ ಪೂಜೆ ಎಂಥದ್ದು? ಮನುಷ್ಯ ಇಂಥ ಸ್ವಯಂಪೂರ್ಣ, ಪರಿತೃಪ್ತ, ಶುದ್ಧ ಚೈತನ್ಯಕ್ಕೆ ಪುಷ್ಪಗಳಿಂದ ಅಲಂಕರಿಸಿ, ಅಭಿಷೇಕ ಮಾಡಿ, ನೈವೇದ್ಯ ನೀಡಬೇಕೆನ್ನುತ್ತಾನೆ. ಆತ ಮಾಡುವುದು ತನ್ನ ಸಂತೋಷಕ್ಕಾಗಿ. ಭಗವಂತನ ಅವನದೇ ಸೃಷ್ಟಿಯಲ್ಲಿ ಅವನ ಪೂಜೆ ಅನವರತವೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT