ಸೋಮವಾರ, ಜನವರಿ 20, 2020
17 °C
ಬಿಳಿಗಿರಿರಂಗನಬೆಟ್ಟ: ಭೂಪರಿವರ್ತನಾ ಆದೇಶ ರದ್ದುಗೊಳಿಸಿದ ಜಿಲ್ಲಾಧಿಕಾರಿ

ಪರಿಸರ ಶಿಕ್ಷಣ ಹೆಸರಲ್ಲಿ ‌‘ರೆಸಾರ್ಟ್‌‘

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟದಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ (ವಿಜಿಕೆಕೆ) ಗೌರವ ಕಾರ್ಯದರ್ಶಿ ಡಾ.ಎಚ್‌.ಸುದರ್ಶನ್‌ ಮಾಲೀಕತ್ವದ 8 ಎಕರೆ ಜಮೀನಿನಲ್ಲಿ ‘ಪರಿಸರ ಶಿಕ್ಷಣ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರ’ದ ಹೆಸರಿನಲ್ಲಿ ರೆಸಾರ್ಟ್‌ ನಡೆಸುತ್ತಿರುವುದು ಕಂಡು ಬಂದಿರುವುದರಿಂದ, 2009ರಲ್ಲಿ ಹೊರಡಿಸಲಾಗಿದ್ದ ಭೂ ಪರಿವರ್ತನಾ ಆದೇಶ ರದ್ದುಗೊಳಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶ ಹೊರಡಿಸಿದ್ದಾರೆ.

ರೆಸಾರ್ಟ್‌ ಮಾದರಿಯಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿಲ್ಲ ಎಂದು ವಿಜಿಕೆಕೆ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದು, ಆದೇಶವನ್ನು ಹೈಕೋರ್ಟ್‌ನಲ್ಲಿ ಪ‍್ರಶ್ನಿಸಿರುವುದಾಗಿ ಹೇಳಿದೆ.

ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ (ಬಿಆರ್‌ಟಿ) ವ್ಯಾಪ್ತಿಯಲ್ಲಿ ಬರುವ, ಬಿಳಿಗಿರಿರಂಗನಬೆಟ್ಟ ಗ್ರಾಮದ ಸರ್ವೆ ನಂಬರ್‌ನಲ್ಲಿ 4/68ರಲ್ಲಿ ಎಂಟು ಎಕರೆ ಜಮೀನನ್ನು ‘ಶಿಕ್ಷಣ ಕೇಂದ್ರ’ ತೆರೆಯುವ ಉದ್ದೇಶಕ್ಕಾಗಿ 2009ರ ಸೆಪ್ಟೆಂಬರ್‌ 16ರಂದು ಭೂಪರಿವರ್ತನೆ ಮಾಡಿ ಆದೇಶ ಹೊರಡಿಸಲಾಗಿತ್ತು. ಅದೇ ವರ್ಷದ ಡಿಸೆಂಬರ್‌ 8ರಂದು ಈ ಆದೇಶವನ್ನು ‘ಪರಿಸರ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರ’ ತೆರೆಯುವ ಉದ್ದೇಶಕ್ಕೆ ಎಂದು ತಿದ್ದುಪಡಿ ಮಾಡಲಾಗಿತ್ತು.  

ಪ್ರವಾಸೋದ್ಯಮ ಇಲಾಖೆ ನೀಡಿದ್ದ ₹1.36 ಕೋಟಿ ಅನುದಾನ ಬಳಸಿಕೊಂಡು, ಸಂಸ್ಥೆಯು ವಿವೇಕ್‌ ಕರುಣಾ ಫೌಂಡೇಷನ್‌ ಅಡಿಯಲ್ಲಿ ‘ಗೊರುಕನ’ ಹೆಸರಿನಲ್ಲಿ ಕಾಟೇಜ್‌, ಸ್ಪಾ, ಟ್ರೀ ಹೌಸ್‌ ಹಾಗೂ ಇನ್ನಿತರ ಸೌಲಭ್ಯ ಹೊಂದಿರುವ ಪ್ರವಾಸಿ ತಾಣ ಅಭಿವೃದ್ಧಿ ಪಡಿಸಿತ್ತು. ಪರಿಸರ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರದ ಹೆಸರಿನಲ್ಲಿ ರೆಸಾರ್ಟ್‌ ನಡೆಸಲಾಗುತ್ತಿದೆ ಎಂಬ ಆರೋಪ ಆಗಿಂದಾಗ್ಗೆ ಕೇಳಿಬರುತ್ತಿತ್ತು. ಪರವಾನಗಿ ಪಡೆಯದೇ ಕೇಂದ್ರ ನಿರ್ಮಿಸಲಾಗಿದೆ ಎಂದು ಅರಣ್ಯ ಇಲಾಖೆ ಕೂಡ ಆರೋಪಿಸಿತ್ತು.

2015ರಲ್ಲಿ ಬಿಆರ್‌ಟಿಯ ಅಂದಿನ ಉಪಸಂರಕ್ಷಣಾಧಿಕಾರಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು, ‘ವಿಜಿಕೆಕೆಯು ‘ಗೊರುಕನ’ ಹೆಸರಿನಲ್ಲಿ ವಾಣಿಜ್ಯ ಉದ್ದೇಶದ ಚಟುವಟಿಕೆ ನಡೆಸುತ್ತಿದೆ. ಸಂರಕ್ಷಿತ ಪ್ರದೇಶದಲ್ಲಿ ಮುಂದಿನ 50 ವರ್ಷಗಳವರೆಗೆ ಭೂಮಿಯ ಸ್ವರೂಪವನ್ನು ಬದಲಾಯಿಸಬಾರದು ಎಂದು 2002ರ ಸೆಪ್ಟೆಂಬರ್‌ 9ರಂದು ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಸಂಸ್ಥೆ ಉಲ್ಲಂಘಿಸಿದೆ. ಹಾಗಾಗಿ ಭೂಪರಿವರ್ತನೆ ಆದೇಶಗಳನ್ನು ರದ್ದುಗೊಳಿಸಬೇಕು’ ಎಂದು ಮನವಿ ಮಾಡಿದ್ದರು. 

‘2008ರಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಚಟುವಟಿಕೆ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ವಿಜಿಕೆಕೆ ನೀಡಿದ್ದ ಪ್ರಸ್ತಾವವು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಿಂದ ತಿರಸ್ಕೃತಗೊಂಡಿತ್ತು. ಹಾಗಿದ್ದರೂ ಸಂಸ್ಥೆ ರೆಸಾರ್ಟ್‌ ನಿರ್ಮಿಸಿದೆ’ ಎಂದು ದೂರಿದ್ದರು.

ಈ ಪತ್ರದ ಆಧಾರದಲ್ಲಿ ಜಿಲ್ಲಾಧಿಕಾರಿ ಅವರು ಸಂಸ್ಥೆಯ ಡಾ.ಎಚ್‌.ಸುದರ್ಶನ್‌ಗೆ ನೋಟಿಸ್‌ ನೀಡಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಸುದರ್ಶನ್‌ ಅವರು ಆರೋಪಗಳನ್ನು ನಿರಾಕರಿಸಿದ್ದರು.

ಸ್ಥಳ ಪರಿಶೀಲಿಸಿ ವರದಿ ನೀಡಲು ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಯಳಂದೂರು ತಹಶೀಲ್ದಾರ್‌ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಲಾಗಿತ್ತು.

2017ರ ಜುಲೈ 28ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಮಿತಿ, ಪರಿಸರ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರಕ್ಕೆ ಮೀಸಲಾದ ಜಾಗದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದೆ ಎಂದು ಹೇಳಿತ್ತು. 

‘ರೆಸಾರ್ಟ್‌ ನಡೆಸುವ ಅನಿವಾರ್ಯತೆ ಇಲ್ಲ’
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸುದರ್ಶನ್‌ ಅವರನ್ನು ಸಂಪರ್ಕಿಸಿದಾಗ, ತಾವು ರಾಮೇಶ್ವರಂನಲ್ಲಿದ್ದು, ವಿಜಿಕೆಕೆ ಗೌರವ ಸಂಯೋಜಕ ಅರುಣ್‌ ಕುಮಾರ್‌ ಅವರೊಂದಿಗೆ ಮಾತನಾಡುವಂತೆ ಹೇಳಿದರು. 

‘ಸಂಸ್ಥೆಯು ಬಿಳಿಗಿರಿ ರಂಗನಬೆಟ್ಟದಲ್ಲಿ ರೆಸಾರ್ಟ್ ನಡೆಸುತ್ತಿಲ್ಲ. ಅದರ ಅಗತ್ಯವೂ ಇಲ್ಲ. ನಮ್ಮಲ್ಲಿ ಬಾರ್‌, ರೆಸ್ಟೋರೆಂಟ್‌, ಈಜುಕೊಳ ಮುಂತಾದ ಸೌಲಭ್ಯಗಳಿಲ್ಲ. ಕೇಂದ್ರವು ಐಷಾರಾಮಿಯಾಗಿ ಇದ್ದ ಮಾತ್ರಕ್ಕೆ ಅದು ರೆಸಾರ್ಟ್‌ ಅಲ್ಲ’ ಎಂದು ಅರುಣ್‌ ಕುಮಾರ್ ಹೇಳಿದರು.

‘ಸಂಸ್ಥೆಗೆ ಸೇರಿದ ಜಾಗವನ್ನು ಡಾ.ಸುದರ್ಶನ್‌ ಅವರು ಸ್ವಂತ ದುಡ್ಡಿನಿಂದ ಖರೀದಿಸಿದ್ದಾರೆ. ಪರಿಸರ ಶಿಕ್ಷಣ ಎಂದರೆ ಇಡೀ ದಿನ ತರಗತಿ ಮಾಡುವದಲ್ಲ. ಕೇಂದ್ರಕ್ಕೆ ಬಂದವರಿಗೆ ಇಲ್ಲಿನ ಪರಿಸರ, ಬುಡಕಟ್ಟು ಸಂಸ್ಕೃತಿಗಳನ್ನು ವಿವಿರಿಸಲಾಗುತ್ತದೆ. ವಿಜ್ಞಾನಿಗಳು, ವನ್ಯಜೀವಿ ತಜ್ಞರೆಲ್ಲ ಇಲ್ಲಿಗೆ ಭೇಟಿ ನೀಡಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

*
ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಆದೇಶ ಮರುಪರೀಲನೆಗೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡುತ್ತೇವೆ. ಪ್ರಾದೇಶಿಕ ಆಯುಕ್ತರಿಗೂ ಮೇಲ್ಮನವಿ ಸಲ್ಲಿಸುತ್ತೇವೆ
-ಡಾ.ಎಸ್‌.ಅರುಣ್‌ಕುಮಾರ್‌, ವಿಜಿಕೆಕೆ ಗೌರವ ಸಂಯೋಜಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು