ಬಳ್ಳಾರಿ ಲೋಕಸಭಾ ಕ್ಷೇತ್ರ: ಪತಿ ಪರ ಪ್ರಚಾರಕ್ಕೆ ಬಾರದ ಪತ್ನಿ!

ಗುರುವಾರ , ಏಪ್ರಿಲ್ 25, 2019
31 °C
ದೇವೇಂದ್ರಪ್ಪ ಪುತ್ರಿ, ಸೊಸೆಯರಿಂದ ಪ್ರಚಾರ

ಬಳ್ಳಾರಿ ಲೋಕಸಭಾ ಕ್ಷೇತ್ರ: ಪತಿ ಪರ ಪ್ರಚಾರಕ್ಕೆ ಬಾರದ ಪತ್ನಿ!

Published:
Updated:
Prajavani

ಬಳ್ಳಾರಿ: ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರವಾಗಿ ಅವರ ಪತ್ನಿ ವೈ.ಸುಶೀಲಮ್ಮ ಅವರು ಪ್ರಚಾರಕ್ಕೆ ಬರುವ ಸಾಧ್ಯತೆ ಕ್ಷೀಣಿಸಿದೆ. ಈ ನಡುವೆಯೇ, ಮತದಾನಕ್ಕೆ ಇನ್ನು ಹತ್ತು ದಿನ ಉಳಿದಿರುವಂತೆ, ದೇವೇಂದ್ರಪ್ಪ ಪುತ್ರಿ ಮತ್ತು ಸೊಸೆಯಂದಿರು ಪ್ರಚಾರಕ್ಕೆ ಬಂದು ಗಮನ ಸೆಳೆದಿದ್ದಾರೆ.

ಪತಿಯು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಅಭ್ಯರ್ಥಿಯಾಗಿರುವ ಸಂದರ್ಭದಲ್ಲೇ, ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯೆಯಾಗಿರುವ ಸುಶೀಲಮ್ಮ ಕಾಂಗ್ರೆಸ್‌ನಲ್ಲೇ ಉಳಿದಿರುವುದು ಈ ಸನ್ನಿವೇಶಕ್ಕೆ ಕಾರಣ. ಒಂದೇ ಮನೆಯ ದಂಪತಿ ಭಿನ್ನ ಪಕ್ಷಗಳಿಗೆ ಸೇರಿದ ಪರಿಣಾಮವಿದು.

ದೇವೇಂದ್ರಪ್ಪ ಅವರು ನಾಮಪತ್ರ ಸಲ್ಲಿಸಿದ ದಿನವೇ ಸುದ್ದಿಗಾರರು ‘ನಿಮ್ಮ ಪತ್ನಿ ಪ್ರಚಾರಕ್ಕೆ ಬರುತ್ತಾರೆಯೇ ಎಂದು ಕೇಳಿದ್ದರು. ‘ಅವರು ಕಾಂಗ್ರೆಸ್‌ನಲ್ಲಿದ್ದಾರೆ ಎಂಬ ವಾಸ್ತವ ಸ್ಥಿತಿ ಅರಿತೂ ನೀವು ಇಂಥ ಪ್ರಶ್ನೆ ಕೇಳಬಹುದೇ’ ಎಂದು ದೇವೇಂದ್ರಪ್ಪ ಮರುಪ್ರಶ್ನೆ ಕೇಳಿ ನಿರ್ಗಮಿಸಿದ್ದರು.

ನಂತರ ನಡೆದ ಬೆಳವಣಿಗೆಯಲ್ಲಿ, 'ಕಾಂಗ್ರೆಸ್‌ನಲ್ಲೇ ಇರುವುದರಿಂದ ಸುಶೀಲಮ್ಮ ಉಗ್ರಪ್ಪ ಪರವಾಗಿ ಪ್ರಚಾರಕ್ಕೆ ಬರುತ್ತಾರೆಯೇ' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌, ‘ಬರುತ್ತಾರೆ’ ಎಂದು ಖಚಿತ ದನಿಯಲ್ಲಿ ಹೇಳಿದ್ದರು. ಆದರೆ ಇದುವರೆಗೂ ಸುಶೀಲಮ್ಮ ಕಾಂಗ್ರೆಸ್‌ ಪ್ರಚಾರ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿಲ್ಲ. 

ಮಗಳು, ಸೊಸೆಯಂದಿರ ಪ್ರಚಾರ: ವೈ,ದೇವೇಂದ್ರಪ್ಪ ಅವರ ಪುತ್ರಿ ಭಾಗ್ಯಮ್ಮ, ಸೊಸೆಯಂದಿರಾದ ಲಕ್ಷ್ಮಿ ಹಾಗೂ ಸುಪ್ರೀತಾ ಅವರು ಶಾಸಕ ಜಿ.ಸೋಮಶೇಖರರೆಡ್ಡಿ ಅವರೊಂದಿಗೆ ನಗರದ 19ನೇ ವಾರ್ಡ್‌ನಲ್ಲಿ ಶನಿವಾರ ಪ್ರಚಾರ ನಡೆಸಿದರು.

ವಾರ್ಡಿನಲ್ಲಿ ಮತದಾರರ ಮನೆಗಳಿಗೆ ಭೇಟಿ ಮತ ಯಾಚಿಸಿದ ಅವರು, ‘ದೇವೇಂದ್ರಪ್ಪ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಸಹಕರಿಸಿ’ ಎಂದು ಮನವಿ ಮಾಡಿದರು.

ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್‌, ಮಲ್ಲನಗೌಡ, ವೀರಶೇಖರ ರೆಡ್ಡಿ, ಕೃಷ್ಣಾರೆಡ್ಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಶಿಕಲಾ ಪ್ರಚಾರದಲ್ಲಿ ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !