ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗರೂಪಿ ಶಿವ , ಶಿವರೂಪಿ ಲಿಂಗ: ವ್ಯತ್ಯಾಸವೇನಿಲ್ಲ!

Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

* ಪ್ರೊ.ಶಾಶ್ವತ ಸ್ವಾಮಿ ಮುಕ್ಕುಂದಿಮಠ

ವೀರಶೈವ ಲಿಂಗಾಯತ ಧರ್ಮದ ಬಗ್ಗೆ ಈಗ ನಡೆಯುತ್ತಿರುವ ಬೀದಿ ರಂಪಾಟ ರಾಜಕೀಯ ಕೆಸರೆರಚಾಟದ, ಅರ್ಥವಿಲ್ಲದ ಹಾಗೂ ನಿರರ್ಥಕ ಹೋರಾಟವಾಗಿದೆ. ಇಂತಹ ಧರ್ಮ ಸೂಕ್ಷ್ಮಗಳನ್ನು ಅರಿಯಲು ಪೂರ್ವಗ್ರಹ ಪೀಡಿತರಲ್ಲದವರು, ವೇದವಾಙ್ಮಯ ವಚನ ಸಾಹಿತ್ಯವನ್ನು ತಲಸ್ಪರ್ಶಿ ಆಳವಾಗಿ ಅಭ್ಯಾಸ ಮಾಡಿದವರು, ಪಂಡಿತರಾದವರಿಗೆ ಮಾತ್ರ ಸಾಧ್ಯ. ಈಗ ಬೀದಿಗಿಳಿದು ರಂಪಮಾಡುವ, ಬಾಯಿಗೆ ಬಂದುದ್ದನ್ನು ಹೇಳುವ, ಪ್ರಚಾರಕ್ಕೆ ವಿವಾದವನ್ನು ಸೃಷ್ಟಿಸುವ, ಪತ್ರಿಕೆಯಲ್ಲಿ ಸದಾ ಕಾಣಿಸಿಕೊಳ್ಳವವರು ಹಿರಿಯರಾಗಲಾರರು, ಇಂಥವರನ್ನೇ ಕುರಿತು ಅಲ್ಲಮ ಪ್ರಭುದೇವರು ‘ಆದ್ಯರಲ್ಲದ ವೇದ್ಯರಲ್ಲದ ಸಾಧ್ಯರಲ್ಲದ ಹಿರಿಯರು ನೋಡಾ’ ಎಂದಿರಬೇಕು. ಇಂದು ನಡೆಯುತ್ತಿರುವ ವೀರಶೈವ ಲಿಂಗಾಯತ ಧರ್ಮಕ್ಕಾಗಿ ಬೀದಿ ಜಗಳ ಮಾಡುತ್ತಿರುವವರಿಗೆ ಅಲ್ಲಮನ ವಚನ ಅನ್ವಯವಾಗುತ್ತದೆ.

ವೀರಶೈತ ಲಿಂಗಾಯತ ಎರಡೂ ಒಂದೆ. ತಾತ್ವಿಕವಾಗಿ ಹಾಗೂ ತಾರ್ಕಿಕವಾಗಿ ಅವುಗಳಲ್ಲಿ ಭಿನ್ನತೆಯಿಲ್ಲ. ಅವೆರಡೂ ಸಂಸ್ಕೃತ ಪದಗಳು. ವೀರಶೈವ ಲಿಂಗಾಯತ ಧರ್ಮ ಶಿವನ ಪಾರಮ್ಯವನ್ನು ಪ್ರತಿಪಾದಿಸುತ್ತವೆ. ವೀರಶೈವದಲ್ಲಿರುವ ‘ಶೈವ’ ಶಿವನಾಗಿ ಲಿಂಗರೂಪಿಯಾದರೆ, ಲಿಂಗಾಯತದಲ್ಲಿರುವ ‘ಲಿಂಗ’ ಶಿವರೂಪಿಯಾಗಿದ್ದಾನೆ. ಹೀಗೆ, ಶಿವ-ಲಿಂಗ ಇವು ಅಭಿನ್ನವಾಗಿದ್ದರೂ ಸಂಸ್ಕೃತ ಭಾಷೆಯ ಪರಿಜ್ಞಾನವಿಲ್ಲದ ಕೆಲವರು ಅವುಗಳನ್ನು ಬೇರ್ಪಡಿಸಲು ಕೂದಲು ಸೀಳುವ ಕಸರತ್ತು ಮಾಡುತ್ತಿದ್ದಾರೆ. ಧರ್ಮದ ಮೂಲ ತತ್ವಗಳಾದ ಷಟ್‍ಸ್ಥಲ, ಅಷ್ಟಾವರಣ, ಪಂಚಾಚಾರ ಸಿದ್ಧಾಂತಗಳು, ಪುರಾಣ ಪುಣ್ಯಕಥೆ, ಶಿವಪೂಜೆ, ಲಿಂಗಾರ್ಚನೆ, ಪೂಜಾ ವಿಧಾನಗಳು ವೀರಶೈವ-ಲಿಂಗಾಯತರು ಆಚರಿಸುತ್ತಾರೆ. ಊಟೋಪಾಚಾರ, ವಿವಾಹ ವಿಧಾನಗಳಲ್ಲಿ ಒಂದೇ ಆಚರಣೆಯಿದೆ.

ಆಚಾರಕ್ಕೆ ಹೆಚ್ಚು ಗಮನವಹಿಸುವ ವಿದ್ಯಾವಂತರು ಮಾಡುವ ಆಚರಣೆಗಳಿಗೂ, ಹೆಚ್ಚು ವಿದ್ಯಾವಂತರಲ್ಲದ ಗ್ರಾಮೀಣ ಜನರ ಆಚರಣೆಗಳಿಗೂ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಇದು ಧಾರ್ಮಿಕ ದೋಷವೆನಿಸುವುದಿಲ್ಲ. ಆಕ್ಷೇಪಾರ್ಹವೂ ಅಲ್ಲ. ಆದರೆ, ಕೆಲವರು ಇದೇ ವ್ಯತ್ಯಾಸವನ್ನು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡು ವೀರಶೈವ-ಲಿಂಗಾಯತವನ್ನು ಸೀಳುವ ಪ್ರಯತ್ನ ಮಾಡುತ್ತಿರುವುದು ಧರ್ಮ ದುರಂತ.

ಹನ್ನೆರಡನೇಯ ಶತಮಾನದಲ್ಲಿ ಬಸವಾದಿ ಶರಣರು, ವೈದಿಕ ಧರ್ಮಗಳಲ್ಲಿರುವ ವರ್ಣಾಶ್ರಮ, ಅಸ್ಪೃಶ್ಯತೆ, ಲಿಂಗತಾರತಮ್ಯ, ಜಡ ಕಂದಾಚಾರ, ಅಸಮಾನತೆ, ಜೀವವಿರೋಧಿ ಕರ್ಮಸಿದ್ಧಾಂತವನ್ನು ಧಿಕ್ಕರಿಸಿ ಒಂದು ಕಡೆ ವೈದಿಕ ಧರ್ಮವನ್ನು ವಿರೋಧಿಸಿದರು. ಮತ್ತೊಂದೆಡೆ ವೇದೋಪನಿಷತ್ತು, ಶಾಸ್ತ್ರ ಪುರಾಣಗಮ, ಭಗವದ್ಗೀತೆಗಳಲ್ಲಿರುವ ಮಾನವನ ಊದ್ರ್ವಮುಖಿ ಹಾಗೂ ಜನಮುಖಿ ತತ್ಪಾದರ್ಶಗಳನ್ನು ಸ್ವೀಕರಿಸಿ ತಮ್ಮ ವಚನವಾಙ್ಮಯದಲ್ಲಿ ಪ್ರತಿಪಾದಿಸುವ ಮೂಲಕ ವೈದಿಕ ಧರ್ಮವನ್ನು ಗೌರವಿಸಿದರು, ಪ್ರೀತಿಸಿದರು. ಸಂಸ್ಕೃತದಲ್ಲಿರುವ ವೇದಾಂತ ಸಾರವನ್ನು ವಚನಗಳ ಮೂಲಕ ಕನ್ನಡ ಭಾಷೆಗೆ ಅನುವಾದ ಮಾಡಿದ ಶರಣರು ಸಂಸ್ಕೃತ ಜ್ಞಾನಿಗಳಾಗಿದ್ದರು. ವಿಶೇಷವಾಗಿ ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭುದೇವ, ಸಿದ್ದರಾಮೇಶ್ವರರು, ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಪಡೆದಿದ್ದರು. ಬಸವಣ್ಣನವರು ವೈದಿಕ ಧರ್ಮದಿಂದ ವೀರಶೈವಕ್ಕೆ ಬಂದವರು. ಅವರು ವೇದ, ಉಪನಿಷತ್ತು, ಶಾಸ್ತ್ರ, ಆಗಮ, ಬ್ರಹ್ಮಸೂತ್ರ, ಭಗವದ್ಗೀತೆಗಳಲ್ಲಿ ಪಾರಂಗತರಾಗಿದ್ದರು. ಸಂಸ್ಕೃತ ಭಾಷೆ ಅವರಿಗೆ ಕರತಲಾಮಲಕವಾಗಿತ್ತು. ಅವರಿಗಿದ್ದ ಶಾಸ್ತ್ರಪಾಂಡಿತ್ಯವನ್ನು ಅವರ ಒಂದು ವಚನದಲ್ಲಿ ’ವೇದಕ್ಕೆ ಒರೆಯ ಕಟ್ಟುವೆ ಶಾಸ್ತ್ರಕ್ಕೆ ನಿಗಮ ನಿಕ್ಕುವೆ ಆಗಮನಕ್ಕೆ ಮೂಗು ಕೊಯ್ಯುವೆ’ ಎಂದು ಹೇಳಿದ್ದಾರೆ. ಈ ವಚನದ ನುಡಿ ವೈದಿಕ ಧರ್ಮಕ್ಕೆ ವಿರೋಧವೆಂದು ಸಾಮಾನ್ಯವಾಗಿ ಕಂಡರೂ ಸಂಸ್ಕೃತದಲ್ಲಿರುವ ವೇದ, ಶಾಸ್ತ್ರ, ಆಗಮಗಳಲ್ಲಿ ಅವರಿಗಿರುವ ಅಪಾರ ಜ್ಞಾನವಿತ್ತು, ಪ್ರಭುತ್ವವಿತ್ತು ಎಂಬುದು ಅದರ ಒಳ ಅರ್ಥವಾಗಿದೆ. ವಚನಗಳಲ್ಲಿ ಪ್ರತಿಪಾದಿತವಾದ ಅಧಿಕ ವೈದಿಕ ವಿಚಾರಗಳು ಇದಕ್ಕೆ ನಿದರ್ಶನವಾಗಿದೆ.

’ವಚನಗಳು ಕನ್ನಡದ ಉಪನಿಷತ್ತುಗಳು’ ಎಂಬ ಘನತೆಗೆ ವಚನಗಳು ಭಾಜನವಾಗಿವೆ. ’ವಚನಗಳು ಶಾಸ್ತ್ರವೂ ಹೌದು, ಸಾಹಿತ್ಯವೂ ಹೌದು’ ಎನ್ನುವಷ್ಟು ಸಂಸ್ಕೃತಕ್ಕೆ ಸರಿಸಾಟಿಯಾಗಿ ನಿಂತವು. ವಚನ ಪಿತಾಮಹ ಫ.ಗು.ಹಳ್ಳಕಟ್ಟಿ, ಶಿ.ಶಿ.ಬಸವನಾಳ, ಎಂ.ಆರ್.ಶ್ರೀನಿವಾಸಮೂರ್ತಿಗಳಂಥ ಘನ ವಿದ್ವಾಂಸರು ವಚನ ಸಾಹಿತ್ಯ ಸಂಸ್ಕೃತ ಭಾಷೆಯ ವೇದೋಪನಿಷತ್ತಿನ ಸಾರವೆಂದು ಅಭಿಪ್ರಾಯಪಟ್ಟಿದ್ದಾರೆ. ವಚನ ಮತ್ತು ಸಂಸ್ಕೃತ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದವರಿಗೆ ’ವಚನಗಳು ಕನ್ನಡದ ಉಪನಿಷತ್ತು’ ಎಂದು ಗೋಚರವಾಗದೆ ಇರದು. ವೇದಾಂತದಂಥ ಗಹನವಾದ ಕ್ಲಿಷ್ಟವಾದ ಶಾಸ್ತ್ರ ವಿಷಯವನ್ನು ಸಾಮಾನ್ಯರೂ ತಿಳಿಯುವಂತೆ ಶಾಸ್ತ್ರ ಭಾಷೆಯಾಗಿ ಮಾಡಲು ಅವರು ಕನ್ನಡವನ್ನು ದುಡಿಸಿದರು. ಅವರು ವೇದಾಂತ ವಿಷಯವನ್ನು ಎಷ್ಟು ಸರಳ ಹಾಗು ಸುಂದರವಾಗಿ ಕನ್ನಡದಲ್ಲಿ ಅನುವಾದಿಸಿದ ದೃಷ್ಟಾಂತಗಳು ಇಲ್ಲಿವೆ.

’ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು’ ವಚನ ಸಾಲುಗಳು ‘ತ್ವಮೇವ ಮಾತಾ ತ್ವಮೇವ ಪಿತಾ ತ್ವಮೇವ ಸಖಾ ತ್ವಮೇವ ಬಂಧು’ ಎಂಬುದು ಭಗವದ್ಗಿತೆಯ ಅನುವಾದ. ಮತ್ತೊಂದು ವಚನ ’ವಿಶ್ವತೋಮುಖ ನೀನೇ ದೈವ ವಿಶ್ವತೋ ಚಕ್ಷು ನೀನೆ ದೈವ ವಿಶ್ವತೋ ಬಾಹು ನೀನೆ ದೇವ’ ಎಂಬ ಪುರುಷಸೂಕ್ತ ’ಸಹಸ್ರ ಶೀರ್ಷಾ ಪುರಷಃ ಸಹಸ್ರಾಕ್ಷುಸ್ಸಹಸ್ರಪಾತ್’ ಎಂಬುದು ಋಗ್ವೇದೋಕ್ತ ಪುರುಷ ಸೂಕ್ತವಾಗಿದೆ. ಇಲ್ಲಿ ಕನ್ನಡ ಸರಳ ಹಾಗೂ ಅರ್ಥಪೂರ್ಣವಾಗಿ ಅನುವಾದಗೊಂಡಿದೆ. ಇನ್ನೂ ’ದೇವನೊಬ್ಬ ನಾಮ ಹಲವು’ –ಏಕಂ ಸತ್ ವಿಪ್ರಾ ಬಹುದಾ ವದಂತಿ ’ಸತ್ಯದ ಬಲದಿಂದ ಅಸತ್ಯದ ಕೇಡು ನೋಡಾ ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಾ’ ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ’ ಸತ್ಯಮೇವ ಜಯತೇ ನಾನೃತಂ ಎಂಬುದು ಉಪನಿಷತ್ತಿನ ವಾಕ್ಯಗಳು ’ಹುತ್ತವಬಡಿದರೆ ಹಾವು ಸಾಯಬಲ್ಲುದೆ’ ಇಂಥ ಅನುಷಂಗಿಕ ವಚನೋಕ್ತಿಗಳು, ಉಪನಿಷತ್ತಿನಿಂದ ಎತ್ತಿಕೊಂಡ ಅದೆಷ್ಟೋ ವಚನ ವಾಕ್ಯಗಳು ಮುಮಕ್ಷುಗಳನ್ನು ವಚನ ಜ್ಞಾನದತ್ತ ಒಯ್ಯುತ್ತವೆ.

ವಚನಗಳಲ್ಲಿ ಪ್ರತಿಪಾದಿತವಾದ ಷಟ್‍ಸ್ಥಲ ಸಿದ್ಧಾಂತ ಅಲ್ಲಿಯೇ ಅಭಿವ್ಯಕ್ತವಾಗಿರುವುದಿಲ್ಲ. ಅದೊಂದು ಶಾಸ್ತ್ರವಾಗಿ ರೂಪಗೊಂಡಿದೆ. ಈ ಶಾಸ್ತ್ರಕ್ಕೆ ವಚನ ಪೂರ್ವದ ಶಾಸ್ತ್ರಗ್ರಂಥವೂಂದು ಆಧಾರವಾಗಿರುವುದು ಸ್ಪಷ್ಟವಾಗುತ್ತದೆ. ಶಕ್ತಿವಿಶಿಷ್ಟಾದೈತ ಶಾಸ್ತ್ರ ಗ್ರಂಥದಲ್ಲಿ ಷಟ್‍ಸ್ಥಲ ಸಿದ್ಧಾಂತ ತತ್ವಗಳ ಬೋಧಿಸಿದೆ. ಇದೊಂದು ಆಚಾರ್ಯರು ಪ್ರತಿಪಾದಿತ ಅದ್ವೈತ, ವಿಶಿಷ್ಟಾದೈತ ಮತ್ತು ದ್ವೈತ ಸಿದ್ದಾಂತಗಳು ಭಾರತೀಯ ವೇದಾಂತದರ್ಶನದಲ್ಲಿ ಮುಖ್ಯವಾಗಿವೆ. ಅದರಂತೆ ಶಕ್ತಿ ವಿಶಿಷ್ಟಾದೈತವು ಷಟ್‍ಸ್ಥಲ ಸಿದ್ಧಾಂತದರ್ಶನದಿಂದ ವೇದಾಂತದಲ್ಲಿ ಪ್ರಮುಖಸ್ಥಾನ ಪಡೆದಿದೆ. ಅದ್ವೈತ ಮತ್ತು ಶಕ್ತಿ ವಿಶಿಷ್ಟಾದೈತ ಸಿದ್ಧಾಂತಗಳು ಸಮಾನವಾಗಿ ಬಾಹುವಂಶ ಹೋಲುತ್ತವೆ. ಭಕ್ತಸ್ಥಳದಿಂದ ಐಕ್ಯಸ್ಥಳದವರೆಗಿನ ಆರು ಮೆಟ್ಟಿಲುಗಳು ಸಾಧನೆಯಿಂದ ಸಾಧಕನಾಗಿ ಜೀವಿ ಐಕ್ಯಸ್ಥಳದಲ್ಲಿ ಪರಮಾತ್ಮಲ್ಲಿ ಐಕ್ಯವಾಗಿ ಪರಮಾತ್ಮನೇ ಆಗುತ್ತಾನೆ. ಈ ವಿಶಿಷ್ಟಾದೈತ ಸಿದ್ಧಾಂತ ವಚನ ಷಟ್‍ಸ್ಥಲ ಸಿದ್ಧಾಂತಕ್ಕೆ ಆಧಾರವಾಗಿರುವುದು ಸ್ಟಷ್ಟ ನಿದರ್ಶನವಾಗಿದೆ.

ಬಸವ ಪೂರ್ವದಲ್ಲಿ ಷಟ್‍ಸ್ಥಲ ಸಿದ್ಧಾಂತ ಪ್ರತಿಪಾದಿಸುವ ದಾರ್ಶನಿಕರೂ, ವೇದಾಂತಿಗಳೂ ಆಚಾರ್ಯರೂ ಶರಣರೂ ಇದ್ದೂ ಈ ಸಿದ್ದಾಂತವನ್ನು ಪ್ರಚುರ ಪಡಿಸಿರುವುದು ಸ್ಪಷ್ಟಗೋಚರಿಸುತ್ತದೆ. ಬಸವ ಪೂರ್ವ ಸುಮಾರು ಒಂದು ಶತಮಾನದ ಹಿಂದೆ ಕೊಂಡಕುಳಿ ಕೇಶಿ, ದೇವರದಾಸಿಮಯ್ಯ/ಜೇಡರದಾಸಿಮಯ್ಯಗಳು ತಮ್ಮ ಕಾವ್ಯ ಮತ್ತು ವಚನಗಳಲ್ಲಿ ಈ ಸಿದ್ದಾಂತವನ್ನು ಪ್ರತಿಪಾದಿಸಿರುವುದು. ಸಾಧರಪೂರ್ವಕ ನಿರ್ದೇಶನವಾಗಿದೆ. ಜೇಡರ ದಾಸಿಮಯ್ಯರ (ಕ್ರಿ.ಶ.1060) ವಚನಗಳು ಇದಕ್ಕೆ ಸಾಕ್ಷಿಯಾಗಿವೆ. ’ಆದ್ಯರ ವಚನ ಪರುಷ ಕಂಡಯ್ಯ’ ಎಂಬ ಬಸವಣ್ಣನವರ ವಚನ ಈ ಮಾತನ್ನು ದೃಢೀಕರಿಸುತ್ತದೆ. ಷಟ್‍ಸ್ಥಲ ಸಿದ್ದಾಂತವನ್ನು ಬೋಧಿಸುವ ವಚನಗಳು ಹನ್ನೆರಡನೆಯ ಶತಮಾನದ ಮುಂಚೆ ರಚನೆಯಾಗಿದ್ದು ಕೊಂಡಕುಳಿ ಕೇಶಿ, ದಾಸಿಮಾರ್ಯರು, ಆಚಾರ್ಯರು ಇವರು ಷಟ್‍ಸ್ಥಲ ಸಿದ್ಧಾಂತ ಪ್ರತಿಪಾದಿಸಿದ ಆದ್ಯರು.

ಮತ್ತೊಂದು ಅತ್ಯಂತ ಸ್ಮರಣೀಯಲ್ಲಿರಬೇಕಾದ, ಸದಾ ಪರಿಗಣಿಸಬೇಕಾದ ಐತಿಹಾಸಿಕ ಮಹತ್ವದ ಘಟನೆ ಎಂದರೆ, ಹನ್ನೆರಡನೇಯ ಶತಮಾನದ ಶರಣರ ವಚನ ಚಳವಳಿಯ ಕಾಲ, ಪಂಚಪೀಠದ ರೇಣುಕಾಚಾರ್ಯರ ಪರಂಪರೆಯ ರೇವಣಸಿದ್ದರು ಹಾಗೂ ಅವರ ಪುತ್ರ ರುದ್ರಮುನಿಯಗಳು ಇವರು ಕಲ್ಯಾಣ ಮತ್ತು ಮಂಗಳವೇಢಿ ಪ್ರದೇಶದಲ್ಲಿ ಸಂಚರಿಸಿ ಧರ್ಮ ಬೋಧನೆ ಮಾಡುತ್ತಾ ಶರಣ ಚಳವಳಿಗೆ ನೈತಿಕ ಬೆಂಬಲ ನೀಡಿದರು. ಸೊನ್ನಲಿಗೆಯಲ್ಲಿ ಸಿದ್ಧರಾಮರ ತಾಯಿ ಸುಗ್ಗಳೆಯನ್ನು ದೂರದಿಂದ ಕಂಡ ರೇಣವಸಿದ್ಧರು ಪಲ್ಲಕ್ಕಿಯಿಂದ ಇಳಿದು ಪಾದುಕೆಗಳನ್ನು ಬಿಟ್ಟು ಬರಿಗಾಲಿನಿಂದ ನಡೆದು ಸುಗ್ಗಲೆಯ ಗರ್ಭಕ್ಕೆ ಕೈಮುಗಿದು ಲೋಕೋತ್ತರ ಮಗನು ಜನಿಸುತ್ತಾನೆ ಎಂದು ನುಡಿದು ನಡೆದರು. ಆ ಮಗುವೇ ಸಿದ್ಧರಾಮೇಶ್ವರ ರೇವಣಸಿದ್ಧರ ವರದಿಂದ ಜನಿಸಿದ್ದ ಮಗುವಿಗೆ ಸಿದ್ಧರಾಮ ಎಂದು ಮರು ನಾಮಕರಣ ಮಾಡಲಾಯಿತು. ಸಿದ್ಧರಾಮರ ಶಿಷ್ಯ ಹಾವಿನಾಳ ಕಲ್ಲಯ್ಯನಿಗೆ ರುದ್ರಮುನಿಗಳು ಲಿಂಗದೀಕ್ಷೆ ನೀಡಿದರು. ರಾಘವಾಂಕ ಕವಿಯ ‘ಸಿದ್ಧರಾಮ ಚರಿತ್ರೆ ’ ಹಾಗೂ ಹರಿಹರನ ಕವಿಯ ‘ ರೇವಣಸಿದ್ಧರ ರಗಳೆ’ ಗಳಲ್ಲಿ ವಿಷಯ ವಿಸ್ತಾರವಾಗಿ ವಿವರಿಸಲಾಗಿದೆ. ರೇವಣಸಿದ್ದರನ್ನು ಕುರಿತು 12ನೇಯ ಶತಮಾನದ ಶಾಸನವೊಂದು ಕಲಬುರ್ಗಿ ತಾಲೂಕಿನಲ್ಲಿ ದೊರೆತಿರುವುದು ರೇವಣರು ಇತಿಹಾಸ ಪುರಷನೆಂದು ಸಾರುತ್ತದೆ.

ವೀರಶೈವ ಲಿಂಗಾಯತ ಅಭಿನ್ನ ಧರ್ಮವೆಂದು ಸಾವಿರಾರು ವರ್ಷಗಳಿಂದ ಸಾರಿ ಸಾಗಿ ಭವ್ಯ ಪರಂಪರೆಯನ್ನು ಮೆರೆದ ಧರ್ಮವನ್ನು ಒಡೆಯುವ ಯತ್ನ ಧರ್ಮಸಮ್ಮತವಲ್ಲ.

(ಲೇಖಕ: ಸಾಹಿತಿ-ಸಂಶೋಧಕರು, ಸಿಂಧನೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT