ಶುಕ್ರವಾರ, ಫೆಬ್ರವರಿ 26, 2021
28 °C
ನಾಳೆಯಿಂದ ಬಿಜೆಪಿ ಸದಸ್ಯತ್ವ ಅಭಿಯಾನ

50 ಲಕ್ಷ ಸದಸ್ಯತ್ವಕ್ಕೆ 5 ಲಕ್ಷ ಕಾರ್ಯಕರ್ತರ ಪಡೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ವಿಜಯಗಳಿಸಿ ಬೀಗುತ್ತಿರುವ ರಾಜ್ಯ ಬಿಜೆಪಿ ಹೊಸದಾಗಿ 50 ಲಕ್ಷ ಸದಸ್ಯತ್ವ ನೋಂದಣಿಗೆ 5 ಲಕ್ಷ ಕಾರ್ಯಕರ್ತರ ಪಡೆ ಶನಿವಾರದಿಂದ ಬೀದಿಗೆ ಇಳಿಯಲಿದೆ.

ಬಿಜೆಪಿ ಸಿದ್ಧಾಂತ, ತತ್ವ ಆದರ್ಶಗಳ ಬಗ್ಗೆ ಒಲವಿರುವ ಎಲ್ಲ ವರ್ಗಗಳನ್ನು ತಲುಪಿ ಸದಸ್ಯತ್ವ ನೋಂದಣಿ ಮಾಡಲು ಸನ್ನದ್ಧವಾಗಿದೆ. ಸುಮಾರು ಒಂದು ತಿಂಗಳ ಕಾಲ ದೇಶ ವ್ಯಾಪಿ ನಡೆಯುವ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ಮೋದಿ ಇದಕ್ಕೆ ಚಾಲನೆ ನೀಡಲಿದ್ದಾರೆ.

 ರಾಜ್ಯದಲ್ಲಿ 50 ಲಕ್ಷ ಸಾಮಾನ್ಯ ಸದಸ್ಯತ್ವ ನೋಂದಣಿ ಜತೆಗೆ 2 ಲಕ್ಷ ಜನರನ್ನು ಸಕ್ರಿಯ ಸದಸ್ಯರನ್ನು ಹೊಂದುವ ಗುರಿಯನ್ನೂ ಬಿಜೆಪಿ ಹಾಕಿಕೊಂಡಿದೆ.

ರಾಜ್ಯ ಸದಸ್ಯತ್ವ ಅಭಿಯಾನದ ಪ್ರಮುಖ್‌ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಪಕ್ಷದ ಸಿದ್ಧಾಂತ ಮತ್ತು ಆದರ್ಶಗಳನ್ನು ಒಪ್ಪಿಕೊಳ್ಳುವವರಿಗೆ ಸದಸ್ಯತ್ವ ನೀಡಲಾಗುವುದು. ಅಪರಾಧ ಚಟುವಟಿಕೆಗಳು, ವಂಚನೆ, ಭಯೋತ್ಪಾದನೆಯಂತಹ ಚಟುವಟಿಕೆಗಳ ಹಿನ್ನೆಲೆ ಇದ್ದವರಿಗೆ ಸದಸ್ಯತ್ವ ನೀಡುವುದಿಲ್ಲ ಎಂದೂ ಅವರು ತಿಳಿಸಿದರು.

ಸದಸ್ಯತ್ವ ಕೋರುವ ವ್ಯಕ್ತಿಗಳ ಹಿನ್ನೆಲೆಯನ್ನು ತಿಳಿದುಕೊಳ್ಳಲು ಪರಿಶೀಲನಾ ಸಮಿತಿ ಇರುತ್ತದೆ. ಮಿಸ್ಡ್‌ ಕಾಲ್‌ ಮೂಲಕ ಸದಸ್ಯತ್ವ ಪಡೆಯಲು ಬಯಸುವವರ ಮಾಹಿತಿಯನ್ನು ಅರ್ಜಿಯಲ್ಲಿ ದಾಖಲಿಸಿಕೊಳ್ಳಲಾಗುವುದು. ಸಕ್ರಿಯ ಸದಸ್ಯರಾಗುವವರಿಗೆ ಪಕ್ಷದಲ್ಲಿ ಜವಾಬ್ದಾರಿ ನೀಡಲಾಗುತ್ತದೆ ಎಂದೂ ರವಿಕುಮಾರ್‌ ತಿಳಿಸಿದರು.

ಯಾರು 25 ಮಂದಿಯನ್ನು ಸದಸ್ಯರನ್ನಾಗಿ ಪಕ್ಷಕ್ಕೆ ಸೇರಿಸುತ್ತಾರೋ ಅವರನ್ನು ಸಕ್ರಿಯ ಸದಸ್ಯರನ್ನಾಗಿ ಮಾಡಲಾಗುವುದು. ಸದಸ್ಯತ್ವ ಪರಿಶೀಲನೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪರಿಶೀಲನಾ ಸಮಿತಿ ಇರುತ್ತದೆ. ಈ ಸಮಿತಿಯು ಸಕ್ರಿಯ ಸದಸ್ಯತ್ವ ನೀಡುವ ತೀರ್ಮಾನ ತೆಗೆದುಕೊಳ್ಳುತ್ತದೆ.  ಸದಸ್ಯತ್ವದ ನೋಂದಣಿ ಬಳಿಕ ಎಂಟರಿಂದ ಹತ್ತು ದಿನಗಳ ಕಾಲ ಪರಿಶೀಲನೆ ನಡೆಸಲಾಗುತ್ತದೆ. ಆಗಸ್ಟ್‌ 11 ರ ಬಳಿಕ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಕೇಂದ್ರಕ್ಕೆ ವರದಿ ಸಲ್ಲಿಸುತ್ತಾರೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಈ ಅಭಿಯಾನವನ್ನು ಶನಿವಾರ ಸಂಜೆ 4 ಗಂಟೆಗೆ ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸುವರು. ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್‌ ಮತ್ತಿತರರು ಭಾಗವಹಿಸುವರು ಎಂದರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.