ಮಂಗಳವಾರ, ಫೆಬ್ರವರಿ 18, 2020
27 °C
ಕಿತ್ತು ಹೋದ ಖಾತೆ ಕೊಟ್ಟರೂ ಕೆಲಸಮಾಡಿ ತೋರಿಸುತ್ತೇನೆ

ಕೊಟ್ರೆ ಸಚಿವ ಸ್ಥಾನ ಕೊಡಿ: ವಿಶ್ವನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಶಾಸಕ ಎಚ್‌.ವಿಶ್ವನಾಥ್‌ ಅವರು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನದ ಪ್ರಸ್ತಾವವನ್ನು ನಿರಾಕರಿಸಿದ್ದು, ‘ಕೊಡುವುದಾದರೆ ಸಚಿವ ಸ್ಥಾನವನ್ನೇ ಕೊಡಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನು ಬುಧವಾರ ವಿಶ್ವನಾಥ್‌ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಪ್ರಸ್ತಾಪಿಸಿದರು. ಆದರೆ, ವಿಶ್ವನಾಥ್‌ ನಿರಾಕರಿಸಿದರು ಎಂದು ಮೂಲಗಳು ತಿಳಿಸಿವೆ.

‘ಹಿಂದೆ ಹಲವು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಈಗ ನಿಗಮ– ಮಂಡಳಿ ಅಧ್ಯಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸಲು ಮನಸ್ಸು ಒಪ್ಪುವುದಿಲ್ಲ’ ಎಂದು ಮುಖ್ಯಮಂತ್ರಿಗೆ ಅವರು ಹೇಳಿದರು.

‘ಸಚಿವ ಸ್ಥಾನ ನೀಡಿದರೆ ಯಾವ ಖಾತೆ ಕೇಳುತ್ತೀರಿ’ ಎಂದು ಯಡಿಯೂರಪ್ಪ ಹಾಸ್ಯವಾಗಿ ಪ್ರಶ್ನಿಸಿದಾಗ, ‘ಯಾವುದೇ ಕಿತ್ತು ಹೋದ ಖಾತೆ ಕೊಟ್ಟರೂ ಅದನ್ನು ಉತ್ತಮವಾಗಿ ಕೆಲಸ ಮಾಡಿ ತೋರಿಸುತ್ತೇನೆ’ ಎಂಬುದಾಗಿ ಉತ್ತರಿಸಿದರು ಎನ್ನಲಾಗಿದೆ.

ನಿಗಮ– ಮಂಡಳಿ ನಿರಾಕರಿಸಿದವರು: ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಮಹೇಶ್‌ ಕುಮಠಳ್ಳಿ ಅವರಿಗೆ ಎಂಎಸ್‌ಐಎಲ್‌ ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ಆ ಹುದ್ದೆ ತಮಗೆ ಬೇಡ ಎಂದು ಅವರು ನಿರಾಕರಿಸಿದ್ದಾರೆ.

ಉಪಚುನಾವಣೆಗೂ ಮೊದಲು ಬಂಡಾಯ ಎದ್ದವರನ್ನು ಶಮನಗೊಳಿಸಲು ನಿಗಮ– ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಯಿತು. ಅವರಲ್ಲಿ ಕೆಲವರು ನಿರಾಕರಿಸಿ ಪಕ್ಷವನ್ನು ತೊರೆದರು. ಹೊಸಕೋಟೆ ಶರತ್‌ ಬಚ್ಚೇಗೌಡ ಅವರಿಗೆ ಕರ್ನಾಟಕ ಗೃಹ ಮಂಡಳಿ, ಗೋಕಾಕದ ಅಶೋಕ್‌ ಪೂಜಾರಿ ಅವರಿಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ರಾಜು ಕಾಗೆ ಅವರಿಗೆ ಮಲಪ್ರಭಾ– ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಯೋಜನೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇವರು ಅಧ್ಯಕ್ಷ ಹುದ್ದೆಯನ್ನು ನಿರಾಕರಿಸಿದ್ದೂ ಅಲ್ಲದೆ ಪಕ್ಷವನ್ನು ತೊರೆದರು. ಎಚ್‌.ಆರ್‌.ಗವಿಯಪ್ಪ ಅವರು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದರು. ಕೆ.ಆರ್‌.ಪುರದ ನಂದೀಶ್‌ ರೆಡ್ಡಿಗೆ ಬಿಎಂಟಿಸಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆರಂಭದಲ್ಲಿ ನಿರಾಕರಿಸಿದರೂ ಬಳಿಕ ಒಪ್ಪಿಕೊಂಡರು.

ಅಧ್ಯಕ್ಷ ಸ್ಥಾನ ಒಪ್ಪಿಕೊಂಡವರು: ಯು.ಬಿ.ಬಣಕಾರ್‌– ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮ, ಬಸನಗೌಡ ತುರವಿಹಾಳ– ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ತುಂಗ ಭದ್ರ ಯೋಜನೆ), ಮಸ್ಕಿ, ವಿ.ಎಸ್‌.ಪಾಟೀಲ– ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ.

ಖಾತೆ ಬದಲಿಗೆ ಸುಧಾಕರ್‌ ಯತ್ನ

ರಾತ್ರೋರಾತ್ರಿ ಹಲವು ಸಚಿವರಿಗೆ ಖಾತೆ ಮರು ಹಂಚಿಕೆ ಮಾಡಿದ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಖಾತೆ ಬದಲಾವಣೆಗೆ ಪ್ರಯತ್ನ ಮುಂದುವರಿಸಿದ್ದಾರೆ. ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು