ಶುಕ್ರವಾರ, ನವೆಂಬರ್ 22, 2019
27 °C

‘ಬಿಎಸ್‌ವೈ ಮಹಾರಾಷ್ಟ್ರ ಮುಖ್ಯಮಂತ್ರಿಯೆ?’

Published:
Updated:

ಬೆಂಗಳೂರು: ಮಹಾರಾಷ್ಟ್ರಕ್ಕೆ ನೀರು ಕೊಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಧ್ವನಿಗೂಡಿಸಿದ್ದಾರೆ.

‌‘ಮಹಾರಾಷ್ಟ್ರಕ್ಕೆ ನೀರು ಕೊಡಲು ಎಲ್ಲಿಂದ ತರುತ್ತಾರೆ? ಮೊದಲು ರಾಜ್ಯದ ಹಿತ ಕಾಪಾಡಲಿ’ ಎಂದು ದೇವೇಗೌಡ ಆಗ್ರಹಿಸಿದರು.

‘ಕೃಷ್ಣಾ ನದಿಯಿಂದ ನಮಗೆ ಬರಬೇಕಾದ ನೀರನ್ನು ಅವರು ಬಿಟ್ಟುಕೊಡುತ್ತಾರಾ? ಯಾವುದೇ ಕಾರಣಕ್ಕೂ ನೀರು ಕೊಡಲು ಸಾಧ್ಯವಿಲ್ಲ. ಮಹದಾಯಿ ನೀರೇ ರಾಜ್ಯಕ್ಕೆ ಇನ್ನೂ ಸಿಕ್ಕಿಲ್ಲ. ರಾಜ್ಯದ ಜನರು ಅಧಿಕಾರ ಕೊಟ್ಟಿರುವುದು ನಮ್ಮ ರಾಜ್ಯದ ಜನರ ಹಿತ ಕಾಯುವುದಕ್ಕೆ ಹೊರತು ಮಹಾರಾಷ್ಟ್ರ ಜನರ ಪರ ಕೆಲಸ ಮಾಡುವುದಕ್ಕಲ್ಲ’ ಎಂದು ಟೀಕಿಸಿದರು.

ಕಾಂಗ್ರೆಸ್:‘ಯಡಿಯೂರಪ್ಪ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಂತೆ ವರ್ತಿಸಿದ್ದಾರೆ. ಇವರು ಯಾವ ರಾಜ್ಯಕ್ಕೆ ಮುಖ್ಯಮಂತ್ರಿ’ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಪ್ರಶ್ನಿಸಿದರು.

‘ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ನೀರು ಹರಿಸುವ ಹೇಳಿಕೆ ನೀಡಿದ್ದಾರೆ. ಆ ರಾಜ್ಯದ ಬಿಜೆಪಿ ಅಧ್ಯಕ್ಷ ಹಾಗೂ ಅಲ್ಲಿನ ಮುಖ್ಯಮಂತ್ರಿಯಂತೆ ನಡೆದುಕೊಂಡಿದ್ದಾರೆ. ಹಾಗಾಗಿ ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮಹಾರಾಷ್ಟ್ರ, ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೂ ಮಹದಾಯಿ ನೀರಿನ ವಿವಾದ ಬಗೆಹರಿಸಲು ಸಾಧ್ಯವಾಗಲಿಲ್ಲ. ಈ ವಿಚಾರವನ್ನು ಜೀವಂತವಾಗಿ ಇಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ದೇಶದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹಿನ್ನಡೆ ಕಾಣುತ್ತಿದ್ದರೂ ಚೇತರಿಕೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅವರೇ ನೇಮಿಸಿಕೊಂಡ ಆರ್ಥಿಕ ತಜ್ಞರು ನೀಡಿದ ಸಲಹೆಗಳನ್ನೂ ಕೇಳುತ್ತಿಲ್ಲ. ಕೇಂದ್ರದಲ್ಲಿ ಬಿಜೆಪಿ ಆಡಳಿತ ಮುಂದುವರಿಸಿಕೊಂಡು ಹೋಗುವುದು ಹಾಗೂ ಇತರ ರಾಜ್ಯಗಳಿಗೂ ಪಕ್ಷದ ಆಡಳಿತ ವಿಸ್ತರಿಸುವ ಕಾರ್ಯಸೂಚಿ ಮೇಲೆ ಮೋದಿ ಆಡಳಿತ ನಡೆಸುತ್ತಿದ್ದಾರೆ. ಇದರಿಂದಾಗಿ ಆರ್ಥಿಕ ಸ್ಥಿತಿ ಕುಸಿಯುತ್ತಲೇ ಸಾಗಿದೆ ಎಂದು ಆರೋಪಿಸಿದರು.

‘ರಾಷ್ಟ್ರದಲ್ಲಿ ಹಸಿವಿನ ಪ್ರಮಾಣ ತೀವ್ರವಾಗಿದ್ದು, ಪಾಕಿಸ್ತಾನಕ್ಕಿಂತ ಹಿಂದೆ ಇದ್ದೇವೆ. ಕಾಂಗ್ರೆಸ್ ಗುರಿ ಮಾಡಿಕೊಂಡು ಟೀಕಿಸುವುದು, ಇಲ್ಲವೆ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರನ್ನು ಮರುಳು ಮಾಡಲಾಗುತ್ತಿದೆ. ಸರ್ಕಾರದ ಆದ್ಯತೆ ಏನೆಂಬುದೇ ಗೊತ್ತಾಗುತ್ತಿಲ್ಲ’ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)