ಶುಕ್ರವಾರ, ಮಾರ್ಚ್ 5, 2021
30 °C

ಶಾಸಕರನ್ನು ‘ಏರ್‌ಲಿಫ್ಟ್‌’ ಮಾಡಿಸಿದ ಸಂತೋಷ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅತೃಪ್ತರನ್ನು ವಿಮಾನದ ಮೂಲಕ ಮುಂಬೈಗೆ ಕಳುಹಿಸುವಲ್ಲಿ ಬಿ.ಎಸ್‌.ಯಡಿಯೂರಪ್ಪ ಆಪ್ತ ಸಹಾಯಕ ಎನ್‌.ಆರ್‌. ಸಂತೋಷ್‌ ಮಹತ್ವದ ಪಾತ್ರವಹಿಸಿದ್ದಾರೆ.

ಶನಿವಾರ 13 ಶಾಸಕರನ್ನು ಮುಂಬೈಗೆ ಕಳಿಸಿದ್ದ ಸಂತೋಷ್‌, ಸೋಮವಾರ ಪಕ್ಷೇತರ ಶಾಸಕರಾದ ಎಚ್‌.ನಾಗೇಶ್‌ ಮತ್ತು ಆರ್‌. ಶಂಕರ್‌ ಅವರನ್ನು ವಿಮಾನದ ಮೂಲಕ ಮುಂಬೈಗೆ ಕಳಿಸಿದರು.

ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದ ಶಂಕರ್‌ ಅವರನ್ನು ಸಂಜೆ ಮುಂಬೈಗೆ ವಿಮಾನ ಹತ್ತಿಸುವುದಕ್ಕೆ ಮೊದಲು ಸಂತೋಷ್‌ ಅವರು ಶಂಕರ್‌ ಜತೆ ಲಾಂಜ್‌ನಲ್ಲಿ ಮಾತನಾಡತ್ತಾ ಕುಳಿತಿದ್ದರು. ಅದೇ ಸಮಯಕ್ಕೆ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ದೆಹಲಿಗೆ ಹೋಗುವ ಸಲುವಾಗಿ ವಿಮಾನ ನಿಲ್ದಾಣಕ್ಕೆ ಬಂದಾಗ ಇಬ್ಬರನ್ನೂ ನೋಡಿ, ‘ಏ ಶಂಕರ್‌ ಯಾಕಪ್ಪ ಇಲ್ಲಿ ಕೂತಿದ್ದೀಯ ನಡಿ’ ಎಂದರು. ಅದಕ್ಕೆ ಸಂತೋಷ್‌ ‘ಯಾಕಣ್ಣ ನಮಗೆ ಅಡ್ಡಿ ಮಾಡ್ತೀರಾ’ ಎಂದು ಹೇಳಿದರು. ‘ನಮ್ಮ ಪಕ್ಷದ ಜತೆ ಇರುವ ಶಾಸಕರನ್ನು ಉಳಿಸಿಕೊಳ್ಳೋದು ನಮ್ಮ ಕೆಲಸ’ ಎಂದು ಶಿವಕುಮಾರ್‌ ಪ್ರತಿಕ್ರಿಯೆ ನೀಡಿದರು.

‘ಬೆಳಿಗ್ಗೆ ನೀವು ನಾಗೇಶ್‌ ಅವರನ್ನು ಕಿಡ್ನಾಪ್‌ ಮಾಡಿದ್ದೀವೆ ಎಂದು ಹೇಳಿಕೊಟ್ಟಿದ್ದೀರಿ. ನಾವು ಆ ರೀತಿ ಮಾಡಿಲ್ಲ. ಅವರಾಗಿಯೇ ಬಂದಿದ್ದು. ಮುಂಬೈಗೆ ಕಳಿಸುವ ವ್ಯವಸ್ಥೆ ಮಾಡಿದೆವು ಅಷ್ಟೇ’ ಎಂದು ಸಂತೋಷ್‌ ಹೇಳಿದರು. ವಿಮಾನಕ್ಕೆ ವಿಳಂಬವಾಗುತ್ತಿದ್ದ ಕಾರಣ ಡಿ.ಕೆ.ಶಿವಕುಮಾರ್‌ ಅಲ್ಲಿಂದ ತೆರಳಿದರು ಎಂದು ಮೂಲಗಳು ಹೇಳಿವೆ.

ಜೆಡಿಎಸ್ ಶಾಸಕರಿಗೆ ಕ್ಲಬ್‌ ವಾಸ್ತವ್ಯ

ಬಿಜೆಪಿ ಬಲೆಗೆ ಬೀಳುವುದನ್ನು ತಪ್ಪಿಸಲು ಜೆಡಿಎಸ್‌ ತನ್ನ ಶಾಸಕರನ್ನು ದೇವನಹಳ್ಳಿ ತಾಲ್ಲೂಕಿನಲ್ಲಿರುವ ಪ್ರೆಸ್ಟೀಜ್‌ ಗಾಲ್ಫ್‌ ಶೈರ್ ಕ್ಲಬ್‌ನಲ್ಲಿ ಇರಿಸಿದೆ.

ಆರಂಭದಲ್ಲಿ ಕೊಡಗು ಜಿಲ್ಲೆಗೆ ಶಾಸಕರನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಪ್ಲಾನ್‌ ಬದಲಿಸಿ, ಬೆಂಗಳೂರಿಗೆ ಸಮೀಪದಲ್ಲೇ ಶಾಸಕರನ್ನು ಇರಿಸಲು ತೀರ್ಮಾನಿಸಲಾಯಿತು.

ಕ್ಲಬ್‌ನಲ್ಲಿ 38 ಕೊಠಡಿಗಳನ್ನು ಬುಕ್‌ ಮಾಡಲಾಗಿದೆ. ಒಟ್ಟು ಎಷ್ಟು ಶಾಸಕರು ಇದ್ದಾರೆ ಎಂಬ ಮಾಹಿತಿ ಸಿಗದಂತೆ ಗೋಪ್ಯತೆ ಕಾಪಾಡಲಾಗಿದೆ. ಇದರ ಉಸ್ತುವಾರಿಯನ್ನು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ವಹಿಸಿಕೊಂಡಿದ್ದಾರೆ. ಶಾಸಕರು ಇರುವ ಕ್ಲಬ್‌ಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಬಿಜೆಪಿ ಸೇರುವೆ: ರೋಷನ್ ಬೇಗ್

ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಶಿವಾಜಿನಗರ ಶಾಸಕ ರೋಷನ್‌ಬೇಗ್ ಬಿಜೆಪಿ ಸೇರುವುದಾಗಿ ತಿಳಿಸಿದ್ದಾರೆ.

‘ಶಾಸಕ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡುತ್ತಿದ್ದು, ನಂತರ ಬಿಜೆಪಿ ಸೇರುತ್ತೇನೆ. ಕಾಂಗ್ರೆಸ್ ಪಕ್ಷ ನಡೆಸಿಕೊಂಡ ರೀತಿಯಿಂದಾಗಿ ನೋವಾಗಿದ್ದು, ಪಕ್ಷ ತೊರೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರನ್ನು ನಿರ್ಲಕ್ಷ್ಯಿಸಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಪ್ರಮುಖ ಕಾರಣ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಇಂದು ಕಾಂಗ್ರೆಸ್‌– ಬಿಜೆಪಿ ಪ್ರತಿಭಟನೆ

ಹದಿಮೂರು ಶಾಸಕರು ರಾಜೀನಾಮೆ ನೀಡಿದ ಬಳಿಕ ನಡೆದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಜಿಲ್ಲಾ ಕೇಂದ್ರಗಳಲ್ಲಿ  ಮಂಗಳವಾರ ಪ್ರತ್ಯೇಕ ಪ್ರತಿಭಟನೆ ಹಮ್ಮಿಕೊಂಡಿವೆ.

ರಾಜ್ಯದಲ್ಲಿ ‘ಮೈತ್ರಿ’ ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸಲಿದೆ.

‘ಆಪರೇಷನ್‌ ಕಮಲ’ದ ಹೆಸರಿನಲ್ಲಿ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಪ್ರತಿಭಟನೆಗೆ ಕರೆ ನೀಡಿದೆ.

ಸೋಮವಾರ ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಆ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದರು. 

‘ಮೈತ್ರಿ’ ಪಕ್ಷ ಬಹುಮತ ಕಳೆದುಕೊಂಡಿದೆ. ಆದರೂ ಕುಮಾರಸ್ವಾಮಿ ಅಧಿಕಾರಕ್ಕೆ ಅಂಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಮುಖ್ಯಮಂತ್ರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಅವರು ತಿಳಿಸಿದರು.

ಮುಂಬೈನಿಂದ ಗೋವಾಕ್ಕೆ ಶಿಫ್ಟ್‌?

ಮುಂಬೈ (ಪಿಟಿಐ): ಇಲ್ಲಿನ ಸೋಫಿಟೆಲ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್‌–ಜೆಡಿಎಸ್‌ನ ಶಾಸಕರು ಗೋವಾಕ್ಕೆ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಲಾಗಿದೆ. ಶಾಸಕರ ಜತೆಗೆ ಮಹಾರಾಷ್ಟ್ರ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಮೋಹಿತ್‌ ಭಾರತೀಯ ಅವರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ. 

ಇಲ್ಲಿ ಇದ್ದ ಎಲ್ಲ ಶಾಸಕರು ಗೋವಾಕ್ಕೆ ಹೋಗಿದ್ದಾರೆ ಎಂದು ಮಹಾರಾಷ್ಟ್ರದ ಶಾಸಕ ಪ್ರಸಾದ್‌ ಲಾಡ್‌ ಕೂಡ ಹೇಳಿದ್ದಾರೆ. 
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ಲಾಡ್‌ ಆಪ್ತರಾಗಿದ್ದಾರೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು