‘ಆಪರೇಷನ್ ಆಡಿಯೊ’ ಗದ್ದಲ ಮುಂದುವರಿದರೆ ಬಜೆಟ್ ಅಧಿವೇಶನ ಬುಧವಾರವೇ ಕೊನೆ?

ಬೆಂಗಳೂರು: ‘ಆಪರೇಷನ್ ಆಡಿಯೊ’ ಗದ್ದಲ ಮುಂದುವರಿದರೆ ಬಜೆಟ್ ಅಧಿವೇಶನ ಬುಧವಾರವೇ (ಫೆ.13) ಕೊನೆಯಾಗುವ ಸಾಧ್ಯತೆ ಇದೆ.
ಪೂರ್ವ ನಿಗದಿಯಂತೆ ಇದೇ 15ರವರೆಗೆ ಅಧಿವೇಶನ ನಡೆಯಬೇಕಿತ್ತು. ಜುಲೈವರೆಗೆ ಲೇಖಾನುದಾನ ಪಡೆದುಕೊಳ್ಳುವ ಧನ ವಿನಿಯೋಗ ಮಸೂದೆಗಳಿಗೆ ಕೊನೆಯ ದಿನ ಅನುಮೋದನೆ ಪಡೆಯುವುದು ರೂಢಿ. ಅದಕ್ಕೆ ಮುನ್ನ, ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸದನದಲ್ಲಿ ಉತ್ತರ ಕೊಡುವ ಪರಿಪಾಠವೂ ಇದೆ.
ವಿಧಾನಸಭೆಯ ಬುಧವಾರದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಎಲ್ಲ ಮಸೂದೆಗಳ ಮಂಡನೆ–ಅನುಮೋದನೆ, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸರ್ಕಾರದ ಉತ್ತರ ಎಂಬ ವಿಷಯಗಳಿವೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಧನವಿನಿಯೋಗ ಮಸೂದೆಗಳನ್ನು ಮಂಡಿಸಿ, ಅನುಮೋದನೆ ಪಡೆಯುವರು ಎಂಬ ವಿಷಯವೂ ಸೇರಿದೆ.
ಎಸ್ಐಟಿ ರಚನೆಗೆ ಸರ್ಕಾರ ಪಟ್ಟು ಹಿಡಿಯಲಿದ್ದು, ಅದನ್ನು ವಿರೋಧಿಸುತ್ತಿರುವ ಬಿಜೆಪಿ ಕಲಾಪಕ್ಕೆ ಅಡ್ಡಿ ಪಡಿಸಿದರೆ ಎರಡು ದಿನ ಮೊದಲೇ ಅಧಿವೇಶನ ಮುಗಿಸುವುದು ಸರ್ಕಾರದ ಚಿಂತನೆ ಎಂದು ಮೂಲಗಳು ಹೇಳಿವೆ.
ಫೆ.6ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದರು. 8ರಂದು ಬಜೆಟ್ ಮಂಡನೆಯಾಗಿತ್ತು. ಅಷ್ಟರಲ್ಲಿ, ‘ಆಪರೇಷನ್ ಆಡಿಯೊ’ ಬಯಲಾಗಿತ್ತು. ಎಸ್ಐಟಿ ರಚನೆಯ ಪರ–ವಿರೋಧದ ಗಲಾಟೆಯಿಂದ ಸುಗಮ ಕಲಾಪ ನಡೆದಿಲ್ಲ. ರಾಜ್ಯಪಾಲರ ಭಾಷಣ ಮತ್ತು ಬಜೆಟ್ ಕುರಿತು ಚರ್ಚೆಯೂ ಆಗಿಲ್ಲ.ಹೀಗಾಗಿ, ಸರ್ಕಾರ ಉತ್ತರ ಕೊಡುವ ಪ್ರಮೇಯವೂ ಇಲ್ಲ ಎನ್ನಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.