ಬಜೆಟ್‌ ರಗಳೆ: ಸದನದಲ್ಲಿ ಕಹಳೆ?

7
ಬಿಜೆಪಿ ತಂತ್ರಕ್ಕೆ ಜೆಡಿಎಸ್‌ ಪ್ರತಿತಂತ್ರ–ಗೊಂದಲದಲ್ಲಿ ಕಾಂಗ್ರೆಸ್‌

ಬಜೆಟ್‌ ರಗಳೆ: ಸದನದಲ್ಲಿ ಕಹಳೆ?

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ಗೆ ದೋಸ್ತಿಗಳಿಂದಲೇ ಅಸಮಾಧಾನ ವ್ಯಕ್ತವಾಗಿರುವ ಬೆನ್ನಹಿಂದೆಯೇ ಸದನದಲ್ಲಿ ಸರ್ಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷವಾದ ಬಿಜೆಪಿ ರಣತಂತ್ರ ರೂಪಿಸುತ್ತಿದೆ.

ಕಾಂಗ್ರೆಸ್‌ ಸದಸ್ಯರು ಕೈಕಟ್ಟಿ ಕುಳಿತರೆ ಮುಖ್ಯಮಂತ್ರಿಯನ್ನು ಏಕಾಂಗಿಯಾಗಿ ಸಮರ್ಥನೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿರುವ ಜೆಡಿಎಸ್‌ ಸಹ ಅದಕ್ಕಾಗಿ ಪ್ರತಿತಂತ್ರ ಹೆಣೆಯುತ್ತಿದೆ. ಬಿಜೆಪಿಯನ್ನು ಗಟ್ಟಿಧ್ವನಿಯಲ್ಲೇ ವಿರೋಧಿಸಲು ಅದು ಸಜ್ಜಾಗುತ್ತಿದೆ. ಹೀಗಾಗಿ ‘ಅಪೂರ್ಣ ಸಾಲಮನ್ನಾ, ಪ್ರಾದೇಶಿಕ ಅಸಮತೋಲನ’ದ ವಿಷಯಗಳ ಜತೆಯಲ್ಲೇ ಪೆಟ್ರೋಲ್‌–ಡೀಸೆಲ್‌ ಸಹ ಸದನದಲ್ಲಿ ಕಿಡಿ ಹಚ್ಚುವುದು ಖಚಿತವಾಗಿದೆ.

ಈ ಮಧ್ಯೆ ಬಜೆಟ್‌ ಕುರಿತಂತೆ ಕಾಂಗ್ರೆಸ್‌ ನಾಯಕರ ಅಸಮಾಧಾನ ಭಾನುವಾರವೂ ಮುಂದುವರಿದಿದೆ. ‘ಸಾಲಮನ್ನಾದಿಂದ ಪಕ್ಷಕ್ಕೆ ಏನು ಉಪಯೋಗ? ಅದರ ಖ್ಯಾತಿ ಸಂಪೂರ್ಣವಾಗಿ ಜೆಡಿಎಸ್‌ಗೆ ಹೋಗಿದೆ. ಇಂಧನ ಬೆಲೆ ಏರಿಕೆಯ ಕುಖ್ಯಾತಿಯಲ್ಲಿ ಮಾತ್ರ ನಾವೂ ಪಾಲುದಾರರಾಗಬೇಕಿದೆ’ ಎಂದು ಹಲವು ಮುಖಂಡರು ಕೆಪಿಸಿಸಿ ನಿಯೋಜಿತ ಅಧ್ಯಕ್ಷರ ಮುಂದೆ ಆಕ್ರೋಶ ಹೊರಹಾಕಿದ್ದಾರೆ.

ಬುಧವಾರ ನಡೆಯಲಿರುವ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ಸಿದ್ಧತೆಗಾಗಿ ಭಾನುವಾರ ಸಭೆ ಸೇರಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಬಜೆಟ್‌ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕೆಲವೇ ಜಿಲ್ಲೆಗಳಿಗೆ ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ತಾರತಮ್ಯ ಮಾಡಿದ್ದಾರೆ. ಅಲ್ಲದೆ, ವಿರೋಧಿಗಳ ಕೈಗೆ ತಾವೇ ಮುಂದಾಗಿ ದೊಣ್ಣೆ ಕೊಟ್ಟಿದ್ದಾರೆ’ ಎಂದೂ ದೂರಿದ್ದಾರೆ.

ಬಿಜೆಪಿ ತಂತ್ರ: ‘ಅಧಿವೇಶನದಲ್ಲಿ ಧರಣಿ ನಡೆಸಿ, ಸಮಯವನ್ನು ವ್ಯರ್ಥಗೊಳಿಸುವ ಬದಲು ಚರ್ಚೆಯಲ್ಲಿ ಪಾಲ್ಗೊಂಡು ಬಜೆಟ್‌ನ ಲೋಪಗಳನ್ನು ಎತ್ತಿ ತೋರುವ ಮೂಲಕ ಮುಖ್ಯಮಂತ್ರಿಗೆ ನೀರಿಳಿಸುವುದೇ ಸೂಕ್ತ’ ಎಂಬ ನಿಲುವು ಬಿಜೆಪಿ ನಾಯಕರದು. ಹೀಗಾಗಿ ಸರ್ಕಾರದ ಮೇಲೆ ಮುಗಿಬೀಳಲು ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಶಾಸಕರಿಗೆ ಅವರು ಹಸಿರು ನಿಶಾನೆ ತೋರಿದ್ದಾರೆ.

‘ನಾವು ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇವೆ. ಬಜೆಟ್‌ನಲ್ಲಿ ಆಗಿರುವ ಅನ್ಯಾಯದ ಕುರಿತು ಜನರ ಗಮನವನ್ನೂ ಸೆಳೆಯಲಿದ್ದೇವೆ. ಮುಂದಿನ ಹೋರಾಟದ ಸ್ವರೂಪವನ್ನು ಸೋಮವಾರ ನಡೆಯಲಿರುವ ಶಾಸಕರ ಸಭೆಯಲ್ಲಿ ನಿರ್ಧರಿಸಲಿದ್ದೇವೆ’ ಎಂದು ವಿರೋಧಪಕ್ಷದ ಮುಖ್ಯ ಸಚೇತಕ ವಿ.ಸುನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಲ್ಲದ ಅಸಮಾಧಾನ: ‘ಪೆಟ್ರೋಲ್‌ ಮತ್ತು ಡೀಸೆಲ್‌ ದರ ನಿಯಂತ್ರಣ ಮಾಡದ ಮೋದಿ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದ ನಾವು ಈಗ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆಗೆ ಸಂಪನ್ಮೂಲವನ್ನು ಕ್ರೋಡೀಕರಿಸಲು ಅವುಗಳ ಮೇಲಿನ ತೆರಿಗೆ ಹೆಚ್ಚಿಸಿದ್ದನ್ನು ಹೇಗೆ ಸಮರ್ಥನೆ ಮಾಡಿಕೊಳ್ಳುವುದು’ ಎನ್ನುವುದು ಕಾಂಗ್ರೆಸ್‌ನ ಹಲವು ಶಾಸಕರ ಪ್ರಶ್ನೆ.

ವರಿಷ್ಠರಿಗೆ ವಿವರಣೆ
ದೆಹಲಿಗೆ ತೆರಳಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಮ್ಮಿಶ್ರ ಸರ್ಕಾರದ ಬಜೆಟ್‌ ಹಾಗೂ ಅದರ ಮಂಡನೆ ನಂತರ ರಾಜ್ಯದಲ್ಲಿ ನಡೆದಿರುವ ಬೆಳವಣಿಗೆಗಳ ಕುರಿತು ಪಕ್ಷದ ವರಿಷ್ಠರ ಜತೆ ಚರ್ಚಿಸಿದ್ದಾರೆ. ಬಜೆಟ್‌ಗೆ ಸಂಬಂಧಿಸಿದಂತೆ ಕೆ.ಸಿ.ವೇಣುಗೋಪಾಲ್‌ ಅವರು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !