ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರು ಕಟ್ಟಲು 330 ಸ್ವಯಂಸೇವಕರು

ಕೊಳಂಬೆಗೆ ಹೊಸಬೆಳಕು ನೀಡಲು ಮುಂದಾದ ಉದ್ಯಮಿಗಳು
Last Updated 15 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಳ್ತಂಗಡಿ: ತಾಲ್ಲೂಕಿನ ಪ್ರವಾಹ ಸಂತ್ರಸ್ತರ ನೆರವಿಗೆ ಉಜಿರೆಯ ಉದ್ಯಮಿಗಳ ತಂಡವೊಂದು ಹೆಜ್ಜೆ ಇಟ್ಟಿದೆ.

ಉಜಿರೆಯ ಉದ್ಯಮಿಗಳಾದ ಮೋಹನ್ ಕುಮಾರ್, ರಾಜೇಶ್ ಪೈ ಸಹಿತ 40 ಉದ್ಯಮಿಗಳ ತಂಡವು ಹಾನಿಗೀಡಾದ ಕೊಳಂಬೆ ವ್ಯಾಪ್ತಿಯಲ್ಲಿ ಪುನರ್ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿದೆ.

ಚಾರ್ಮಾಡಿ ಗ್ರಾಮದ ಕೊಳಂಬೆ ಪ್ರದೇಶದಲ್ಲಿ ಮೃತ್ಯುಂಜಯ ಹೊಳೆಯ ಅಬ್ಬರಕ್ಕೆ 20ಕ್ಕೂ ಹೆಚ್ಚು ಮನೆಗಳು ಹಾಗೂ 40 ಎಕರೆಗೂ ಅಧಿಕ ಅಡಿಕೆ, ತೆಂಗು, ಬಾಳೆ ತೋಟ, ಭತ್ತದ ಗದ್ದೆ ಹಾನಿಯಾಗಿದೆ. ಎಲ್ಲೆಡೆ ಹೊಳೆಯ ಮರಳು, ಹೂಳು ತುಂಬಿದೆ. ಬಹುತೇಕ ಮನೆಗಳ ಒಳಗೆ ಎರಡರಿಂದ ಮೂರಡಿ ಮರಳು–ಕೆಸರು ತುಂಬಿದೆ. ಇವೆಲ್ಲವನ್ನು ಯಥಾಸ್ಥಿತಿಗೆ ತರಲು ಉದ್ಯಮಿಗಳ ತಂಡ ಕೈಜೋಡಿಸಿದೆ.

ಉಜಿರೆ ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್, ವಿಶ್ವ ಹಿಂದೂ ಪರಿಷತ್ ಘಟಕ, ಭಜರಂಗದಳ ಘಟಕ, ಸಂಗಮ ಯುವಕ ಮಂಡಲ,ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ವೀರಕೇಸರಿ ಕಲ್ಮಂಜ, ನಿಡಿಗಲ್‌ನ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಕೈ ಜೋಡಿಸಿವೆ. ಲಕ್ಷ್ಮೀ ಗ್ರೂಪ್‍ನ 175 ಮಂದಿ ಸಹಿತಿ 300 ಯುವಕರು ಪ್ರತಿ ಭಾನುವಾರ ಇಲ್ಲಿ ಶ್ರಮದಾನ ಮಾಡಲಿದ್ದಾರೆ.

ವಿದ್ಯುತ್ ಉಪಕರಣ, ಮನೆ ಸಾಮಗ್ರಿ, ಅಡುಗೆ ಪರಿಕರ, ಮನೆ ನಿರ್ಮಾಣ, ಗ್ಯಾಸ್, ಅಕ್ಕಿ, ಬಟ್ಟೆ, ರಸ್ತೆ ಸೇರಿದಂತೆ ಮೂಲಸೌಕರ್ಯ ನೀಡಲು ತಂಡ ಸಿದ್ಧವಾಗಿದೆ.

‘ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಬೆನ್ನು ತಟ್ಟಿದ್ದಾರೆ. ಡಿ.ಎಂ.ಸಿ. ಕನ್‌ಸ್ಟ್ರಕ್ಷನ್‌ನಿಂದ ಯಂತ್ರೋಪಕರಣದ ನೆರವಿನ ಭರವಸೆ ಸಿಕ್ಕಿದೆ. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಡಾ.ಬಿ.ಯಶೋವರ್ಮ ಹಾಗೂ ಶಾಸಕ ಹರೀಶ್ ಪೂಂಜಾಮಾರ್ಗದರ್ಶನ ಹಾಗೂ ಸಹಕಾರ ಒದಗಿಸಿದ್ದಾರೆ’ ಎಂದು ರಾಜೇಶ್ ಪೈ ತಿಳಿಸಿದ್ದಾರೆ.

ಮರು ನಿರ್ಮಾಣ ಮಾಡಿಯೇ ಸಿದ್ಧ

‘ಸೇವೆಯೆಂಬುದು ಪ್ರಚಾರವಾಗಬಾರದು. ಮತ್ತೊಬ್ಬರು ಅನುಕರಿಸುವಂತಾಗಬೇಕು. ಉದ್ಯಮಿ ಮಿತ್ರರು, ಸಂಘ ಸಂಸ್ಥೆಗಳನ್ನು ಜತೆಗೂಡಿಸಿ ಊರು ಮರು ನಿರ್ಮಾಣ ಮಾಡಿಯೇ ಸಿದ್ಧ. ನಿರಾಶ್ರಿತರಿಗೆ ಆರಂಭದಲ್ಲಿ ಮೂಲಸೌಕರ್ಯ ಒದಗಿಸಿ ಪ್ರತಿ ಹಂತದಲ್ಲೂ ಜತೆಯಾಗಿರುವ ಸಂಕಲ್ಪ ತೊಟ್ಟಿದ್ದೇವೆ’ ಎನ್ನುತ್ತಾರೆಉಜಿರೆ ಸಂಧ್ಯಾ ಟ್ರೇಡರ್ಸ್‌ನ ರಾಜೇಶ್ ಪೈ.

***

ಮನುಷ್ಯತ್ವದಿಂದ ನಾವು ಬದುಕಿನ ಅಸ್ತಿತ್ವ ಕಂಡುಕೊಳ್ಳಬೇಕಾಗಿದೆ. ಮತ್ತೆ ಊರು ಮರುಸೃಷ್ಟಿಯು ಸವಾಲಾಗಿದ್ದರೂ, ಸಂತ್ರಸ್ತರನ್ನು ಆರ್ಥಿಕ ಸದೃಢರಾಗಿಸುವ ಛಲ ನಮ್ಮದು

–ಮೋಹನ್ ಕುಮಾರ್ ,ಲಕ್ಷ್ಮೀ ಗ್ರೂಪ್‍

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT