ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಯೊ ಸುತ್ತ ಕೆಸರೆರಚಾಟ: ಸಂಪುಟ ತೊಳಲಾಟ

Last Updated 4 ಡಿಸೆಂಬರ್ 2018, 20:21 IST
ಅಕ್ಷರ ಗಾತ್ರ

ಬೆಂಗಳೂರು: ‘ಆಪರೇಷನ್ ಕಮಲ’ದ ಗುಮ್ಮ ಸಮ್ಮಿಶ್ರ ಸರ್ಕಾರವನ್ನು ಕಾಡುತ್ತಿದ್ದು, ಸಂಪುಟ ವಿಸ್ತರಣೆ ಮತ್ತಷ್ಟು ಕಗ್ಗಂಟಾಗಿದೆ.

ಡಿಸೆಂಬರ್‌ ಅಂತ್ಯದೊಳಗೆ ಸರ್ಕಾರ ರಚನೆ ಮಾಡಲೇಬೇಕು ಎಂಬ ಉಮೇದಿನಲ್ಲಿರುವ ಬಿಜೆಪಿ ನಾಯಕರು ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಯತ್ನವನ್ನು ಕೈಬಿಟ್ಟಿಲ್ಲ. ಕಮಲದತ್ತ ಮುಖ ಮಾಡಿರುವ ಕೆಲವು ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಂಪುಟ ವಿಸ್ತರಣೆಯ ಸಾಹಸಕ್ಕೆ ಕೈ ಹಾಕಲೇಬೇಕಾದ ಅನಿವಾರ್ಯದಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಒಂದು ವೇಳೆ ವಿಸ್ತರಣೆ ಮಾಡಿದರೆ ಸಚಿವ ಸ್ಥಾನ ಸಿಗದೇ ಇದ್ದವರು ಬಿಜೆಪಿ ಕಡೆ ಹೋಗಬಹುದು ಎಂಬ ಆತಂಕವೂ ಕೈ ಮುಖಂಡರನ್ನು ಕಾಡುತ್ತಿದೆ.

ಬಿಜೆಪಿ ಶಾಸಕ ಶ್ರೀರಾಮುಲು ಅವರ ಆಪ್ತ ಸಹಾಯಕ ಮಂಜುನಾಥ ಅವರು ದುಬೈ ಉದ್ಯಮಿಯೊಬ್ಬರ ಜತೆ ಆಪರೇಷನ್ ಕಮಲದ ಬಗ್ಗೆ ಮಾತನಾಡಿದ್ದಾರೆನ್ನಲಾದ ಆಡಿಯೊ ಮಿತ್ರಪಕ್ಷಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ‘ಬಿಜೆಪಿಯವರ ಮೇಲೆ ಆಪಾದನೆ ಹೊರಿಸಲು ಸರ್ಕಾರ ನಡೆಸುವವರು ಸುಳ್ಳು ಆಡಿಯೊ ಬಿಡುಗಡೆ ಮಾಡಿದ್ದಾರೆ’ ಎಂದು ಕಮಲ ಪಕ್ಷದ ನಾಯಕರು ಟೀಕಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಆಡಳಿತ ಪಕ್ಷದ ನಾಯಕರು, ಬಿಜೆಪಿಯವರು ರಹಸ್ಯ ಕಾರ್ಯಾಚರಣೆ ನಡೆಸುತ್ತಿರುವುದು ತಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

ನಾಯಕರ ಸಭೆ: ಬಿಜೆಪಿಯವರು ನಡೆಸುತ್ತಿದ್ದಾರೆ ಎನ್ನಲಾದ ‘ರಣ ತಂತ್ರ’ವನ್ನು ವಿಫಲಗೊಳಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್‌ ಅವರು, ಕಾಂಗ್ರೆಸ್ ನಾಯಕರ ಸಭೆಯನ್ನು ಬುಧವಾರ ಕರೆದಿದ್ದಾರೆ. ಸಿದ್ದರಾಮಯ್ಯ, ಪರಮೇಶ್ವರ, ದಿನೇಶ್ ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ. ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್ ಸೇರಿದಂತೆ 15ಕ್ಕೂ ನಾಯಕರಿಗೆ ಸಭೆಗೆ ಬರುವಂತೆ ತಿಳಿಸಲಾಗಿದೆ.

ಆಪರೇಷನ್‌ ಕಮಲವನ್ನು ವಿಫಲಗೊಳಿಸಿ, ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಸಂಪುಟ ವಿಸ್ತರಣೆ ಮಾಡಿದರೆ ಅಥವಾ ಮಾಡದೇ ಇದ್ದರೆ ಏನು ಆಗಲಿದೆ ಎಂಬ ಬಗ್ಗೆಯೂ ನಾಯಕರು ಚರ್ಚೆ ನಡೆಸಲಿದ್ದಾರೆ. ಈ ಹಂತದಲ್ಲಿ ಸಂಪುಟ ವಿಸ್ತರಣೆ ಮಾಡದೇ ಇದ್ದರೆ ಆಪರೇಷನ್ ಕಮಲಕ್ಕೆ ಶಾಸಕರು ಈಡಾಗುವುದು ಖಚಿತ ಎಂಬುದು ಬಹುತೇಕ ನಾಯಕರ ಅಭಿಪ್ರಾಯ. ಸಭೆಯಲ್ಲಿ ಚರ್ಚಿಸಿದ ಬಳಿಕವಷ್ಟೇ, ಈ ಕುರಿತು ಅಂತಿಮ ತೀರ್ಮಾನವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಂಜೆ 4 ಗಂಟೆ ಬಳಿಕ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಮೈತ್ರಿ ಸರ್ಕಾರದಲ್ಲಿನ ದೋಷಗಳು, ಜೆಡಿಎಸ್‌ನ ಕೆಲವು ಸಚಿವರು ಕಾಂಗ್ರೆಸ್ ಶಾಸಕರತ್ತ ನಿರ್ಲಕ್ಷ್ಯ ತಾಳಿರುವ ಕುರಿತು ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಕಂದಾಯ, ಪೊಲೀಸ್ ಹಾಗೂ ಎಂಜಿನಿಯರ್‌ಗಳ ವರ್ಗಾವಣೆ ಹಾಗೂ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಈ ವಿಷಯ ಕುರಿತು ಸಭೆಯಲ್ಲಿ ಚರ್ಚೆಯಾಗುವ ಸಂಭವ ಇದೆ ಎಂದು ಮೂಲಗಳು ಹೇಳಿವೆ.

ಆಡಿಯೊ; ಕಮಿಷನರ್‌ಗೆ ಕಾಂಗ್ರೆಸ್ ದೂರು

ಬಿಜೆಪಿ ನಾಯಕರು ‘ಆಪರೇಷನ್ ಕಮಲ’ಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಪಕ್ಷ ನಗರ ಪೊಲೀಸ್ ಕಮಿಷನರ್‌ ಸುನೀಲ್‌ ಕುಮಾರ್‌ ಅವರಿಗೆ ದೂರು ನೀಡಿದೆ.

‘ಬಿ.ಎಸ್‌. ಯಡಿಯೂರಪ್ಪ, ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿಕೊಂಡು ತಮ್ಮ ಪಕ್ಷದ ಶಾಸಕರಿಗೆ ₹25 ಕೋಟಿ ಆಮಿಷ ಒಡ್ಡಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಆಡಿಯೊ ಇದನ್ನು ಬಹಿರಂಗ ಪಡಿಸಿದೆ. ಅಂತರರಾಷ್ಟ್ರೀಯ ಮಟ್ಟದ ಸಹಕಾರ ಪಡೆದು ಸರ್ಕಾರ ಬೀಳಿಸುವ ತಂತ್ರ ನಡೆಸಿರುವುದು ಇದರಿಂದ ಬಯಲಾಗಿದೆ’ ಎಂದು ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯ ರಿಜ್ವಾನ್ ಅರ್ಷದ್‌ ದೂರಿನಲ್ಲಿ ತಿಳಿಸಿದ್ದಾರೆ.

ಪಂಚ ರಾಜ್ಯ ಫಲಿತಾಂಶ ನಿರ್ಣಾಯಕ

ಪಂಚರಾಜ್ಯಗಳ ಚುನಾವಣಾ ಫಲಿತಾಂಶವು ರಾಜ್ಯ ರಾಜಕೀಯದ ದಿಕ್ಕನ್ನು ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ.

ಈ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ ಆಗ ಕಾಂಗ್ರೆಸ್, ಜೆಡಿಎಸ್ ಶಾಸಕರು ತಾವಾಗಿಯೇ ಕಮಲದತ್ತ ಬರಲಿದ್ದಾರೆ. ಅಲ್ಲಿಯವರೆಗೆ ಕಾದು ನೋಡುವ ತಂತ್ರ ನಾಯಕರದ್ದಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಒಂದು ವೇಳೆ ಬಿಜೆಪಿಗೆ ಹಿನ್ನಡೆಯಾದರೆ, ಆಪರೇಷನ್ ಕಮಲ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಡಿ.11ರ ಬಳಿಕ ಏನೂ ಆಗಬಹುದು ಎಂಬ ತರ್ಕ ಬಿಜೆಪಿ ನಾಯಕರದ್ದಾಗಿದೆ.

* ಸಮ್ಮಿಶ್ರ ಸರ್ಕಾರ ನಡೆಸುತ್ತಿರುವವರೇ ಆಪರೇಷನ್‌ ಮಾಡ್ಕೊಂಡು ಹಾಳಾಗ್ತಾರೆ. ಅವರೇ ಸೆಲ್ಫ್‌ ಗೋಲ್‌ ಹೊಡೆದುಕೊಳ್ಳುತ್ತಾರೆ. ನಾವು ಗೋಲ್‌ ಹೊಡೆಯುವ ಅಗತ್ಯವಿಲ್ಲ

-ಜಗದೀಶ ಶೆಟ್ಟರ್‌, ಬಿಜೆಪಿ ಶಾಸಕ

* ಜನಾರ್ದನ ರೆಡ್ಡಿ, ಶ್ರೀರಾಮುಲು ರಹಸ್ಯ ಕಾರ್ಯಾಚರಣೆ ನಡೆಸುತ್ತಿರುವುದು ನಮಗೆ ಗೊತ್ತು. ಸುಧಾಕರ್ ಅವರನ್ನು ರೆಡ್ಡಿ ಭೇಟಿ ಮಾಡಿರುವುದು ಏಕೆ

-ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT