ಭಾನುವಾರ, ಸೆಪ್ಟೆಂಬರ್ 15, 2019
30 °C
15 ಸಚಿವರ ಪ್ರಮಾಣವಚನ ಸ್ವೀಕಾರ ಪಕ್ಕಾ: ಬೆಳಿಗ್ಗೆ 10.30ಕ್ಕೆ ರಾಜಭವನದಲ್ಲಿ ಸಮಾರಂಭ

ಸಚಿವ ಸಂಪುಟ ವಿಸ್ತರಣೆ: ‘ಅಮಿತ’ ರಹಸ್ಯ!

Published:
Updated:

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 25 ದಿನಗಳ ಬಳಿಕ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದ್ದು, ಸಚಿವರಾಗಿ ಯಾರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಗುಟ್ಟನ್ನು ಮಾತ್ರ ಪಕ್ಷದ ವರಿಷ್ಠರು ಬಿಟ್ಟು ಕೊಟ್ಟಿಲ್ಲ.

ಮಂಗಳವಾರ ಬೆಳಿಗ್ಗೆ 10.30ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಗದಿಯಾಗಿದೆ. ಆದರೆ, ಸಂಪುಟದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಮಾಹಿತಿ ಸೋಮವಾರ ರಾತ್ರಿಯವರೆಗೆ ಶಾಸಕರಿಗೂ ಗೊತ್ತಿರಲಿಲ್ಲ.

‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಪಟ್ಟಿ ಕಳುಹಿಸಿಕೊಡಲಿದ್ದಾರೆ. ಮಂಗಳವಾರ ಬೆಳಿಗ್ಗೆಯಷ್ಟೇ ಸಚಿವರಾಗುವವರ ಪಟ್ಟಿ ಬಹಿರಂಗವಾಗಲಿದೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಯಾರಿಗೆ ಸಚಿವರಾಗುವ ಭಾಗ್ಯ ಸಿಗಲಿದೆ ಎಂಬುದು ಖಚಿತವಾಗದೇ ಇದ್ದುದರಿಂದ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಅನೇಕ ಶಾಸಕರು ತಮಗೂ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಆದರೆ, ಯಾರೊಬ್ಬರಿಗೂ ಅವರು ಭರವಸೆ ಕೊಡಲಿಲ್ಲ ಎಂದು ಗೊತ್ತಾಗಿದೆ.

ಸಂಪುಟ ವಿಸ್ತರಣೆಗೆ ಮುನ್ನಾದಿನ ಹಿರಿಯ ಶಾಸಕರ ಜತೆ ಯಡಿಯೂರಪ್ಪ ಸಮಾಲೋಚನೆ ನಡೆಸಿದರು. ‘ಅಮಿತ್ ಶಾ ಅವರಿಗೆ ಪಟ್ಟಿ ಕೊಟ್ಟು ಬಂದಿದ್ದೇನೆ. ಅವರು ಸೂಚಿಸಿದವರು ಮಾತ್ರ ಸಂಪುಟ ಸೇರಲಿದ್ದಾರೆ. ನನ್ನ ಕೈಲಾಗುವ ಯತ್ನ ಮಾಡಿದ್ದೇನೆ. ಒಂದು ವೇಳೆ ಅವಕಾಶ ಸಿಗದೇ ಇದ್ದರೆ ಉತ್ತಮ ಸರ್ಕಾರ ನೀಡಲು, ಪ್ರಧಾನಿ ಮೋದಿ ಕೈ ಬಲಪಡಿಸಲು ಎಲ್ಲರೂ ಒಮ್ಮತದಿಂದ ಕೆಲಸ ಮಾಡಬೇಕು. ವರಿಷ್ಠರ ತೀರ್ಮಾನವೇ ಅಂತಿಮ ಎಂದು ಹೇಳಿ ಎಲ್ಲರನ್ನೂ ಸಮಾಧಾನ ಪಡಿಸುವ ಯತ್ನ ಮಾಡಿದರು’ ಎಂದು ಮೂಲಗಳು ತಿಳಿಸಿವೆ.

‘ಯಾರು ಸಂ‍ಪುಟಕ್ಕೆ ಸೇರಲಿದ್ದಾರೆ ಎಂಬುದು ಯಡಿಯೂರಪ್ಪನವರಿಗೆ ಗೊತ್ತಿದೆ. ಒತ್ತಡ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ವರಿಷ್ಠರ ಕಡೆ ಕೈತೋರಿಸುತ್ತಿದ್ದಾರೆ. ಕೊನೆ ಕ್ಷಣದವರೆಗೂ ಮಾಹಿತಿ ಬಿಟ್ಟುಕೊಡದಂತೆ ಅವರಿಗೂ ಸೂಚನೆ ಇದೆ’ ಎಂದು ಬಿಜೆಪಿಯ ಹಿರಿಯ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಲು ನೆರವಾಗಿ ಅನರ್ಹಗೊಂಡಿರುವ 17 ಶಾಸಕರ ಪೈಕಿ 12 ಜನರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಅವರಿಗೆ ಕೊಟ್ಟಿದ್ದ ವಾಗ್ದಾನವನ್ನು ಉಳಿಸಿಕೊಂಡಿದ್ದೇವೆ ಎಂಬ ವಿಶ್ವಾಸ ಮೂಡುವಂತೆ ಮಾಡಲು ಎಲ್ಲ ಸ್ಥಾನಗಳನ್ನೂ ಭರ್ತಿ ಮಾಡುತ್ತಿಲ್ಲ. ಅನರ್ಹರ ಪ್ರಕರಣ ಇತ್ಯರ್ಥವಾಗದೇ ಇದ್ದರೆ, ಆರು ತಿಂಗಳು ಬಿಟ್ಟು ಮತ್ತೊಮ್ಮೆ ವಿಸ್ತರಣೆಯಾಗಲಿದೆ. ಆಗ ಮತ್ತಷ್ಟು ಸಂಖ್ಯೆಯ ಹೊಸಬರಿಗೆ ಅವಕಾಶ ಸಿಗಲಿದೆ’ ಎಂದೂ ಅವರು ಹೇಳಿದರು.

ಪ್ರಾತಿನಿಧ್ಯದ ಲೆಕ್ಕಾಚಾರವೇನು?

ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ಪಕ್ಷದ ಸಂಘಟನೆಗೆ ಪೂರಕವಾಗಿ ಸರ್ಕಾರ ನಡೆಯಬೇಕು ಎಂಬ ಲೆಕ್ಕಾಚಾರದಲ್ಲಿ ಸಚಿವಗಿರಿ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಭ್ರಷ್ಟಾಚಾರದ ಕಳಂಕವೇ ಸುತ್ತಿಕೊಂಡಿತ್ತು. ಅನೇಕರು ಜೈಲುವಾಸ ಅನುಭವಿಸಿದ್ದರು. ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಇರುವ ವರ್ಚಸ್ಸು ಕರ್ನಾಟಕದಲ್ಲೂ ಮುಂದುವರಿಯಬೇಕು ಎಂಬ ಕಾರಣಕ್ಕೆ ಈ ಬಾರಿ ಎಚ್ಚರಿಕೆಯ ನಡೆ ಇಡಲಾಗಿದೆ. ಹೀಗಾಗಿಯೇ, ಯಡಿಯೂರಪ್ಪ ಹೇಳಿದವರಿಗೆಲ್ಲ ಸಚಿವ ಸ್ಥಾನ ಸಿಗುವುದು ಕಷ್ಟ. ಸರ್ಕಾರ ಸಮರ್ಥಿಸಲು ಅನುಭವಸ್ಥರು ಇರಬೇಕು ಎಂಬ ಕಾರಣಕ್ಕೆ ಈ ಹಿಂದೆ ಸಚಿವರಾಗಿದ್ದ ಕೆಲವರಿಗೆ ಅವಕಾಶ ಸಿಗಬಹುದು. ಆದರೆ, ಅವರೆಲ್ಲರ ಮೇಲೂ ವರಿಷ್ಠರ ಕಣ್ಣು ಇರಲಿದೆ. ಹಿಂದಿನ ಅನಾಹುತಗಳು ಈಗ ಮರುಕಳಿಸದಂತೆ ನೋಡಿಕೊಳ್ಳುವುದು ಅಮಿತ್ ಶಾ ಉದ್ದೇಶ ಎಂದು ಮೂಲಗಳು ವಿವರಿಸಿವೆ. 

* ಅಮಿತ್ ಶಾ ಮರ್ಜಿಯಲ್ಲಿ ಯಡಿಯೂರಪ್ಪ ಇರುವುದರಿಂದ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ

-ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ

* ಸಂಪುಟ ವಿಸ್ತರಣೆ ಹಾಗೂ ನೆರೆ ಪರಿಸ್ಥಿತಿ ನಿಭಾಯಿಸಲು ಪರದಾಡುತ್ತಿರುವ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Post Comments (+)