ಗುರುವಾರ , ಡಿಸೆಂಬರ್ 12, 2019
25 °C

ಕಾರು– ಲಾರಿ ಡಿಕ್ಕಿ; ಒಂದೇ ಕುಟುಂಬದ 6 ಜನರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿಪ್ಪಾಣಿ: ಇಲ್ಲಿಗೆ ಸಮೀಪದ ಸ್ತವನಿಧಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಹಿಳೆಯರು, ಒಂದು ಮಗು ಸೇರಿದಂತೆ ಒಂದೇ ಕುಟುಂಬದ ಆರು ಜನರು ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರದ ಕೋಲ್ಹಾಪುರ ಜಿಲ್ಲೆಯ ಮುರಗುಡ್‌ ಪಟ್ಟಣದ ದಿಲಾವರಖಾನ್‌ ಬಾಪುಸಾಹೇಬ ಜಮಾದಾರ (60), ರೆಹಾನಾ ದಿಲಾವರ ಜಮಾದಾರ (55), ಮೊಶಿನ್‌ ದಿಲಾವರ ಜಮಾದಾರ (35), ಆಫ್ರೀನ್ ಮೊಶಿನ್ ಜಮಾದಾರ (34), ಜುನೇದಖಾನ್ ದಿಲಾವರ ಜಮಾದಾರ (30), ಆಯಾನ್ ಮೊಸಿನ್ ಜಮಾದಾರ (4) ಸಾವಿಗೀಡಾದವರು.

ತಮಿಳುನಾಡಿನ ಕಡಲೂರು ಜಿಲ್ಲೆಯ ಪಂಡರುಟ್ಟಿಯ ಲಾರಿ ಚಾಲಕ ಒಯ್ಯಾಪುರಿ (45) ಮತ್ತು ಕ್ಲೀನರ್‌ ಮೋಹನ ರಾಜವೆಲ್ (31) ಗಾಯಗೊಂಡಿದ್ದಾರೆ. ಒಯ್ಯಾಪುರಿ ಅವರನ್ನು ಕೋಲ್ಹಾಪುರ ಆಸ್ಪತ್ರೆಗೆ ಹಾಗೂ ಮೋಹನ ಅವರನ್ನು ನಿಪ್ಪಾಣಿಯ ಎಂಜಿಎಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಟೈಲ್ಸ್ ತುಂಬಿಕೊಂಡ ಲಾರಿ ಬೆಂಗಳೂರಿನಿಂದ ಕೋಲ್ಹಾಪುರ ಕಡೆ ಹೊರಟಿತ್ತು. ಜಮಾದಾರ ಕುಟುಂಬವು ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗಲು ಬೆಳಗಾವಿಯತ್ತ ಹೊರಟಿದ್ದರು. ಸ್ತವನಿಧಿ ಘಟ್ಟದಿಂದ ಇಳಿಯುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಕಾರಿಗೆ ಡಿಕ್ಕಿ ಹೊಡೆದಿದೆ.

ಕಾರನ್ನು ಸುಮಾರು 500-600 ಅಡಿಗಳವರೆಗೆ ಎಳೆಯುತ್ತ ಸರ್ವೀಸ್‌ ರಸ್ತೆ ದಾಟಿ ಬಿದ್ದಿದೆ. ಅಪಘಾತದಲ್ಲಿ ಎರಡೂ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದರು.

ನಾಮಕರಣ ಕಾರ್ಯಕ್ರಮಕ್ಕೆ ಹೊರಟವರು: ಜುನೇದಖಾನ ಮಗಳ ನಾಮಕರಣ ಕಾರ್ಯಕ್ರಮಕ್ಕೆ ಬೆಳಗಾವಿ ಸಮೀಪದ ಸಾಂಬ್ರಾಕ್ಕೆ ಜಮಾದಾರ ಕುಟುಂಬಸ್ಥರು ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಶಹರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು