ಮಂಗಳವಾರ, ಜನವರಿ 28, 2020
19 °C

ಬಾಬರಿ ಧ್ವಂಸ ಪ್ರಕರಣದ ಅಣಕು ಪ್ರದರ್ಶನ: ಪ್ರಭಾಕರ ಭಟ್ ವಿರುದ್ಧ ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಟ್ವಾಳ: ಇಲ್ಲಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ರಾತ್ರಿ ನಡೆದ ಹೊನಲು ಬೆಳಕಿನ ವಾರ್ಷಿಕ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಅಯೋಧ್ಯೆ ಹೋರಾಟ ಮತ್ತು ಬಾಬರಿ ಮಸೀದಿ ಧ್ವಂಸಗೊಳಿಸಿದ ಅಣಕು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಪ್ರಮುಖರಾದ ಶಾಲಾ ಸಂಸ್ಥಾಪಕ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಮತ್ತು ನಾಲ್ವರ ವಿರುದ್ಧ ದೂರು ದಾಖಲಾಗಿದೆ. 

ಆಡಳಿತ ಮಂಡಳಿ ಅಧ್ಯಕ್ಷ ಬಿ. ನಾರಾಯಣ ಸೋಮಮಾಜಿ, ಸಂಚಾಲಕ ವಸಂತ ಮಾಧವ, ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರ್‌ಕಟ್ಟೆ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯ ಚೆನ್ನಪ್ಪ ಆರ್. ಕೋಟ್ಯಾನ್ ದೂರು ದಾಖಲಾದ ಇತರ ನಾಲ್ವರು.

ಅಣಕು ಪ್ರದರ್ಶನದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪಿಎಫ್‌ಐ ಕಲ್ಲಡ್ಕ ವಲಯ ಅಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ದೂರು ನೀಡಿದ್ದರು.

ಈ ದೂರಿನ ಆಧಾರದಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆ 295ಎ (ಧರ್ಮವನ್ನು ಅವ ಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ) ಮತ್ತು 298 (ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶಪೂರ್ವಕ ಘೋಷಣೆಗಳು) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುನರುಚ್ಛಾರ: ‘ಶಾಲಾ ಕಾರ್ಯಕ್ರಮದಲ್ಲಿ ಬಾಬರಿ ಮಸೀದಿ ಧ್ವಂಸದ ಅಣಕು ಪ್ರದರ್ಶನ ಕುರಿತಂತೆ ಇನ್ನೂ ವರದಿ ಬಂದಿಲ್ಲ. ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪುನರುಚ್ಛರಿಸಿದರು.

ಬಂಟ್ವಾಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಕಾರ್ಯಕ್ರಮದಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳು ಇರಲಿಲ್ಲ. ಹೀಗಾಗಿ, ಇನ್ನಷ್ಟೇ ವರದಿ ತರಿಸಿಕೊಳ್ಳಬೇಕಿದೆ’ ಎಂದು ಸಮಜಾಯಿಷಿ ನೀಡಿದರು. 

‘ಘಟನೆ ಬಗ್ಗೆ ನಮಗೆ ಯಾವುದೇ ಆದೇಶ ಅಥವಾ ಖಾಸಗಿ ದೂರುಗಳು ಬಂದಿಲ್ಲ. ಬಂದರೆ ಪರಿಶೀಲಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಾಟರ್ ಡಿಮೆಲ್ಲೊ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುದುಚೇರಿ ಲೆಫ್ಟಿನೆಂಟ್ ಗವರ್ನರ್‌ ಕಿರಣ್ ಬೇಡಿ ಪಾಲ್ಗೊಂಡ ಕಾರ್ಯಕ್ರಮದಲ್ಲೇ ಇಂತಹ ಪ್ರದರ್ಶನ ನಡೆದಿದ್ದು, ಈ ಬಗ್ಗೆ ರಾಷ್ಟ್ರಪತಿಗೆ ದೂರು ನೀಡಲಾಗುವುದು’ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ.

ತೀವ್ರ ಖಂಡನೆ: ಅಣಕು ಪ್ರದರ್ಶನವನ್ನು ಜಮಾಅತೆ ಇಸ್ಲಾಮಿ ಹಿಂದ್, ಮುಸ್ಲಿಂ ಒಕ್ಕೂಟ, ಎಸ್‌ಡಿಪಿಐ
ಮತ್ತಿತರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು