ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ | ಆಫ್ರಿಕನ್‍ ಕ್ಯಾಟ್‍ ಫಿಶ್‍ ವಹಿವಾಟು ನಿರಾತಂಕ

ಗೋಮಾಳ ಒತ್ತುವರಿ ಮಾಡಿ ಸಾಕಣೆ, ಕ್ರಮಕ್ಕೆ ಪ್ರಭಾವಿಗಳಿಂದ ತಡೆ: ಆರೋಪ
Last Updated 27 ಏಪ್ರಿಲ್ 2020, 22:07 IST
ಅಕ್ಷರ ಗಾತ್ರ

ಹರಿಹರ:ತಾಲ್ಲೂಕಿನ ಮಳಲಹಳ್ಳಿಯಲ್ಲಿ ಖಾಸಗಿ ಜಮೀನು ಹಾಗೂ ಸರ್ಕಾರಿ ಗೋಮಾಳದಲ್ಲಿ ನಿಷೇಧಿತ ಆಫ್ರಿಕನ್‍ ಕ್ಯಾಟ್‍ ಫಿಶ್‍ ಸಾಕಣೆ ಮತ್ತು ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.

ಕಡಿವಾಣ ಹಾಕಲು ಕೆಲ ಅಧಿಕಾರಿಗಳು ಮುಂದಾದರೂ ಜನಪ್ರತಿನಿಧಿಗಳ ಒತ್ತಡ ಅಡ್ಡಿ ಆಗುತ್ತಿದೆ. ಈ ತಳಿಯ ಮೀನು ಸಾಕಣೆ, ಮಾರಾಟವನ್ನು ಹಸಿರು ನ್ಯಾಯಮಂಡಳಿ ನಿಷೇಧಿಸಿದೆ.

ಚಿಂತಾಮಣಿ ಮೂಲದ ಇರ್ಫಾನ್‍ ಖಾನ್‍ ಈ ವಹಿವಾಟಿನ ರೂವಾರಿ. ಚಿಂತಾಮಣಿಯಲ್ಲಿ ಕಾನೂನು ತೊಡಕು ಎದುರಾದ ನಂತರ ಪರ್ಯಾಯ ಸ್ಥಳ ಅರಸುತ್ತಿದ್ದು, ತಾಲ್ಲೂಕಿನ ನದಿ ಪಾತ್ರದ ಮರಳಹಳ್ಳಿಯಲ್ಲಿ ಆರಂಭಿಸಿದ್ದಾನೆ.

ಗ್ರಾಮದಲ್ಲಿ ಖಾಸಗಿ ಜಮೀನನ್ನು ಒಪ್ಪಂದ ಆಧಾರದಲ್ಲಿ ಪಡೆದಿದ್ದು, ಇದರ ಪಕ್ಕದಲ್ಲಿದ್ದಸರ್ವೆ ನಂ.18ರ 6 ಎಕರೆ ಗೋಮಾಳದ ಕೆಲ ಭಾಗವನ್ನೂ ಒತ್ತುವರಿ ಮಾಡಿದ್ದು ಮೀನು ಸಾಕಣೆಗೆ 9-10 ದೊಡ್ಡ ಹೊಂಡಗಳನ್ನು ನಿರ್ಮಿಸಲಾಗಿದೆ.

ಈಚೆಗೆ ಅಧಿಕಾರಿಗಳು ಮೀನುಸಾಕಣೆ, ಮಾರಾಟಕ್ಕೆ ಅಂತ್ಯ ಹಾಡಲು ಮುಂದಾಗಿದ್ದರು. ಶಾಸಕಸೇರಿ ತಾಲ್ಲೂಕಿನ ಹಲವು ರಾಜಕಾರಣಿಗಳು ಇದರ ವಿರುದ್ಧ ಪ್ರಭಾವ ಬೀರುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ. (ಶಾಸಕ ಎಸ್.ರಾಮಪ್ಪ ಸ್ಥಳೀಯರೊಬ್ಬರ ಜೊತೆ ಮಾತನಾಡಿರುವ ಧ್ವನಿ ಮುದ್ರಿಕೆ ‘ಪ್ರಜಾವಾಣಿ’ಗೆ ಸಿಕ್ಕಿದೆ).

ಗೋಮಾಳ ಒತ್ತುವರಿ ಮಾಡಿಕೊಂಡು ಚಟುವಟಿಕೆ ನಡೆಸುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ರೈತ ಮುಖಂಡ ಬೇವಿನಹಳ್ಳಿ ಮಹೇಶ್‍ ಆಗ್ರಹಿಸಿದ್ದಾರೆ.

ಆಫ್ರಿಕನ್‍ ಕ್ಯಾಟ್‍ ಫಿಶ್‍ ನಿಷೇಧ ಏಕೆ?
ಆಫ್ರಿಕನ್‍ ಕ್ಯಾಟ್‍ ಫಿಶ್‍ ಮಾಂಸಾಹಾರಿ ಪ್ರಜಾತಿ ಮೀನು. ವೇಗವಾಗಿ ಬೆಳೆಯುವ ಹಾಗೂ ವಂಶಾಭಿವೃದ್ಧಿ ಸಾಮರ್ಥ್ಯ ಹೊಂದಿದೆ. ಈ ತಳಿಯ ಮೀನು ಬೆಳೆಯುವ ಪ್ರದೇಶದಲ್ಲಿ ಸ್ಥಳೀಯ ತಳಿಗಳ ಮೀನುಗಳು ಬದುಕುವುದಿಲ್ಲ. ಈ ಮೀನು ಮಲಿನ ನೀರಿನಲ್ಲೂ ಜೀವಿಸುವ ಕ್ಷಮತೆ ಹೊಂದಿದೆ.ಈ ತಳಿಯಲ್ಲಿ ಪಾದರಸದ ಅಂಶ ಹೆಚ್ಚಾಗಿದೆ. ಇದನ್ನು ಆಹಾರವಾಗಿ ಸೇವಿಸುವರು ಚರ್ಮ, ಹೃದಯ ಸಂಬಂಧಿತ ರೋಗಗಳಿಗೆ ತುತ್ತಾಗುತ್ತಾರೆ. ಇದೇ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‍ಜಿಟಿ) ಈ ತಳಿಯ ಮೀನು ಸಾಕಣೆಯನ್ನು ದೇಶದಲ್ಲಿ ನಿಷೇಧಿಸಿದೆ.

*
ಆಫ್ರಿಕನ್‍ ಕ್ಯಾಟ್‍ ಫಿಶ್ ಸಾಕಣೆಗೆ ಎನ್‍ಜಿಟಿ ನಿಷೇಧ ಹೇರಿದೆ. ಈ ಮೀನು ಕೆರೆ ಅಥವಾ ನದಿಗೆ ಸೇರಿದರೆ, ಅಲ್ಲಿನ ಜಲಚರಗಳ ಪ್ರಜಾತಿ ನಾಮಾವಶೇಷವಾಗಲಿaದೆ.
-ಗಣೇಶ, ಹಿರಿಯ ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT