ಶುಕ್ರವಾರ, ನವೆಂಬರ್ 15, 2019
20 °C

ಅಸಮಾಧಾನಗೊಂಡ ಶಾಸಕರೊಂದಿಗೆ ವರಿಷ್ಠರು ಮಾತನಾಡಲಿ

Published:
Updated:

ಧಾರವಾಡ: ‘ಜೆಡಿಎಸ್‌ನ ಕೆಲ ಶಾಸಕರು ಪಕ್ಷದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುತ್ತಿದ್ದು, ವರಿಷ್ಠರು ಮಧ್ಯಪ್ರವೇಶಿಸಿ ಸಮಾಲೋಚನೆ ನಡೆಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಅಂಗವಾಗಿ ಶುಕ್ರವಾರ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜಿ.ಟಿ. ದೇವೇಗೌಡರು ಎಲ್ಲಿಗೆ ಹೋಗುತ್ತಾರೆ ಎನ್ನುವುದು ಗೊತ್ತಿಲ್ಲ. ಆದರೆ, ಪಕ್ಷದಲ್ಲಂತೂ ಅವರು ಇರುವುದಿಲ್ಲ. ಅವರಿಗೆ ಈ ಮೊದಲೇ ಅಸಮಾಧಾನವಿತ್ತು. ಆಗಲೇ ಅವರು ಉಸಿರುಗಟ್ಟುವ ವಾತಾವರಣ ಇದೆ ಎಂದಿದ್ದರು. ಇವರಂತೆಯೇ ಅಸಮಾಧಾನಗೊಂಡಿರುವವರೊಂದಿಗೆ ಸಮಾಲೋಚನೆ ನಡೆಸಿ ಸಮಾಧಾನಪಡಿಸಿದರೆ ಮಾತ್ರ ಪಕ್ಷಕ್ಕೆ ಭವಿಷ್ಯ’ ಎಂದರು.

‘ಸರ್ಕಾರ ಅಧಿಕಾರದಲ್ಲಿದ್ದಾಗ ನಮ್ಮನ್ನೆಲ್ಲಾ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಬಹಳಷ್ಟು ಶಾಸಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಬಹುಷಃ ಅವರ ಒಳಗಿದ್ದ ಅಸಮಾಧಾನ ಈಗ ಸ್ಫೋಟಗೊಳ್ಳುತ್ತಿದೆ ಎಂದೆನಿಸುತ್ತಿದೆ. ನಾನು ಪಕ್ಷದ ಕುರಿತು ಶಿಸ್ತಿನಲ್ಲಿರುವ ಕಾರಣ, ನನಗಾಗಿರುವ ನೋವನ್ನು ನಾನು ಹೇಳಿಕೊಂಡಿಲ್ಲ’ ಎಂದರು.

‘ಸದ್ಯ ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರಕಾರದಲ್ಲಿ ಅನುಭವಿ ನಾಯಕರ ಕೊರತೆ ಇದೆ. ಮಂತ್ರಿಗಳಾಗಿ ಕಾನೂನು ಪ್ರಕಾರ ಕೆಲಸ ಮಾಡಿದರೆ ಸಾಕು, ಆದರೆ ಅವರಲ್ಲಿರುವ ಇಚ್ಛಾಶಕ್ತಿಯ ಕೊರತೆಯಿಂದ ಅದೂ ಆಗುತ್ತಿಲ್ಲ. ಹೀಗಾಗಿ ಎಲ್ಲೆಡೆ ಸರ್ಕಾರ ಕುರಿತು ಅಸಮಾಧಾನ ವ್ಯಕ್ತವಾಗುತ್ತಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊರತುಪಡಿಸಿದರೆ, ಉಳಿದವರು ನಿರೀಕ್ಷಿತಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)