20 ಅಧಿಕಾರಿಗಳ ವಿರುದ್ಧ ಚಾರ್ಜ್ಶೀಟ್

ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿಗೆ ಸಹಕಾರ ನೀಡಿದ ಆರೋಪದಲ್ಲಿ ಎಂಟು ನಿವೃತ್ತ ಎಂಜಿನಿಯರ್ಗಳು ಸೇರಿದಂತೆ 20 ಎಂಜಿನಿಯರ್ಗಳ ವಿರುದ್ಧ ನಗರಾಭಿವೃದ್ಧಿ ಇಲಾಖೆ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಹೊರಡಿಸಿದೆ.
ರೂಪೇನ ಅಗ್ರಹಾರ, ನ್ಯಾನಪ್ಪನಹಳ್ಳಿ, ಬಿಲೇಕಹಳ್ಳಿ ರಾಜಕಾಲುವೆ ಹಾಗೂ ಕಸವನಹಳ್ಳಿ ಕೆರೆಯ ಮೀಸಲು ಪ್ರದೇಶದಲ್ಲಿ ಮನೆಗಳು ಹಾಗೂ ಅಪಾರ್ಟ್ಮೆಂಟ್ ಸಮುಚ್ಚಯಗಳ ನಿರ್ಮಾಣಕ್ಕೆ ಕಾನೂನುಬಾಹಿರವಾಗಿ ನಕ್ಷೆ ಮಂಜೂರಾತಿ ಹಾಗೂ ಸ್ವಾಧೀನ ಪ್ರಮಾಣಪತ್ರ ನೀಡಿರುವ ಆರೋಪ ಈ ಅಧಿಕಾರಿಗಳ ಮೇಲಿದೆ. ಆಗಸ್ಟ್ 25ರಂದು ಚಾರ್ಜ್ಶೀಟ್ ಹೊರಡಿಸಲಾಗಿದ್ದು, ಅದರ ಪ್ರತಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. ಈ ಪೈಕಿ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಟಿ.ಮೋಹನಕೃಷ್ಣ ಹಾಗೂ ಸಹಾಯಕ ಎಂಜಿನಿಯರ್ ಎಂ.ವಿ. ಗುರುಪ್ರಸಾದ್ ಈಗಾಗಲೇ ಅಮಾನತು ಆಗಿದ್ದಾರೆ.
ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಲ್ಲೇಖಿಸಲಾ
ಗಿದೆ. ‘ಈ ಅಧಿಕಾರಿಗಳು 1966ರ ಸರ್ಕಾರಿ ನೌಕರರ (ನಡತೆ) ನಿಯಮಾವಳಿ ನಿಯಮ 3ನ್ನು ಉಲ್ಲಂಘಿಸಿ ಕರ್ತವ್ಯಲೋಪ ಎಸಗಿದ್ದಾರೆ. ಅವರ ಸಿವಿಲ್ ದಾವೆ ಹೂಡಲಾಗುತ್ತದೆ. ಹಿಂಬಡ್ತಿ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಏನಿದು ಪ್ರಕರಣ?: ನಗರದಲ್ಲಿ 2016ರ ಸೆಪ್ಟೆಂಬರ್ನಲ್ಲಿ ಸುರಿದ ಅರ್ಧ ಗಂಟೆಯ ಮಳೆಗೆ ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ರಾಜಕಾಲುವೆಗಳು ಉಕ್ಕಿ ಹರಿದು ರಸ್ತೆಗಳೆಲ್ಲ ನದಿಗಳಾಗಿದ್ದವು. ಅದರ ಬೆನ್ನಲ್ಲೇ, ಬಿಬಿಎಂಪಿಯು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿತ್ತು. ಮುಖ್ಯ ಕಾರ್ಯದರ್ಶಿ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿತ್ತು. ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದರಿಂದ ಹಾಗೂ ಕಾಲುವೆಗಳನ್ನು ಸ್ಥಳಾಂತರ ಮಾಡಿದ್ದರಿಂದ ನೀರಿನ ಸಹಜ ಹರಿವಿಗೆ ತಡೆ ಉಂಟಾಗಿರುವುದು ತಂಡದ ಗಮನಕ್ಕೆ ಬಂದಿತ್ತು. ಬಿಬಿಎಂಪಿ ಅಧಿಕಾರಿಗಳು ಕಾನೂನುಬಾಹಿರವಾಗಿ ನಕ್ಷೆ ಮಂಜೂರಾತಿ ಮಾಡಿ, ಸ್ವಾಧೀನ ಪ್ರಮಾಣ ನೀಡಿ, ಮನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದು ಬೆಳಕಿಗೆ ಬಂದಿತ್ತು.
ನೆರೆ ಹಾವಳಿ ಬೆನ್ನಲ್ಲೇ ಸಭೆ ನಡೆಸಿದ್ದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಪ್ರಾಥಮಿಕ ವರದಿ ಸಲ್ಲಿಸಿ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆಯೂ ಸೂಚಿಸಿದ್ದರು. ಅದರ ಪ್ರಕಾರ ಬಿಬಿಎಂಪಿ ಆಯುಕ್ತರು ಅಧಿಕಾರಿಗಳ ವಿರುದ್ಧ ಬಿಎಂಟಿಎಫ್ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಕ್ರಿಮಿನಲ್ ಪ್ರಕರಣ ಕೈಬಿಡಬೇಕು ಎಂದು ಕೋರಿ ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಕ್ರಿಮಿನಲ್ ಪ್ರಕರಣ ದಾಖಲಿಸದಂತೆ ಹೈಕೋರ್ಟ್ ಸೂಚಿಸಿತ್ತು.
ಇನ್ನೊಂದೆಡೆ, ಕ್ರಿಮಿನಲ್ ಪ್ರಕರಣದ ತನಿಖೆ ನಡೆಸಿದ್ದ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಅಧಿಕಾರಿಗಳು ಇತ್ತೀಚೆಗೆ ಬಿ–ವರದಿ ಸಲ್ಲಿಸಿದ್ದರು. ‘ತಪ್ಪು ತಿಳಿವಳಿಕೆಯಿಂದ ದೂರು ನೀಡಲಾಗಿದೆ’ ಎಂದೂ ಷರಾ ಬರೆದಿದ್ದರು. ಮುಖ್ಯಮಂತ್ರಿ ಸೂಚನೆ ನೀಡಿದ ಎರಡು ವರ್ಷಗಳ ನಂತರ ಚಾರ್ಜ್ಶೀಟ್ ಸಿದ್ಧವಾಗಿದೆ.
****
ಆರೋಪ ಎದುರಿಸುತ್ತಿರುವ ಅಧಿಕಾರಿಗಳು
ಡಿ.ಸತ್ಯನಾರಾಯಣ, ಎಂಜಿನಿಯರಿಂಗ್ ಸದಸ್ಯ (ನಿವೃತ್ತ), ಜೆ.ಜೆ.ನಾಯಕ್, ನಗರ ಯೋಜನಾ ಸದಸ್ಯ (ನಿವೃತ್ತ), ಎಂ.ಎನ್.ಶಂಕರ್ ಭಟ್, ಕಾನೂನು ಅಧಿಕಾರಿ (ನಿವೃತ್ತ), ಬಿಡಿಎ: ರೂಪೇನ ಅಗ್ರಹಾರ ಸರ್ವೆ ಸಂಖ್ಯೆ 16/2ರಲ್ಲಿ ಅನ್ಸಾಲ್ ಫೋರ್ಟೆ ಕಟ್ಟಡ ಪರವಾನಗಿಗೆ 1995ರಲ್ಲಿ ಅನುಮೋದನೆ ನೀಡಲಾಗಿತ್ತು.1998ರಲ್ಲಿ ಪರಿಷ್ಕರಿಸಿ ಅನುಮೋದನೆ ನೀಡಲಾಗಿತ್ತು. 2003ರಲ್ಲಿ ಬಿಡಿಎ ಸ್ವಾಧೀನ ಪ್ರಮಾಣಪತ್ರ ನೀಡಿತ್ತು. ಈ ಪ್ರದೇಶದಲ್ಲಿ ಬೃಹತ್ ರಾಜಕಾಲುವೆ ಇದ್ದು, ಅದನ್ನು ಗಮನದಲ್ಲಿಟ್ಟುಕೊಳ್ಳದೇ ನಕ್ಷೆ ಮಂಜೂರಾತಿ ನೀಡಲಾಗಿತ್ತು.
ಬಿ.ಟಿ.ಮೋಹನಕೃಷ್ಣ, ಕಾರ್ಯನಿರ್ವಾಹಕ ಎಂಜಿನಿಯರ್, ಆರ್.ವಿ.ಗೋವಿಂದರಾಜು, ಮುಖ್ಯ ಎಂಜಿನಿಯರ್, ಎಂ.ವಿ.ಗುರುಪ್ರಸಾದ್, ಸಹಾಯಕ ಎಂಜಿನಿಯರ್, ಬಿಬಿಎಂಪಿ, ಚೌಡೇಗೌಡ, ಹೆಚ್ಚುವರಿ ನಿರ್ದೇಶಕರು (ನಗರ ಯೋಜನೆ, ನಿವೃತ್ತ), ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಆರ್.ಕೆ.ಶಶಿಧರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ: ಪಾಲಿಕೆಯ ಉಪನಿರ್ದೇಶಕರಾಗಿದ್ದ (ನಗರ ಯೋಜನೆ) ಸಂದರ್ಭದಲ್ಲಿ ಹೊಸೂರು ರಸ್ತೆಯ ರೂಪೇನ ಅಗ್ರಹಾರ ಖಾತಾ ಸಂಖ್ಯೆ 158/145/141/81/78/16/1ಎ/18 ಸ್ವತ್ತಿನಲ್ಲಿ ಇಎಪಿಎಲ್ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೀಸಲು ಪ್ರದೇಶವನ್ನು ಗಮನದಲ್ಲಿ ಇಟ್ಟುಕೊಳ್ಳದೇ ನಕ್ಷೆ ಮಂಜೂರಾತಿ ನೀಡಿದ್ದರು. ಗೋವಿಂದರಾಜು, ಗುರುಪ್ರಸಾದ್ ಹಾಗೂ ಶಶಿಧರ್ ಈ ಹಿಂದೆ ನಗರ ಯೋಜನೆಯ ಜಂಟಿ ನಿರ್ದೇಶಕರಾಗಿದ್ದರು.
ಗುರುಮೂರ್ತಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಮೊಹಮ್ಮದ್ ಅಬ್ದುಲ್ ಅಜೀಂ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ವೀರೇಂದ್ರನಾಥ್, ಹೆಚ್ಚುವರಿ ನಿರ್ದೇಶಕರು (ನಗರ ಯೋಜನೆ, ನಿವೃತ್ತಿ), ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, : ಬೊಮ್ಮನಹಳ್ಳಿ ವಲಯದ ಬೇಗೂರಿನ ನ್ಯಾನಪ್ಪನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 10/3ರಲ್ಲಿ ಭೂಮಾಲೀಕ ಕೆ.ಜೆ.ವೀವನ್ ಎಂಬುವರಿಗೆ ನಕ್ಷೆಗೆ ವ್ಯತಿರಿಕ್ತವಾಗಿ ವಸತಿ ಸಮುಚ್ಚಯ ನಿರ್ಮಾಣ ಮಾಡಲು ಮಂಜೂರಾತಿ ನೀಡಿದ್ದರು. ಇದು ರಾಜಕಾಲುವೆಯ ಮೀಸಲು ಪ್ರದೇಶ. ಗುರುಮೂರ್ತಿ ಅವರು ಈ ಹಿಂದೆ ಪಾಲಿಕೆಯ ನಗರ ಯೋಜನೆಯ ಹೆಚ್ಚುವರಿ ನಿರ್ದೇಶಕರಾಗಿದ್ದರು. ಮೊಹಮ್ಮದ್ ನಗರ ಯೋಜನೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದರು.
ಡಿ.ಎಸ್.ಸರ್ವೋತ್ತಮರಾಜ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ವಿಜಯಕುಮಾರ್ ಡಿ.ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, : ಬೊಮ್ಮನಹಳ್ಳಿ ವಲಯದಲ್ಲಿ ವಸತಿ ಸಮುಚ್ಚಯ ನಿರ್ಮಿಸಲು ಡಿ.ಲಕ್ಕಣ್ಣ ಹಾಗೂ ಡಿ.ಶಾಂತಾ ಎಂಬುವರಿಗೆ ಮಂಜೂರಾತಿ ನೀಡಿದ್ದರು. ಇದು ರಾಜಕಾಲುವೆಯ ಮೀಸಲು ಪ್ರದೇಶ. ಸರ್ವೋತ್ತಮರಾಜ್ ಹಾಗೂ ವಿಜಯಕುಮಾರ್ ಅವರು ಈ ಹಿಂದೆ ನಗರ ಯೋಜನೆ ಬೊಮ್ಮನಹಳ್ಳಿ ವಲಯದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು.
ಚೌಡೇಗೌಡ, ಹೆಚ್ಚುವರಿ ನಿರ್ದೇಶಕ, ಹೆಚ್ಚುವರಿ ನಿರ್ದೇಶಕ (ನಗರ ಯೋಜನೆ, ನಿವೃತ್ತ), ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಎಸ್.ಮೃತ್ಯುಂಜಯ, ಸೂಪರಿಂಟೆಂಡಿಂಗ್ ಎಂಜಿನಿಯರ್, ಲೋಕೋಪಯೋಗಿ ಇಲಾಖೆ,ಟಿ.ನಟರಾಜು, ಸೂಪರಿಂಟೆಂಡಿಂಗ್ ಎಂಜಿನಿಯರ್, ಬಿಬಿಎಂಪಿ, : ಬೊಮ್ಮನಹಳ್ಳಿ ವಲಯದ ಬಿಳೇಕಹಳ್ಳಿಯ ಖಾತಾ ಸಂಖ್ಯೆ 3604/50/1, 50/2, 52/1, 58, 59/1, 61/1ಎ ರ ಸ್ವತ್ತಿನ ಭೂಮಾಲೀಕರಿಗೆ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ನೀಡಿದ್ದರು. ಇದು ರಾಜಕಾಲುವೆಯ ಮೀಸಲು ಪ್ರದೇಶ. ಮೃತ್ಯುಂಜಯ ಹಾಗೂ ನಟರಾಜು ಅವರು ಈ ಹಿಂದೆ ನಗರ ಯೋಜನೆಯ (ಉತ್ತರ ವಲಯ) ಜಂಟಿ ನಿರ್ದೇಶಕರಾಗಿದ್ದರು.
ಲಿಯಾಖತ್, ಸಹಾಯಕ ನಿರ್ದೇಶಕ (ನಗರ ಯೋಜನೆ), ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಎಂ.ಎಲ್.ಮುನಿಕೃಷ್ಣ, ಮುಖ್ಯ ಎಂಜಿನಿಯರ್ (ನಿವೃತ್ತಿ), ಬಿಬಿಎಂಪಿ, ಪಿ.ಗಂಗಪ್ಪ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, (ನಿವೃತ್ತಿ), ಸುನಿತಾ, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ: ಮಹದೇವಪುರದ ಕಸವನಹಳ್ಳಿಯ ಖಾತೆ ಸಂಖ್ಯೆ 783/742, 752/714/2 (3) 772/732ರಲ್ಲಿರುವ ಕಸವನಹಳ್ಳಿ ಕೆರೆ ಹಾಗೂ ಕೈಕೊಂಡ್ರನಹಳ್ಳಿ ಕೆರೆಗಳ ಮಧ್ಯೆ ಶುಭಾ ಎನ್ಕ್ಲೇವ್ ಕಟ್ಟಡ ನಿರ್ಮಿಸಲು ನಕ್ಷೆ ಮಂಜೂರಾತಿ ನೀಡಲಾಗಿತ್ತು. ಇದು ಕೆರೆಯ ಮೀಸಲು ಪ್ರದೇಶ. ಲಿಯಾಖತ್, ಪಿ.ಗಂಗಪ್ಪ ಹಾಗೂ ಸುನಿತಾ ಅವರು ನಗರ ಯೋಜನೆಯ (ಮಹದೇವಪುರ ವಲಯ) ಸಹಾಯಕ ನಿರ್ದೇಶಕರಾಗಿದ್ದರು.
***
ಅಧಿಕಾರಿಗಳು ನಿಯಮಬಾಹಿರವಾಗಿ ಅನುಮತಿ ನೀಡಿದ್ದಾರೆ. ಅದಕ್ಕೆ ಅವರನ್ನು ಉತ್ತರದಾಯಿಗಳನ್ನಾಗಿ ಮಾಡಲಿದ್ದೇವೆ.
-ಮಹೇಂದ್ರ ಜೈನ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
***
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.